ನೇಪಾಳ ವಿಮಾನ ದುರಂತಕ್ಕೆ ಕಾರಣವಾದದ್ದೇನು?

Update: 2018-03-13 16:07 GMT

ಕಠ್ಮಂಡು, ಮಾ. 13: ನೇಪಾಳದ ಕಠ್ಮಂಡುವಿನಲ್ಲಿ ಸೋಮವಾರ ಸಂಭವಿಸಿದ ವಿಮಾನ ಅಪಘಾತಕ್ಕೆ, ಭೂಸ್ಪರ್ಶಕ್ಕೆ ಸಂಬಂಧಿಸಿ ಪೈಲಟ್ ಮತ್ತು ವಾಯು ಸಾರಿಗೆ ನಿಯಂತ್ರಣ ಸಿಬ್ಬಂದಿಯ ನಡುವೆ ತಲೆದೋರಿದ ಗೊಂದಲವೇ ಕಾರಣವಾಗಿದೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.

ಢಾಕಾದಿಂದ ಕಠ್ಮಂಡುಗೆ ಹಾರುತ್ತಿದ್ದ ಯುಎಸ್-ಬಾಂಗ್ಲಾ ಏರ್‌ಲೈನ್ಸ್ ಬಿಎಸ್211 ವಿಮಾನವು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ನಿಯಂತ್ರಣ ತಪ್ಪಿ ಸಮೀಪದ ಗದ್ದೆಗೆ ಅಪ್ಪಳಿಸಿರುವುದನ್ನು ಸ್ಮರಿಸಬಹುದಾಗಿದೆ.

ವಿಮಾನದಲ್ಲಿ 67 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಸೇರಿ 71 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 49 ಮಂದಿ ಮೃತಪಟ್ಟಿದ್ದಾರೆ.

ಸಣ್ಣ ವಿಮಾನ ನಿಲ್ದಾಣದ ರನ್‌ವೇಯ ಮೇಲಿನಿಂದಾಗಿ ವಿಮಾನ ಹೊಯ್ದಾಡಿದಾಗ, ಸಂಚಾರಿ ನಿಯಂತ್ರಕರು ರೇಡಿಯೊ ಮೂಲಕ ‘ನಾನು ಇನ್ನೊಮ್ಮೆ ಹೇಳುತ್ತಿದ್ದೇನೆ, ತಿರುಗಿ’ ಎಂದು ಗಟ್ಟಿಯಾಗಿ ಹೇಳಿರುವುದು ಕೇಳುತ್ತದೆ.

ಸೆಕೆಂಡ್‌ಗಳ ಬಳಿಕ, ವಿಮಾನ ರನ್‌ವೇ ಪಕ್ಕದ ಗದ್ದೆಗೆ ಅಪ್ಪಳಿಸಿತ್ತು ಹಾಗೂ ಬೆಂಕಿ ಹೊತ್ತಿಕೊಂಡಿತ್ತು.

ವಿಮಾನ ನಿಲ್ದಾಣದ ಒಂಟಿ ರನ್‌ವೇಯಲ್ಲಿ ವಿಮಾನ ಯಾವ ದಿಕ್ಕಿನಲ್ಲಿ ಇಳಿಯಬೇಕು ಎಂಬ ಬಗ್ಗೆ ಪೈಲಟ್ ಮತ್ತು ಸಂಚಾರ ನಿಯಂತ್ರಣ ಸಿಬ್ಬಂದಿ ನಡುವೆ ಹಲವು ನಿಮಿಷಗಳ ಕಾಲ ಗೊಂದಲಪೂರಿತ ಸಂಭಾಷಣೆ ನಡೆದಿದೆ.

‘‘ಅವರು ತೀರಾ ಗೊಂದಲಕ್ಕೊಳಗಾಗಿರುವಂತೆ ಕಂಡುಬರುತ್ತಿದೆ’’ ಎಂದು ವ್ಯಕ್ತಿಯೊಬ್ಬ ನೇಪಾಳಿ ಭಾಷೆಯಲ್ಲಿ ಹೇಳುವುದು ಕೇಳಿಸುತ್ತದೆ. ಆದರೆ, ಈ ಧ್ವನಿ ಪೈಲಟ್‌ನದೇ ಅಥವಾ ವಾಯು ಸಾರಿಗೆ ನಿಯಂತ್ರಣ ಸಿಬ್ಬಂದಿಯದೇ ಎನ್ನುವುದು ಖಚಿತವಾಗಿಲ್ಲ. ‘‘ಅವರು ನಿಜವಾಗಿಯೂ ಗೊಂದಲಕ್ಕೊಳಗಾಗಿರುವಂತೆ ತೋರುತ್ತಿದೆ’’ ಎಂದು ಇನ್ನೋರ್ವ ವ್ಯಕ್ತಿ ಹೇಳುತ್ತಾರೆ.

ಈ ಸಂಭಾಷಣೆಯ ಧ್ವನಿಮುದ್ರಣವನ್ನು ವಾಯು ಸಾರಿಗೆ ನಿಯಂತ್ರಣದ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ವಿಮಾನವು ರನ್‌ವೇಯನ್ನು ದಕ್ಷಿಣದಿಂದ ಅಥವಾ ಉತ್ತರದಿಂದ ಸಮೀಪಿಸಬೇಕೋ ಎಂಬ ವಿಚಾರದ ಬಗ್ಗೆ ಚರ್ಚೆಯಾಗುತ್ತಿತ್ತು.

ಭೂಸ್ಪರ್ಶಕ್ಕೆ ಅನುಮತಿ ಇದೆಯೇ?

ಭೂಸ್ಪರ್ಶ ಆರಂಭಕ್ಕೆ ಮೊದಲು ಪೈಲಟ್ ಕೇಳುತ್ತಾರೆ, ‘‘ಭೂಸ್ಪರ್ಶಕ್ಕೆ ನಮಗೆ ಅನುಮತಿ ಇದೆಯೇ?’’

ಕ್ಷಣಗಳ ಬಳಿಕ, ನಿಯಂತ್ರಣಾಧಿಕಾರಿ ಸಂಪರ್ಕಕ್ಕೆ ಮರಳಿ ಬಂದು ಪೈಲಟ್‌ಗೆ ಹೇಳುತ್ತಾರೆ, ‘‘ನಾನು ಇನ್ನೊಮ್ಮೆ ಹೇಳುತ್ತಿದ್ದೇನೆ, ತಿರುಗಿ’’. ಆಗ ಅವರ ಧ್ವನಿಯಲ್ಲಿನ ಕಳವಳವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು.

ಸೆಕೆಂಡ್‌ಗಳ ಬಳಿಕ, ರನ್‌ವೇಗೆ ಧಾವಿಸುವಂತೆ ನಿಯಂತ್ರಣಾಧಿಕಾರಿ ಅಗ್ನಿಶಾಮಕ ವಾಹನಗಳಿಗೆ ಆದೇಶ ಹೊರಡಿಸುವುದು ಕೇಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News