ಉದ್ಯೋಗಕ್ಕಾಗಿ ಸರಕಾರವನ್ನೇ ನಂಬಿ ಕೂರಬೇಡಿ: ಸಚಿವ ಅನಂತಕುಮಾರ್ ಹೆಗಡೆ

Update: 2018-03-11 15:29 GMT

ಬೆಂಗಳೂರು, ಮಾ. 11: ‘ಉದ್ಯೋಗಕ್ಕಾಗಿ ಯುವಕರು ಸರಕಾರವನ್ನೇ ನಂಬಿ ಕೂರದೆ, ಹೊಸ ಹೊಸ ಉದ್ಯೋಗಾವಕಾಶಗಳನ್ನು ಯುವಕರೇ ಸೃಷ್ಟಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ಸರಕಾರ ಯುವಕರಿಗೆ ವೇದಿಕೆ ಕಲ್ಪಿಸಲಿದೆ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರವೇ ಎಲ್ಲವನ್ನೂ ಮಾಡಲಿಕ್ಕೆ ಆಗುವುದಿಲ್ಲ. ಉದ್ಯೋಗವಕಾಶಕ್ಕೆ ಸರಕಾರ ವೇದಿಕೆ ಸೃಷ್ಟಿಸಿ ಕೊಡಬಹುದಷ್ಟೇ ಎಂದು ನುಡಿದರು.

ಸರಕಾರ ಕೆಲವೇ ಕೆಲವು ಲಕ್ಷ ಉದ್ಯೋಗಳನ್ನು ನೀಡಬಹುದು. ಉದ್ಯಮಗಳಿಗೆ ನೆರವು ಕೊಡಬಹುದು. ಇದರಿಂದಲೇ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುವುದಿಲ್ಲ ಎಂದ ಅವರು, ಉದ್ಯೋಗವಕಾಶಗಳನ್ನು ಸೃಷ್ಟಿಸಿಕೊಳ್ಳುವತ್ತಲೂ ಮುಂದಾಗಬೇಕು. ಆ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡುವುದೇ ಎಲ್ಲ ಉದ್ಯೋಗಗಳ ಅಂತಿಮ ಗುರಿಯಾಗಿರಬೇಕು. ನಾವೆಲ್ಲ ದೇಶಕ್ಕಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.

ಪ್ರಧಾನಿ ಮೋದಿ ‘ಮುದ್ರಾ ಯೋಜನೆ’ ಜಾರಿ ಮಾಡಿದರು. ಮುದ್ರಾ ಯೋಜನೆ ಜಾರಿಯಲ್ಲಿ ಕೆಲ ತೊಡಕುಗಳಿವೆ ನಿಜ. ಹಾಗಂತ ಯೋಜನೆ ನಿಲ್ಲಿಸುವುದಿಲ್ಲ ಎಂದ ಅವರು, ಬ್ಯಾಂಕುಗಳ ಮುಖ್ಯಸ್ಥರಿಗೂ ‘ಮುದ್ರಾ’ ಯೋಜನೆ ಸಂಬಂಧ ಕೆಲವು ಸಮಸ್ಯೆಗಳಿವೆ.

ಅವರು ಬ್ಯಾಂಕುಗಳನ್ನಷ್ಟೇ ನಡೆಸುತ್ತಿದ್ದಾರೆ. ಆದರೆ, ನಾವು ಈ ದೇಶವನ್ನು ಮುನ್ನಡೆಸುತ್ತಿದ್ದೇವೆ. ದೇಶದ ಪ್ರಗತಿಗೆ ಬ್ಯಾಂಕುಗಳು ಸಹಕಾರ ಕೊಡಲೇಬೇಕು. ಸಹಕಾರ ಕೊಡದಿದ್ದರೆ ಹೇಗೆ ಸಹಕಾರ ಪಡೆಯಬೇಕೆಂದು ನಮಗೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.

ಚೀಫ್ ಮಿನಿಸ್ಟರ್ ಹೆಗಡೆ...
‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ವೇದಿಕೆಗೆ ಸ್ವಾಗತಿಸುವ ವೇಳೆ ಕಾರ್ಯಕ್ರಮ ನಿರೂಪಕಿ ‘ಚೀಫ್ ಮಿನಿಸ್ಟರ್’ ಎಂದು ಆಹ್ವಾನಿಸಿದರು. ಇದರಿಂದ ಕೇಂದ್ರ ಸಚಿವ ಹೆಗಡೆ ಸೇರಿ ನೆರೆದಿದ್ದವರು ಕ್ಷಣಗಾಲ ತಬ್ಬಿಬ್ಬಾದ ಪ್ರಸಂಗವೂ ನಡೆಯಿತು. ಬಳಿಕ ನಿರೂಪಕಿ ಕ್ಷಮೆ ಕೋರಿ ತಪ್ಪು ಸರಿಪಡಿಸಿಕೊಂಡರು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News