ಕೋಮುವಾದಿ ಶಕ್ತಿಗಳನ್ನು ತಡೆಯಲು ಮತ್ತೊಮ್ಮೆ ಸಿದ್ದರಾಮಯ್ಯರಿಗೆ ಅವಕಾಶ ಕೊಡಿ: ಸಚಿವ ಮಹದೇವಪ್ಪ
ಬೆಂಗಳೂರು, ಮಾ.11: ಕೋಮುವಾದಿ ಶಕ್ತಿಗಳನ್ನು ತಡೆಯಲು ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಅವಕಾಶ ಕೊಡಿ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ಹೇಳಿದರು.
ರವಿವಾರ ನಗರದ ಪುರಭವನದ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ, ಎತ್ತ ಸಾಗುತ್ತಿದೆ ಭಾರತ? ಅಂಬೇಡ್ಕರ್ ಚಿಂತನೆಯ ಬೆಳಕಿನಲ್ಲಿ ವಿಶ್ಲೇಷಣೆ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ತಪ್ಪುಗಳನ್ನು ಖಂಡಿಸಿ, ಟೀಕೆ ಮಾಡುವ ಪ್ರಾಮಾಣಿಕತೆಯ ಧೈರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಇದೆ. ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎಂದು ನೇರವಾಗಿಯೇ ಹೇಳುತ್ತಾರೆ. ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಇಲ್ಲದಿದ್ದರೆ, ಕರ್ನಾಟಕದಲ್ಲಿ ಕೋಮುವಾದಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಲಿತರನ್ನು ಸ್ನಾನ ಮಾಡಿಕೊಂಡು ಬಂದು ಭೇಟಿ ಮಾಡಿ ಎಂದು ಬಹಿರಂಗವಾಗಿಯೇ ಹೇಳುತ್ತಾರೆ ಎಂದ ಅವರು, ಆರೆಸ್ಸೆಸ್ ಅಂಗ ಸಂಸ್ಥೆಗಳು ದಲಿತ, ಹಿಂದುಳಿದ ವರ್ಗಗಳ ಯುವಕರನ್ನ ತಪ್ಪು ದಾರಿಗೆ ಸೆಳೆಯುವ ಕೆಲಸ ಮಾಡುತ್ತಿವೆ. ಹೀಗಾಗಿ, ಕರ್ನಾಟಕಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಾಗಿದೆ ಎಂದರು.
‘ಮೌನ ಏಕೆ’
‘ಸಂವಿಧಾನ ತಿದ್ದುಪಡಿ ಮಾಡುತ್ತೇವೆಂದು ಬಹಿರಂಗವಾಗಿ ಹೇಳುತ್ತಾರೆ. ಬುದ್ದಿಜೀವಗಳ ರಕ್ತ ಪರೀಕ್ಷೆ ಮಾಡಬೇಕು ಅಂತ ಹೇಳುತ್ತಾರೆ. ಬಹಿರಂಗವಾಗಿ ಹೇಳಿದ್ದರೂ ಇನ್ನು ಮೌನ ವಹಿಸಿರುವುದು ಸರಿಯಲ್ಲ. ನಾವು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ.’
-ಡಾ.ಎಚ್.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವ