ಬೆಂಗಳೂರು: ಮಹಿಳೆಗೆ ಗುಂಡೇಟು ಪ್ರಕರಣ; ದುಷ್ಕರ್ಮಿಗಳ ಪತ್ತೆಗೆ ಶೋಧ
ಬೆಂಗಳೂರು,ಮಾ.10: ಮಹಿಳೆ ಮೇಲೆ ಗುಂಡು ಹಾರಿಸಿ ಬೈಕ್‌ನಲ್ಲಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗಾಗಿ ವಿದ್ಯಾರಣ್ಯಪುರ ಠಾಣೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ನಗರದ ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿರುವ ಸಿಂಧು ಅವರ ಮೇಲೆ ಯಾವ ಕಾರಣಕ್ಕಾಗಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಲಾಗಿದೆ ಎಂಬುದು ನಿಗೂಢವಾಗಿದೆ. ಪ್ರಕರಣದ ಸಂಬಂಧ ದುಷ್ಕರ್ಮಿಗಳು ವೈಯಕ್ತಿಕ ದ್ವೇಷದಿಂದ ಸಿಂಧು ಮೇಲೆ ಗುಂಡು ಹಾರಿಸಿ ಕೊಲೆ ಯತ್ನಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.
ಏನಿದು ಘಟನೆ: ವಿದ್ಯಾರಣ್ಯಪುರ ಸಮೀಪದ ರಾಮಚಂದ್ರಾಪುರ ನಿವಾಸಿಯಾದ ಸಿಂಧು ಶುಕ್ರವಾರ ರಾತ್ರಿ 9:30ರ ಸುಮಾರಿಗೆ ಸ್ನೇಹಿತೆ ಮನೆಗೆ ಹೋಗಿ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ, ಇಬ್ಬರು ದುಷ್ಕರ್ಮಿಗಳು ಹಿಂಬಾಲಿಸಿ ಇವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಮೂರು ಗುಂಡುಗಳ ಪೈಕಿ ಒಂದು ಗುಂಡು ಮಾತ್ರ ಇವರ ಬೆನ್ನನ್ನು ತಾಗಿಕೊಂಡು ಹೋಗಿದೆ. ಪರಿಣಾಮವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕೃತ್ಯ ಎಸಗಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.