×
Ad

ಬೆಂಗಳೂರು: ಹಳೇ ನಾಡಧ್ವಜ ಖಾಯಂಗೊಳಿಸಲು ಆಗ್ರಹಿಸಿ ಪ್ರತಿಭಟನೆ

Update: 2018-03-10 21:10 IST

ಬೆಂಗಳೂರು, ಮಾ.10: ಹಳೇ ಧ್ವಜದ ವಿನ್ಯಾಸವನ್ನೇ ಖಾಯಂ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಮಲ್ಲೇಶ್ವರಂ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು, ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರವೇ ಯುವಸೇನೆ ರಾಜ್ಯಾಧ್ಯಕ್ಷ ಹರೀಶ್, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ನಾಡ ಧ್ವಜ ಬದಲಾವಣೆ ಮಾಡಲು ಮುಂದಾಗಿದ್ದಾರೆಂದು ಆರೋಪಿಸಿದರು.

ಹಳೇ ಧ್ವಜದ ವಿನ್ಯಾಸವನ್ನೇ ಖಾಯಂ ಮಾಡಬೇಕೆಂದು ಒತ್ತಾಯಿಸಿರುವ ಯುವಸೇನೆ, ಧ್ವಜ ಬದಲಾವಣೆಗೆ ನಮ್ಮ ಒಪ್ಪಿಗೆ ಇಲ್ಲ. ಯಾವ ಕಾರಣಕ್ಕೂ ಹಳೆ ಧ್ವಜದ ವಿನ್ಯಾಸ ಬದಲಾವಣೆ ಮಾಡಬಾರದು. ಹೊಸಧ್ವಜದ ವಿಚಾರ ಕೈಬಿಡದೇ ಹೋದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಕೇಂದ್ರ ಸರಕಾರ ಕನ್ನಡಿಗರ ವಿರುದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಟಕವಾಡುತ್ತಿದ್ದಾರೆ. ಕೆಂಪು, ಹಳದಿ ಬಾವುಟವೇ ನಮಗೆ ಬೇಕು. ಹೀಗಾಗಿ, ಬಾವುಟ ಬದಲಿಸುವುದರ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News