×
Ad

ವಿವಿಗಳು ಅವಕಾಶಗಳು ವಂಚಿಸುವ ಸಂಶೋಧನಾ ಕೇಂದ್ರಗಳು: ಡಾ.ರಾಜಪ್ಪ ದಳವಾಯಿ

Update: 2018-03-11 19:25 IST

ಬೆಂಗಳೂರು, ಮಾ.11: ದೇಶದಲ್ಲಿರುವ ವಿಶ್ವವಿದ್ಯಾಲಯಗಳು ಅವಕಾಶಗಳನ್ನು ವಂಚಿಸುವ ಸಂಶೋಧನಾ ಕೇಂದ್ರಗಳಾಗುತ್ತಿವೆ ಎಂದು ಲೇಖಕ ಡಾ.ರಾಜಪ್ಪ ದಳವಾಯಿ ತಿಳಿಸಿದ್ದಾರೆ.

ರವಿವಾರ ನಗರದ ಸೆನೆಟ್ ಹಾಲ್‌ನಲ್ಲಿ ಆಯೋಜಿಸಿದ್ ‘ಬಂಡಾಯ ಸಾಹಿತ್ಯ ನಲವತ್ತರ ಹೆಜ್ಜೆ’ ಕಾರ್ಯಕ್ರಮದಲ್ಲಿ ‘ಜನತಂತ್ರ: ದಮನಿತರು’ ವಿಷಯ ಕುರಿತು ಮಾತನಾಡಿದ ಅವರು, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ದಮನಿತ ಸಮುದಾಯಗಳನ್ನು ಗುರುತಿಸುವಲ್ಲಿ ಎಲ್ಲರೂ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಎಲ್ಲವೂ ಉಳ್ಳವರ ಪಾಲಾಗುತ್ತಿವೆ. ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ 6-10 ಉನ್ನತ ಜಾತಿಗಳ ವಿದ್ಯಾರ್ಥಿಗಳೇ ತಮ್ಮ ಅಸ್ಥಿತ್ವವನ್ನು ಕಂಡುಕೊಂಡಿದ್ದಾರೆ. ಇನ್ನುಳಿದಂತೆ ಅತೀ ಹಿಂದುಳಿದ ಅಲೆಮಾರಿ, ಬುಡಕಟ್ಟು ಸಮುದಾಯಗಳು ಇಂದಿಗೂ ಅಭಿವೃದ್ಧಿಯಾಗಲು ಸಾಧ್ಯವಾಗಿಲ್ಲ. ಕನಿಷ್ಟ ಪಕ್ಷ ಅವರ ಪರವಾಗಿ ಧ್ವನಿಗೂಡಿಸುವ ಒಬ್ಬ ಜನ ನಾಯಕನಿಲ್ಲ. ಅಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದನ್ನು ಪ್ರಗತಿ ಎಂದು ಕರೆಯಬೇಕು ಎಂದು ಪ್ರಶ್ನಿಸಿದರು.

ನಮ್ಮನ್ನಾಳುತ್ತಿರುವವರಿಗೆ ತಳ ಸಮುದಾಯಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಇಂತಹ ಸಂದರ್ಭದಲ್ಲಿ ಹಲವಾರು ಸೃಜನಶೀಲ, ಪ್ರಗತಿಪರ ಸಾಹಿತಿಗಳು ಎಂದೆನಿಸಿಕೊಂಡವರು ಯಾರ ಪರವಾಗಿ, ಯಾವ ರಾಜಕಾರಣಿಯನ್ನು ಓಲೈಸಬೇಕು ಎಂದು ನೋಡುತ್ತಾರೆ. ಪ್ರಶ್ನಿಸದೇ ಇರುವ ಯಾರೊಬ್ಬರೂ ಪ್ರಗತಿಪರ ಸಾಹಿತಿಯಾಗಲು ಅರ್ಹರಾಗುವುದಿಲ್ಲ. ಅದೇ ರೀತಿ ದಮನಿತರ ಪರವಾಗಿ ಯೋಚಿಸಬೇಕು ಎಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರಗಳು ಜಾರಿ ಮಾಡುತ್ತಿರುವ ಬಹುತೇಕ ಯೋಜನೆಗಳು ತಳ ಸಮುದಾಯಗಳಿಗೆ ಮುಟ್ಟುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪ್ರಗತಿಪರ ಹಾಗೂ ಸೃಜನಶೀಲ ಸಾಹಿತಿಗಳು ನಮ್ಮನ್ನು ಆಳುತ್ತಿರುವ ಜನರನ್ನು ಜಾಗೃತಿ ಮೂಡಿಸಬೇಕು ಹಾಗೂ ದಮನಿತರ ಪರವಾದ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದರು.

ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್ ಮಾತನಾಡಿ, ಭಾರತದಲ್ಲಿ ಸಂಘಪರಿವಾರ ಹೊರತು ಪಡಿಸಿದರೆ ಉಳಿದ ಎಲ್ಲರೂ ದಮನಿತರಾಗಿದ್ದಾರೆ. ಹೀಗಾಗಿ, ಜಾಗತೀಕರಣ ಹೆಸರಿನಲ್ಲಿ ದಮನಿತರನ್ನು ದಮನ ಮಾಡಲು ಹುನ್ನಾರ ಮಾಡಲಾಗುತ್ತಿದೆ. ಅದಕ್ಕಾಗಿ, ದೇಶವನ್ನು ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ಮೂಲಕ ದೇಶವನ್ನು ನಾಶ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಪ್ರಜಾತಂತ್ರ ವ್ಯವಸ್ಥೆ ಕಾರ್ಪೋರೇಟ್ ವ್ಯವಸ್ಥೆಗೆ ಬಿಕರಿಯಾಗಿದ್ದು, ದೇಶಿಯತೆಯನ್ನು ಕಳೆದುಕೊಳ್ಳುತ್ತಿದೆ. ಸ್ಥಳೀಯವಾಗಿ ಉತ್ಪಾದನೆ ಮಾಡುವ ಕೈಗಾರಿಕೆಗಳಿಲ್ಲದಾಗಿದೆ. ದೇಶದಲ್ಲಿ ಶೇ.51 ರಷ್ಟು ರೈತರು ಕೃಷಿಯನ್ನು ಬಿಟ್ಟಿದ್ದಾರೆ, ಶೇ.23-25 ರಷ್ಟು ಜನರು ಕೈಗಾರೀಕರಣಕ್ಕೆ ಒಳಗಾಗಿದ್ದಾರೆ. ಇದೀಗ ಕೃಷಿ ಮಾಡುವವರ ಸಂಖ್ಯೆ 14 ಕ್ಕಿಳಿದಿದೆ. ಹೀಗಿದ್ದರೂ, ನಮ್ಮನ್ನಾಳುವ ಜನ ನಾಯಕರು ನಮ್ಮದು ಕೃಷಿ ಪ್ರಧಾನ ದೇಶ, ರೈತರು ನಮ್ಮ ಬೆನ್ನೆಲಬು ಎಂದು ಭಾಷಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಕವಿ ಬೊಳುವಾರು ಮುಹಮ್ಮದ್, ಸುಬ್ಬು ಹೊಲೆಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News