ಪ್ರಕಾಶ್ ಪಡುಕೋಣೆ, ರಾಹುಲ್ ದ್ರಾವಿಡ್ ಸೇರಿ ಹಲವರಿಗೆ ಬಹುಕೋಟಿ ರೂ. ವಂಚನೆ: ನಾಲ್ವರು ವಶಕ್ಕೆ

Update: 2018-03-11 13:36 GMT

ಬೆಂಗಳೂರು, ಮಾ.11: ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಸೇರಿ ಹಲವು ಜನರಿಗೆ ಬರೋಬ್ಬರಿ 300 ಕೋಟಿ ರೂ. ವಂಚನೆ ಆರೋಪದ ಮೇಲೆ ಇಲ್ಲಿನ ಬನಶಂಕರಿ ಠಾಣಾ ಪೊಲೀಸರು, ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬನಶಂಕರಿ ನಿವಾಸಿ ರಾಘವೇಂದ್ರ ಶ್ರೀನಾಥ್(39)ಸೂತ್ರಂ ಸುರೇಶ್(41) ನರಸಿಂಹಮೂರ್ತಿ(44) ಪ್ರಹ್ಲಾದ್(47) ಎಂಬವರು ಬಂಧಿತ ಆರೋಪಿಗಳೆಂದು ನಗರದ ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪತಿಳಿಸಿದ್ದಾರೆ.

ಆರೋಪಿಗಳ ಪೈಕಿ ರಾಘವೇಂದ್ರ ಶ್ರೀನಾಥ್ ಎಂಬಾತ ವಿಕ್ರಂ ಇನ್ವೆಸ್ಟ್‌ಮೆಂಟ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ(ಎಂಡಿ)ನಾಗಿದ್ದು, ಸೂತ್ರಂ ಸುರೇಶ್ ಜೊತೆ ಸೇರಿಕೊಂಡು ಖ್ಯಾತ ಕ್ರೀಡಾಪಟುಗಳು, ರಾಜಕಾರಣಿಗಳು, ಸಿನಿಮಾ ನಟರನ್ನೆ ಗುರಿಯಾಗಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ.

ಅಧಿಕ ಲಾಭಾಂಶ ನೀಡುವುದಾಗಿ ಕೋಟಿಗಟ್ಟಲೇ ಹಣ ಹೂಡಿಕೆ ಮಾಡಿಸಿದ್ದಾರೆ. 8 ರಿಂದ 10 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಹಾಗೂ ರಾಹುಲ್ ದ್ರಾವಿಡ್ ಸೇರಿದಂತೆ ಇನ್ನೂ ಆನೇಕ ಕ್ರೀಡಾಪಟುಗಳಿಗೆ ಕೋಟಿ ಕೋಟಿ ರೂ ಮೋಸ ಮಾಡಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಇಬ್ಬರು ಮಾತ್ರ ದೂರು ನೀಡಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ವಂಚನೆ ನಡೆದಿರುವ ಮಾಹಿತಿ ಲಭ್ಯವಾಗಿದೆ ವಂಚನೆಗೊಳಗಾದವರು ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ಪೊಲೀಸರು ಕೋರಿದ್ದಾರೆೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News