ಆಧುನಿಕ ತಂತ್ರಜ್ಞಾನಕ್ಕಿಂತ ‘ಕುಂಡಲಿ ಉತ್ತಮ’: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯ ಹೊಸ ಸಂಶೋಧನೆ!
ಹುಬ್ಬಳ್ಳಿ, ಮಾ. 10: ಕಂಪ್ಯೂಟರ್ ನೆರವಿನಿಂದ ನಮ್ಮ ಬುದ್ಧಿಮತ್ತೆಯ (ಎಐ) ಬಗ್ಗೆ ಹೇಳುವ ಆಧುನಿಕ ತಂತ್ರಜ್ಞಾನಕ್ಕಿಂತ ನಮ್ಮ ಪೂರ್ವಜರು ಬರೆಯುತ್ತಿದ್ದ ‘ಕುಂಡಲಿಗಳೇ ಉತ್ತಮ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಶನಿವಾರ ನಗರದ ಬಿವಿಬಿ ಕಾಲೇಜಿನಲ್ಲಿ ಆಯೋಜಿಸಿದ್ದ ಇ-ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎಐ ನಮ್ಮ ಸಂಪೂರ್ಣ ಮಾಹಿತಿಯನ್ನು ಕ್ರೋಡೀಕರಿಸಿ ಕೊಟ್ಟರೆ ಅದನ್ನು ಆಧುನಿಕ ತಂತ್ರಜ್ಞಾನ ಎಂದು ಒಪ್ಪಿಕೊಳ್ಳಬಹುದು. ಆದರೆ, ಜನ್ಮದಿನಾಂಕ, ಸಮಯ ಕೊಟ್ಟರೆ ಸಾಕು, ಆ ವ್ಯಕ್ತಿಯನ್ನೂ ನೋಡದೆ ಅವನ ವ್ಯಕ್ತಿತ್ವ, ಬಣ್ಣ, ನಿಲುವು, ಅವನ ಆರೋಗ್ಯ ಮತ್ತು ಅವನು ಯಾವಾಗ ಸಾಯುತ್ತಾನೆ ಎಂಬುದನ್ನು ನಮ್ಮ ‘ಕುಂಡಲಿ’ ಹೇಳುತ್ತದೆ. ಅದನ್ನು ನಾವು ಒಪ್ಪುವುದಿಲ್ಲ. ನಮಗೆ ಹಿತ್ತಲ ಗಿಡ ಮದ್ದಲ್ಲ ಎಂಬಂತಾಗಿದೆ ಎಂದು ವಿಶ್ಲೇಷಿಸಿದರು.
ಅಧ್ಯಾತ್ಮ ತಳಹದಿಯ ಶೂನ್ಯ: ಭಾರತ ಜಗತ್ತಿಗೆ ಶೂನ್ಯವನ್ನು ಕೊಡುಗೆಯಾಗಿ ನೀಡದೆ ಇದ್ದರೆ, ಜಗತ್ತಿನಲ್ಲಿ ಈ ರೀತಿಯ ತಾಂತ್ರಿಕ ಆವಿಷ್ಕಾರಗಳು ನಡೆಯುತ್ತಿರಲಿಲ್ಲ ಎಂದು ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ್ದಾರೆ. ಅದೆ ಈ ಮಾತನ್ನು ಅನಂತಕುಮಾರ ಹೆಗಡೆ ಹೇಳಿದ್ದರೆ, ಚಡ್ಡಿ ಹಾಕಿಕೊಂಡು ಹೇಳಿದ ಎಂದು ಲೇವಡಿ ಮಾಡುತ್ತಿದ್ದರು ಎಂದು ನುಡಿದರು.
ಭಾರತದ ಒಂದೊಂದು ಕೊಡುಗೆಯ ಹಿಂದೆಯೂ ಒಂದೊಂದು ತತ್ವಜ್ಞಾನವಿದೆ. ‘0’ ಬರೆಯುವಾಗ ನಾವು ಯಾವ ಬಿಂದುವಿನಿಂದ ಪ್ರಾರಂಭಿಸುತ್ತೇವೆಯೋ, ಅದೇ ಬಿಂದುವಿಗೆ ತಂದು ನಿಲ್ಲಿಸುತ್ತೇವೆ. ಎಲ್ಲಿ ಹುಟ್ಟುತ್ತೇವೆಯೋ, ಅಲ್ಲಿಯೇ ಸಾಯಬೇಕು, ಎಲ್ಲಿ ಪ್ರಾರಂಭವಾಗುತ್ತದೆಯೋ, ಅದು ಅಲ್ಲಿಯೇ ಮುಕ್ತಾಯವಾಗಬೇಕು ಎಂಬ ಅಧ್ಯಾತ್ಮ ತತ್ವ ಇದರ ಹಿಂದೆ ಇದೆ ಎಂದು ಹೆಗಡೆ ತಮ್ಮದೆ ದಾಟಿಯಲ್ಲಿ ಹೇಳಿದರು.