ಮಾಲ್ದೀವ್ಸ್ ಸರಕಾರದ ಮೇಲೆ ದಿಗ್ಬಂಧನ ವಿಧಿಸಿ

Update: 2018-03-13 16:19 GMT

ಲಂಡನ್, ಮಾ. 13: ಭಾರತ ನಾಯಕತ್ವ ವಹಿಸಿಕೊಳ್ಳಬೇಕು ಹಾಗೂ ಮಾಲ್ದೀವ್ಸ್‌ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಅಲ್ಲಿನ ಆಡಳಿತದ ವಿರುದ್ಧ ದಿಗ್ಬಂಧನಗಳನ್ನು ವಿಧಿಸಬೇಕು ಎಂದು ಮಾಲ್ದೀವ್ಸ್‌ನ ಮಾಜಿ ಉಪಾಧ್ಯಕ್ಷ ಮುಹಮ್ಮದ್ ಜಮೀಲ್ ಅಹ್ಮದ್ ಹೇಳಿದ್ದಾರೆ.

 ಅತ್ಯಂತ ಸಮೀಪದ ನೆರೆಯ ದೇಶ ಹಾಗೂ ಅತಿ ದೊಡ್ಡ ಪ್ರಜಾಸತ್ತೆಯಾಗಿರುವ ನೆಲೆಯಲ್ಲಿ, ಈ ಹಿಂದೆ ಮಾಡಿರುವಂತೆ, ಇನ್ನೊಂದು ಪ್ರಜಾಸತ್ತೆಯ ನೆರವಿಗೆ ಧಾವಿಸುವುದು ಭಾರತದ ನೈತಿಕ ಜವಾಬ್ದಾರಿಯಾಗಿದೆ ಎಂದು ಈಗ ಲಂಡನ್‌ನಲ್ಲಿ ನೆಲೆಸಿರುವ ಅಹ್ಮದ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅವರು 2013ರಿಂದ 2015ರವರೆಗೆ ಮಾಲ್ದೀವ್ಸ್‌ನ ಉಪಾಧ್ಯಕ್ಷರಾಗಿದ್ದರು.

ಜೈಲಿನಲ್ಲಿರುವ ಪ್ರತಿಪಕ್ಷಗಳ ನಾಯಕರನ್ನು ಬಿಡುಗಡೆ ಮಾಡಬೇಕು ಹಾಗೂ ಅಮಾನತುಗೊಂಡಿರುವ ಆಡಳಿತಾರೂಢ ಪಕ್ಷದ 12 ಸಂಸದರ ಸದಸ್ಯತ್ವವನ್ನು ಮರಳಿಸಬೇಕು ಎಂಬುದಾಗಿ ಕಳೆದ ತಿಂಗಳ ಆದಿ ಭಾಗದಲ್ಲಿ ಮಾಲ್ದೀವ್ಸ್ ಸುಪ್ರೀಂ ಕೋರ್ಟ್ ತೀರ್ಪು ನೀಡಿದಂದಿನಿಂದ ಆ ದೇಶದಲ್ಲಿ ಬಿಕ್ಕಟ್ಟು ನೆಲೆಸಿದೆ. ತೀರ್ಪನ್ನು ಪಾಲಿಸಲು ನಿರಾಕರಿಸಿದ ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಆರಂಭದಲ್ಲಿ 15 ದಿನಗಳ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಬಳಿಕ, ಅದನ್ನು ಇನ್ನೂ ಒಂದು ತಿಂಗಳ ಅವಧಿಗೆ ವಿಸ್ತರಿಸಿದ್ದಾರೆ.

ತುರ್ತು ಪರಿಸ್ಥಿತಿ ಹೇರಿದ ಬೆನ್ನಿಗೇ, ಸರಕಾರದ ವಿರುದ್ಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರನ್ನು ಪೊಲೀಸರು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.

ನಿರ್ಣಾಯಕ ಕ್ರಮ ತೆಗೆದುಕೊಳ್ಳಿ

 ‘‘ಭಾರತ ಯಾವತ್ತೂ ನಮ್ಮ ರಕ್ಷಣೆಗೆ ಬಂದಿದೆ. ಆದರೆ, ಈ ಬಾರಿ ಕೆಲವು ಹೇಳಿಕೆಗಳ ಹೊರತಾಗಿ, ಈ ವಿಷಯದಲ್ಲಿ ಭಾರತ ಹೆಚ್ಚಿನ ಪಾತ್ರ ವಹಿಸಿರುವುದನ್ನು ನಾನು ನೋಡಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿಗೆ ಹೇಳಬಯಸುತ್ತೇನೆ: ಸರ್, ಕಾಲ ನಮಗೆ ವಿರುದ್ಧವಾಗಿದೆ. ನಿರ್ಣಾಯಕ ಕ್ರಮ ತೆಗೆದುಕೊಳ್ಳಿ ಹಾಗೂ ಎಷ್ಟು ಸಾಧ್ಯವೋ ಅಷ್ಟು ಬೇಗ ಬಿಕ್ಕಟ್ಟು ಬಗೆಹರಿಸಿ’’ ಎಂದು ಜಮೀಲ್ ಅಹ್ಮದ್ ಹೇಳಿದರು.

ಭಾರತ ಚೀನಾದೊಂದಿಗೆ ಮಾತನಾಡಿ, ಎರಡೂ ದೇಶಗಳು ಜೊತೆಯಾಗಿ ಬಿಕ್ಕಟ್ಟನನ್ನು ನಿವಾರಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News