×
Ad

ವಿಜಯಪುರ: ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಆರೋಪಿ ಶಶಿ ಮುಂಡೆವಾಡಿಗೆ ಗುಂಡೇಟು

Update: 2018-03-10 21:08 IST

ವಿಜಯಪುರ, ಮಾ.10: ಸುಪಾರಿ ಹತ್ಯೆ ಆರೋಪ ಪ್ರಕರಣದ ಪ್ರಮುಖ ಆರೋಪಿ ಶಶಿ ಮುಂಡೆವಾಡಿ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ವಿಜಯಪುರದ ಇಂಡಿ ತಾಲೂಕಿನ ಬರಡೋಲ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.

ಘಟನೆಯಲ್ಲಿ ಶಶಿಧರ್ ಯಾನೆ ಶಶಿ ಮುಂಡೆವಾಡಿ ಚಡಚಣಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ವಿವರ: ಪಿಸ್ತೂಲ್ ಸಾಗಾಟ ಶಂಕೆ ಹಿನ್ನೆಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಿ ಶಶಿ ಮುಂಡೆವಾಡಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಗೋಪಾಲ ಹಳ್ಳೂರ್ ಮೇಲೆ ಚಾಕೂವಿನಿಂದ ಹಲ್ಲೆ ನಡೆಸಿದ್ದು, ಪ್ರತಿಯಾಗಿ ಚಡಚಣ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಗುಂಡೇಟಿನಿಂದ ಗಾಯಗೊಂಡ ಶಶಿ ಮುಂಡೆವಾಡಿ ಚಡಚಣನನ್ನು ಸರಕಾರಿ ಪ್ರಾಥಮಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಕು ಇರಿತಕ್ಕೆ ಒಳಗಾದ ಪಿಎಸೈ ಹಾಗೂ ಓರ್ವ ಪೇದೆಗೂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉತ್ತರ ವಲಯ ಐಜಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಯಾರು ಶಶಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಶಸ್ತ್ರಾಸ್ತ್ರ ಇಟ್ಟುಕೊಂಡಿರುವ ಶಂಕೆ ಮೇಲೆ ಶಶಿ ಮುಂಡೆವಾಡಿ ಚಡಚಣನನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ತನಿಖೆಯಲ್ಲಿ ಪತ್ರಕರ್ತ ರವಿಬೆಳಗೆರೆ ತನ್ನ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಲಾಗಿದ್ದ ಮಾಹಿತಿ ಮೇರೆಗೆ ರವಿ ಬಂಧನವಾಗಿತ್ತು. ಬಂಧನಕ್ಕೆ ಶಶಿ ಕಾರಣನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News