ಡೇವಿಸ್‌ಕಪ್‌ನಲ್ಲಿ ಪೇಸ್‌ಗೆ ಸ್ಥಾನ

Update: 2018-03-12 19:11 GMT

ಪುಣೆ, ಮಾ.12: ಹಿರಿಯ ಆಟಗಾರ ಲಿಯಾಂಡರ್ ಪೇಸ್ ಭಾರತದ ಡೇವಿಸ್‌ಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ರಾಷ್ಟ್ರೀಯ ಆಯ್ಕೆ ಸಮಿತಿಯು 44ರ ಹರೆಯದ ಪೇಸ್‌ರನ್ನು ಚೀನಾ ವಿರುದ್ಧ ಆಡಲಿರುವ ಭಾರತ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಭಾರತ ಎ.6-7ರಂದು ಟಿಯಾಂಜಿನ್‌ನಲ್ಲಿ ನಡೆಯಲಿರುವ ಏಷ್ಯಾ-ಓಶಿಯಾನಿಯಾ ಗ್ರೂಪ್-1 ಎರಡನೇ ರೌಂಡ್‌ನಲ್ಲಿ ಚೀನಾ ತಂಡವನ್ನು ಎದುರಿಸಲಿದೆ. ಕಳೆದ ಬೆಂಗಳೂರಿನಲ್ಲಿ ನಡೆದ ಉಜ್ಬೇಕಿಸ್ತಾನ ವಿರುದ್ಧ ಪಂದ್ಯದಲ್ಲಿ ಪೇಸ್‌ಗೆ ತಂಡದಲ್ಲಿ ಅವಕಾಶ ನೀಡದೇ ಮುಜುಗರ ಉಂಟು ಮಾಡಲಾಗಿತ್ತು. ‘‘ಇದೊಂದು ಬಲಿಷ್ಠ ತಂಡವಾಗಿದ್ದು, ನಮಗೆ ಉತ್ತಮ ಅವಕಾಶವಿದೆ’’ ಎಂದು ನಾಯಕ ಮಹೇಶ್ ಭೂಪತಿ ಪ್ರತಿಕ್ರಿಯಿಸಿದರು.

‘‘ಭಾರತದ ಪರ ಆಡುವುದು ಯಾವಾಗಲೂ ಗೌರವದ ವಿಷಯ. ನಾನು ರೋಹನ್(ಬೋಪಣ್ಣ)ಪ್ರತಿಭೆಯನ್ನು ಗೌರವಿಸುತ್ತೇನೆ. ಅವರೊಂದಿಗೆ ಆಡಲು ಎದುರು ನೋಡುತ್ತಿದ್ದೇನೆ. ಮತ್ತೊಮ್ಮೆ ನೀಲಿ ಜರ್ಸಿ ಧರಿಸಲು ಉತ್ಸುಕನಾಗಿದ್ದೇನೆ’’ ಎಂದು ಪೇಸ್ ಪ್ರತಿಕ್ರಿಯಿಸಿದರು.

ಪೇಸ್‌ರಲ್ಲದೆ, ಯೂಕಿ ಭಾಂಬ್ರಿ, ರಾಮ್‌ಕುಮಾರ್ ರಾಮನಾಥನ್, ಸುಮಿತ್ ನಗಾಲ್ ಹಾಗೂ ರೋಹನ್ ಬೋಪಣ್ಣ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಡಿವಿಜ್ ಶರಣ್ ಮೀಸಲು ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News