×
Ad

ಕೆಎಂಸಿ ಕಾಯ್ದೆ ವಿರುದ್ಧ ಸರಕಾರ: ಎನ್.ಆರ್.ರಮೇಶ್ ಆರೋಪ

Update: 2018-03-10 21:12 IST

ಬೆಂಗಳೂರು, ಮಾ.10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರೋತ್ಥಾನ ಅನುದಾನದ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ, ಟೆಂಡರ್ ಅನುಮೋದನೆ ನೀಡುವ ಎಲ್ಲ ಅಧಿಕಾರವನ್ನು ಅಧಿಕಾರಯುಕ್ತ ಸಮಿತಿಗೆ ವಹಿಸುವ ಮೂಲಕ ರಾಜ್ಯ ಸರಕಾರ ಕೆಎಂಸಿ ಕಾಯ್ದೆಗೆ ವಿರುದ್ಧವಾಗಿ ವರ್ತಿಸಿದೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಥಾಯಿ ಸಮಿತಿ ಆಯುಕ್ತರು ಹಾಗೂ ಪಾಲಿಕೆ ಸಭೆಯ ಎಲ್ಲಾ ಸ್ವಾಯತ್ತ ಅಧಿಕಾರವನ್ನು ಕಸಿದುಕೊಂಡು ಅಧಿಕಾರಯುಕ್ತ ಸಮಿತಿ ರಚಿಸಿರುವ ಸರಕಾರ ಈ ಮೂಲಕ ಬಿಬಿಎಂಪಿಯನ್ನು ಪರೋಕ್ಷವಾಗಿ ಸೂಪರ್‌ಸೀಡ್ ಮಾಡಲು ಹೊರಟಿದೆ ಎಂದು ದೂರಿದರು.

ನಗರೋತ್ಥಾನ ಅನುದಾನದ 73 ಸಾವಿರ ಕೋಟಿ ರೂ. ಯೋಜನಾ ಕಾಮಗಾರಿಗಳನ್ನು ಅಧಿಕಾರಯುಕ್ತ ಸಮಿತಿ ನಿರ್ವಹಿಸುತ್ತಿದೆ. ಇದರಲ್ಲಿ ಬರೋಬ್ಬರಿ 1 ಕೋಟಿ ರೂ.ಗಳಷ್ಟು ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದ ಅವರು, ಈ ಮೂಲಕ ರಾಜ್ಯ ಸರಕಾರ ಚುನಾವಣೆಗೆ ಹಣ ಹೊಂದಿಸುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರ ದಾಖಲೆ ಅನುದಾನ ಕೊಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಕಾಮಗಾರಿಗಳ ಟೆಂಡರ್ ನೀಡಿ ಕಮೀಷನ್ ಪಡೆದಿದ್ದಾರೆ. ಬಿಡುಗಡೆ ಮಾಡಿರುವ ಅನುದಾನ ಕೇವಲ 1,500 ಕೋಟಿ ರೂ. ಮಾತ್ರ. ಗುತ್ತಿಗೆದಾರರಿಗೆ 5,800 ಕೋಟಿ ರೂ. ನೀಡಬೇಕಿದೆ. ಚುನಾವಣೆ ಮುಗಿಯುವವರೆಗೆ ಇವರಿಗೆ ಹಣ ನೀಡಲಾಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಲಾಗುತ್ತಿದೆ. ತಮ್ಮ ಬಾಕಿ ಹಣಕ್ಕಾಗಿ ಇವರು ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದರು.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರಜೈನ್ ವಿರುದ್ಧ ಎಸಿಬಿ, ಲೋಕಾಯುಕ್ತ ಹಾಗೂ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದಾಗಿ ಎನ್.ಆರ್.ರಮೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News