×
Ad

'ಸಚಿವರಿಬ್ಬರು ಭಯೋತ್ಪಾದಕರು' ಹೇಳಿಕೆ: ಬಿಜೆಪಿ ನಾಯಕನ ವಿರುದ್ಧ ದೂರು

Update: 2018-03-11 21:01 IST

ಬೆಂಗಳೂರು, ಮಾ.11: ಸಚಿವರಿಬ್ಬರು ಭಯೋತ್ಪಾದಕರಿಗಿಂತಲೂ ಕಡಿಮೆ ಇಲ್ಲ ಎಂದು ವಿವಾದಿತ ಹೇಳಿಕೆ ನೀಡಿದ ಆರೋಪದಡಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿರುದ್ಧ ಕಾಂಗ್ರೆಸ್‌ನ ಮುಖಂಡರು ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಾ.10 ಶನಿವಾರ ನಗರದ ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ರವಿಕುಮಾರ್, ಸಚಿವರಾದ ಯು.ಟಿ.ಖಾದರ್, ರಮಾನಾಥ ರೈ ಉಗ್ರಗಾಮಿಗಳಿದ್ದಂತೆ, ಅವರು ಯಾವ ಭಯೋತ್ಪಾದಕರಿಗಿಂತಲೂ ಕಡಿಮೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ್ದೇವೆ ಎಂದು ರಾಜಾಜಿನಗರ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ವಿ.ಶೇಖರ್ ಹೇಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್, ಕಾಂಗ್ರೆಸ್ ನಾಯಕರ ತೇಜೋವಧೆಗೆ ಮುಂದಾಗಿರುವ ರವಿಕುಮಾರ್ ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಪ್ರಚಾರ ಗೀಳಿನಲ್ಲಿರುವ ರವಿಕುಮಾರ್ ಇಂಥ ಹೇಳಿಕೆ ನೀಡಿ ತಮ್ಮ ಕೋಮುವಾದ ಮುಖವಾಡ ಬಯಲು ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಾ ಜನರ ದಿಕ್ಕು ತಪ್ಪಿಸಲು ಅವರಂಥ ಕಿಡಿಗೇಡಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News