ಕದಂಬರ ರಾಜಧಾನಿ ತಾಳಗುಂದದಲ್ಲಿ ಶೀಘ್ರ ಉತ್ಖನನ
ಬೆಂಗಳೂರು, ಮಾ.11: ಕದಂಬ ರಾಜವಂಶದ ರಾಜಧಾನಿ ಆಗಿತ್ತು ಎಂದು ಹೇಳಲಾಗಿರುವ, ಶಿವಮೊಗ್ಗದಿಂದ ಸುಮಾರು 80 ಕಿ.ಮೀ. ದೂರದ ತಾಳಗುಂಡ ಎಂಬಲ್ಲಿ ಶೀಘ್ರ ಪ್ರಯೋಗಾರ್ಥ ಉತ್ಖನನ ಕಾರ್ಯ ನಡೆಸಲು ಭಾರತೀಯ ಪುರಾತತ್ವಶಾಸ್ತ್ರ ಸಮೀಕ್ಷೆ ಇಲಾಖೆ(ಎಎಸ್‌ಐ) ನಿರ್ಧರಿಸಿದೆ.
ಉತ್ಖನನ ಕಾರ್ಯಕ್ಕೆ ಆಯ್ಕೆ ಮಾಡಲಾಗಿರುವ ಸ್ಥಳಕ್ಕೆ ಪುರಾತತ್ವಶಾಸ್ತ್ರದಲ್ಲಿ ಹೆಚ್ಚಿನ ಮಹತ್ವವಿದೆ. ಈ ಹಿಂದೆ ಉತ್ಖನನ ನಡೆಸಿರುವ ಸ್ಥಳಕ್ಕೆ ತಾಗಿಕೊಂಡಿರುವ ಸ್ಥಳದಲ್ಲಿ ಮುಂದಿನ ಹತ್ತು ದಿನದೊಳಗೆ ಪ್ರಯೋಗಾರ್ಥ ಉತ್ಖನನ ಕಾರ್ಯ ನಡೆಸಲಿದ್ದೇವೆ. ಈ ಸ್ಥಳದಲ್ಲಿ ಪ್ರಣವೇಶ್ವರ ದೇವಸ್ಥಾನವಿದೆ ಎಂದು ಎಎಸ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕದಂಬ ರಾಜವಂಶದ ರಾಜಧಾನಿ ಆಗಿತ್ತು ಎಂದು ನಂಬಲಾಗಿರುವ ತಾಳಗುಂದದ 7.5 ಎಕರೆ ಜಮೀನಿನಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ಇಲ್ಲಿರುವ ಪ್ರಣವೇಶ್ವರ ದೇವಸ್ಥಾನ ಪ್ರಮುಖ ಅಧ್ಯಯನದ ವಿಷಯವಾಗಲಿದೆ ಎಂದವರು ಹೇಳಿದ್ದಾರೆ. ಮಯೂರ ಶರ್ಮನಿಂದ ಕ್ರಿ.ಶ.350ರಲ್ಲಿ ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾಗಿರುವ ಕದಂಬ ರಾಜವಂಶ ಸುಮಾರು 200 ವರ್ಷ ಆಡಳಿತ ನಡೆಸಿತ್ತು . ಈ ಪ್ರದೇಶದಲ್ಲಿ ಕದಂಬ ಮರಗಳ ಸಮೂಹವೇ ಇದ್ದ ಕಾರಣ ರಾಜವಂಶಕ್ಕೆ ಕದಂಬ ಎಂಬ ಹೆಸರು ಬಂದಿತು ಹಾಗೂ ಇವರು ಕನ್ನಡ ಭಾಷೆ ಮಾತನಾಡುತ್ತಿದ್ದರು . ಈ ಪ್ರದೇಶದಲ್ಲಿ ದೊರೆತ ಚಿನ್ನದ ನಾಣ್ಯ ಹಾಗೂ ತಾಮ್ರ ಲೇಪಿತ ಶಾಸನಗಳು ಕದಂಬ ವಂಶದ ಕಾಲಕ್ಕೆ ಸೇರಿದ್ದ ಹಿನ್ನೆಲೆಯಲ್ಲಿ ಇಲ್ಲಿ ಉತ್ಖನನ ನಡೆಸಲು ಇಲಾಖೆ ನಿರ್ಧರಿಸಿದೆ. ಹಾಸನದಲ್ಲಿ ದೊರೆತ ಹಲ್ಮಿಡಿ ಶಾಸನ ಸುಮಾರು ಕ್ರಿ.ಶ.450ರ ಅವಧಿಯದ್ದಾಗಿದ್ದು ಕನ್ನಡ ಭಾಷೆಯಲ್ಲಿ ಬರೆದಿರುವ ಅತ್ಯಂತ ಪುರಾತನ ಶಾಸನವಾಗಿದೆ. ಆದರೆ ತಾಳಗುಂಡದಲ್ಲಿ ದೊರೆತ ಶಾಸನ ಇದಕ್ಕೂ ಹಳೆಯದಾಗಿದ್ದು ಕ್ರಿ.ಶ.370ರ ಅವಧಿಯದ್ದಾಗಿದೆ ಎಂದು ಎಎಸ್‌ಐ ಅಧಿಕಾರಿ ಟಿ.ಎಂ.ಕೇಶವ ತಿಳಿಸಿದ್ದಾರೆ.
ಪ್ರಣವೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದ ಸಂದರ್ಭ , ಅಡಿಪಾಯದ ಕಲ್ಲನ್ನು ತೆಗೆಯುತ್ತಿದ್ದಾಗ ನಾಣ್ಯ ಹಾಗೂ ತಾಮ್ರದ ಶಾಸನ ದೊರೆತಿದೆ. ಆದರೆ ಈಗ ಇರುವ ಸಮಸ್ಯೆಯೆಂದರೆ, ಉತ್ಖನನಕ್ಕೆ ಆಯ್ಕೆ ಮಾಡಲಾಗಿರುವ ಭೂಮಿಯ ಒಡೆತನ ಖಾಸಗಿ ವ್ಯಕ್ತಿಗಳಿಗೆ ಸೇರಿದೆ.1954ರಲ್ಲಿ ಉತ್ಖನನ ನಡೆಸಲೆಂದು ಈ ಜಮೀನನ್ನು ಎಎಸ್ ಐ ವಶಕ್ಕೆ ನೀಡಲಾಗಿತ್ತು. ಆದರೆ ಸಿಬ್ಬಂದಿ ಕೊರತೆಯಿಂದ ಈ ಆಸ್ತಿಯನ್ನು ನಿರ್ವಹಿಸಲು ಎಎಸ್‌ಐ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಬಳಿಕ ಕೆಲವು ಭೂಮಾಫಿಯಾದವರು ನಕಲಿ ದಾಖಲೆ ಪತ್ರ ಸೃಷ್ಟಿಸಿ ಈ ಜಮೀನನ್ನು ತಮ್ಮ ವಶಕ್ಕೆ ಪಡೆದಿದ್ದರು. ಈಗ ಪ್ರಯೋಗಾರ್ಥ ಉತ್ಖನನ ನಡೆಸಲು ಅನುಕೂಲ ಮಾಡಿಕೊಡುವಂತೆ ಅವರ ಮನವೊಲಿಸುತ್ತಿದ್ದೇವೆ ಎಂದು ಎಎಸ್‌ಐ ಅಧಿಕಾರಿ ತಿಳಿಸಿದ್ದಾರೆ.