ಸ್ವಾರ್ಥ ಹಿತಾಸಕ್ತಿಗಾಗಿ ಸಂಘಟನೆ ಬಳಸಿಕೊಳ್ಳದಿರಿ: ಬಿ.ಗೋಪಾಲ್
ಬೆಂಗಳೂರು, ಮಾ.11: ಸಂಘಟನೆ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕೇ ಹೊರತು, ಯಾವುದೇ ಸ್ವಾರ್ಥ ಹಿತಾಸಕ್ತಿಗಾಗಿ ಸಂಘಟನೆಯನ್ನು ಬಳಸಿಕೊಳ್ಳಬಾರದು ಎಂದು ಪ್ರಜಾ ಪರಿವರ್ತನಾ ಪಾರ್ಟಿ ಅಧ್ಯಕ್ಷ ಬಿ.ಗೋಪಾಲ್ ಸಲಹೆ ನೀಡಿದ್ದಾರೆ.
ರವಿವಾರ ನಗರದ ಕೆ.ಎಚ್.ಪಾಟೀಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರೂ ಪ್ರಾಮಾಣಿಕರಾಗಿ, ಯಾವುದೇ ಕಳಂಕವಿಲ್ಲದೆ ಸಂಸ್ಥೆಗೆ ಸೇವೆ ಸಲ್ಲಿಸಬೇಕು. ಸಂಘಟನೆಯನ್ನು ನೌಕರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಬೆಳೆಸಬೇಕು. ಯಾವುದೇ ವೈಯುಕ್ತಿಕ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದರು.
ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಎಲ್ಲರೂ ಸಮಾನರು ಎಂದು ದುಡಿಯಬೇಕು. ಸಮಾಜದಲ್ಲಿ ಸಾಮರಸ್ಯ ಹಾಗೂ ಸೌಹಾರ್ದವನ್ನು ಕಾಪಾಡಲು ಪ್ರಯತ್ನಿಸಬೇಕು. ಅನಗತ್ಯ ಗಲಾಟೆ, ತಂಟೆ-ತಕರಾರುಗಳಿಗೆ ಆಸ್ಪದ ನೀಡಬಾರದು. ಸಂಸ್ಥೆಯೊಂದಿಗೆ ಜೊತೆಯಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಯಾವುದೇ ಅಡೆ ತಡೆಗಳು ಬರುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಲ್ಲಿಯೇ ಮೂಢನಂಬಿಕೆಗಳು ಜಾಸ್ತಿಯಾಗುತ್ತಿವೆ. ಹೀಗಾಗಿ, ಅಂಬೇಡ್ಕರ್‌ರ ಸಿದ್ದಾಂತ ಹಾಗೂ ವಿಚಾರಗಳನ್ನು ಎಲ್ಲರಿಗೂ ತಲುಪಿಸಬೇಕು. ಈ ಮೂಲಕ ಮೌಢ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕಿದೆ. ಅಲ್ಲದೆ, ಮೌಢ್ಯ ಮುಕ್ತವಾದರೆ ಸಂಸ್ಥೆಯಲ್ಲಿ ಎಲ್ಲರೂ ನೆಮ್ಮದಿ-ಶಾಂತಿಯಿಂದ ಕೆಲಸ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಎಲ್ಲರಿಗೂ ಅಂಬೇಡ್ಕರ್ ಸಿದ್ದಾಂತ ತಲುಪಿಸಲು ಶ್ರಮಿಸೋಣ ಎಂದು ಸಲಹೆ ನೀಡಿದರು.
ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ ಯಾದವ್, ಜಾನಪದ ಅಕಾಡಮಿಯ ಮಾಜಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ, ಕಾರ್ಮಿಕ ಮುಖಂಡ ಎಸ್.ಎಂ.ರಾಜಣ್ಣ, ಸಂಘದ ಅಧ್ಯಕ್ಷ ಚಿಕ್ಕತಿಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.