×
Ad

ಪಬ್ಲಿಕ್ ಟಿವಿ ರಂಗನಾಥ್ ವಿರುದ್ಧ ಮಾನನಷ್ಟ ಮೊಕದ್ದಮೆ: ಪತ್ರಕರ್ತ ರವಿಬೆಳಗೆರೆ

Update: 2018-03-11 20:19 IST

ಬೆಂಗಳೂರು, ಮಾ.11: ಸುಪಾರಿ ಪ್ರಕರಣವೊಂದರ ಸಂಬಂಧ ಅಪ್ರಾಪ್ತ ಬಾಲಕನ ಚಿತ್ರ ಪ್ರಸಾರ ಮಾಡಿದ ಆರೋಪದಡಿ ಪಬ್ಲಿಕ್‌ಟಿವಿ ಮುಖ್ಯಸ್ಥ ರಂಗನಾಥ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡುವುದಾಗಿ ಹಾಯ್ ಬೆಂಗಳೂರು ಸಂಪಾದಕ ರವಿಬೆಳಗೆರೆ ಹೇಳಿದ್ದಾರೆ.

ಈ ಕುರಿತು ರವಿವಾರ ಸಂಜೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ನಾನು ಗೆಳೆತನಕ್ಕೆ ತುಂಬಾ ಬೆಲೆ ಕೊಡುತ್ತೇನೆ. ಸುಪಾರಿ ಎಂಬ ಬೃಹತ್ ನಾಟಕ ನಡೆದಾಗ ಎಲ್ಲ ಚಾನಲ್‌ಗಳು ಸುದ್ದಿ ಮಾಡಿದವು. ಸುಮ್ಮನೆ ಅಲ್ಲ, ಮುಗಿಬಿದ್ದು ಮಾಡಿದವು. ಹಾಗಿರುವಾಗ ನಾನು ಪಬ್ಲಿಕ್ ಟಿವಿ ಸುದ್ದಿ ಮಾಡಬಾರದು ಅಂತ ನಿರೀಕ್ಷಿಸಲಿಲ್ಲ. ರಂಗ(ರಂಗನಾಥ್) ನನ್ನ 30 ವರ್ಷಗಳ ಗೆಳೆಯ. ಅವನ ತೊಡೆ ಮೇಲೆ ಕುಳಿತ ‘ಗೌಡರ್’ ಎದ್ದು ಹೋಗಿ ಅಲ್ಲೀಗ ಅಜ್ಮತ್ ಎಂಬ ಪುರಾತನ ಪುಣ್ಯ ಪುರುಷ ಕುಳಿತಿದ್ದಾನೆ’ ಎಂದು ಹೇಳಿದ್ದಾರೆ.

‘ಇಬ್ಬರೂ ಅಪರಾಧ ವರದಿ (ಕ್ರೈಮ್ ರಿಪೋರ್ಟಿಂಗ್) ಮಾಡಿದವರೇ. ಆದರೆ, ಟಿಆರ್‌ಪಿ ದೋಚುವ ಹಂಬಲದಲ್ಲಿ ನನ್ನ ಪತ್ನಿ, ಮನೆ ಎಲ್ಲವನ್ನೂ ತೋರಿಸಿದರು. ಸರಿ, ಆದರೆ ನನ್ನ 10 ವರ್ಷದ ಮಗ ಏನು ಮಾಡಿದ್ದ? ಅಪ್ರಾಪ್ತ ವಯಸ್ಸಿನ ಮಗುವಿನ ಚಿತ್ರ ತೋರಿಸೋದು ಅಪರಾಧ’ ಎಂದು ಆರೋಪಿಸಿದ್ದಾರೆ.

‘ಈಗ ನಾನು ರಂಗನ(ರಂಗನಾಥ್) ಮೇಲೆ ತುಂಬಾ ದೊಡ್ಡ ಮೊತ್ತಕ್ಕೆ ಕೇಸ್ ಹಾಕುತ್ತಿದ್ದೇನೆ. ಯಾಕೆ ಬಿಡಲಿ ಹೇಳಿ? ಈ ವಿಷಯದಲ್ಲಿ ನ್ಯಾಯಾಲಯ ತುಂಬಾ ಕಠಿಣವಾಗಿ ನಡೆದುಕೊಳ್ಳುತ್ತದೆ. ರಂಗನಿಗೊಂದು ಗತಿ ಕಾಣಿಸುತ್ತೇನೆ’ ಎಂದು ಬೆಳಗೆರೆ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News