ಬೆಂಗಳೂರು: ಪ್ಯಾಕೇಜ್ ಪದ್ಧತಿ ರದ್ದತಿಗೆ ಗುತ್ತಿದಾರರ ಆಗ್ರಹ
ಬೆಂಗಳೂರು, ಮಾ.12: ಪ್ರಸ್ತುತ ಜಾರಿಯಲ್ಲಿರುವ ಪ್ಯಾಕೇಜ್ ಪದ್ಧತಿಯಿಂದ ಗುತ್ತಿಗೆದಾರರಿಗೆ ಅನಾನುಕೂಲವಾಗುತ್ತಿದ್ದು, ಕೂಡಲೇ ಇದನ್ನು ರದ್ದು ಮಾಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಪ್ಯಾಕೇಜ್ ಪದ್ಧತಿಯನ್ನು ತೆಗೆಯಬೇಕು ಎಂದು ಹಲವು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಅಕ್ಟೋಬರ್‌ನಲ್ಲಿ ನಡೆದ ಗುತ್ತಿಗೆದಾರರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅವರು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ಯಾಕೇಜ್ ಪದ್ಧತಿ ನಿಯಮವು ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿ ಮಾಡಿರುವ ಕಠಿಣ ನಿಯಮಾವಳಿಗಳನ್ನು ನಕಲು ಮಾಡಲಾಗಿದೆ. ಇದರಿಂದ ರಾಜ್ಯ ಗುತ್ತಿಗೆದಾರರಿಗೆ ಅವಕಾಶ ಸಿಗುತ್ತಿಲ್ಲ. ಹೀಗಾಗಿ, ಅದನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದ ಅವರು, ನಮ್ಮ ಬೇಡಿಕೆಗಳನ್ನು ಈಡೇರಿಸಲಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಣ್ಣಪುಟ್ಟ ಕಾಮಗಾರಿಗಳನ್ನು ಒಂದು ಮಾಡಿ ಟೆಂಡರ್ ಕರೆಯುವುದನ್ನು ನಿಲ್ಲಿಸಿ, ಪ್ರತಿ ಕಾಮಗಾರಿಗೂ ಪ್ರತ್ಯೇಕವಾಗಿ ಟೆಂಡರ್ ಕರೆಯಬೇಕು. ಟೆಂಡರ್‌ನಲ್ಲಿ ಭಾಗವಹಿಸುವ ಗುತ್ತಿಗೆದಾರರು ಒಂದು ಲಕೋಟೆ ಪದ್ಧತಿಯನ್ನು ಹಾಲಿ ಇರುವ 50 ಲಕ್ಷದ ಮಿತಿಯನ್ನು ಐದು ಕೋಟಿ ರೂ.ಗಳಿಗೆ ಯಾವುದೇ ಷರತ್ತಿಲ್ಲದೆ ಏರಿಕೆ ಮಾಡಬೇಕು. ಗುತ್ತಿಗೆದಾರರಿಗೆ ಏಕರೂಪ ನಿಯಮಗಳನ್ನು ರಾಜ್ಯಕ್ಕೆ ಅನ್ವಯವಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ ನೀಡಬೇಕು. ಆನ್‌ಲೈನ್ ಪಾವತಿಯಲ್ಲಿ ಅಧೀಕ್ಷಕ ಅಭಿಯಂತರರ ಸಹಿಯನ್ನು ತಂತ್ರಾಂಶದಿಂದ ಕೈ ಬಿಡಬೇಕು. ಕೆಆರ್‌ಐಡಿಎಲ್ ಅಥವಾ ನಿರ್ಮಿತಿ ಕೇಂದ್ರಗಳಿಗೆ ನೇರವಾಗಿ ಕಾಮಗಾರಿ ವಹಿಸುವುದನ್ನು ನಿಲ್ಲಿಸಬೇಕು. ಇತರೆ ಗುತ್ತಿಗೆದಾರರಂತೆ ಟೆಂಡರ್‌ನಲ್ಲಿ ಭಾಗವಹಿಸಿ ಗುತ್ತಿಗೆ ಪಡೆಯುವಂತೆ ಮಾಡಬೇಕು. ಮಹಾರಾಷ್ಟ್ರದಂತೆ ಗುತ್ತಿಗೆದಾರರಿಗೆ ರಾಜ್ಯ ಸರಕಾರ ಜಿಎಸ್ಟಿ ತುಂಬಿಕೊಡಬೇಕು ಹಾಗೂ ಬಾಕಿ ಉಳಿಸಿಕೊಂಡಿರುವ 21 ತಿಂಗಳ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಅಂಬಿಕಾಪತಿ, ಕಾರ್ಯಾಧ್ಯಕ್ಷ ರಮೇಶ್, ಖಜಾಂಚಿ ಪುರುಷೋತ್ತಮ್, ಪೋಷಕ ಕೆಂಪಣ್ಣ ಉಪಸ್ಥಿತರಿದ್ದರು.