ಗೋವಾದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಶಿವಸೇನೆ ಆಗ್ರಹ

Update: 2018-03-13 16:44 GMT

ಪಣಜಿ,ಮಾ.13: ರಾಜ್ಯದಲ್ಲಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ಅನುಪಸ್ಥಿತಿಯಿಂದಾಗಿ ನಾಯಕನಿಲ್ಲದ ರಾಜ್ಯದಂತಾಗಿರುವ ಗೋವಾದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ಶಿವಸೇನೆ ಮಂಗಳವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

 ‘‘ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ವೈದ್ಯಕೀಯ ಚಿಕಿತ್ಸೆಗಾಗಿ ಕಳೆದ ವಾರ ಅಮೆರಿಕಕ್ಕೆ ನಿರ್ಗಮಿಸಿದ್ದಾರೆ. ಪಾರಿಕ್ಕರ್ ಅವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತಕ್ಕೆ ದಿಕ್ಕಿಲ್ಲದಂತಾಗಿದೆ ಹಾಗೂ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲು ಯಾರೂ ಇಲ್ಲದಂತಾಗಿದೆ’’ ಎಂದು ಗೋವಾದ ಶಿವಸೇನಾ ವಕ್ತಾರೆ ರಾಖಿ ಪ್ರಭುದೇಸಾಯಿ ನಾಯ್ಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಪಣಜಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಗೋವಾ ರಾಜ್ಯವು ತುರ್ತುಪರಿಸ್ಥಿತಿಯಂತಹ ಸನ್ನಿವೇಶವನ್ನು ಎದುರಿಸುತ್ತಿದೆಯೆಂದು ಬಿಜೆಪಿಯ ಮಿತ್ರಪಕ್ಷವಾದ ಗೋವಾ ಫಾರ್ವರ್ಡ್ ಪಾರ್ಟಿಯ ವರಿಷ್ಠರು ಇತ್ತೀಚೆಗೆ ನೀಡಿರುವ ಹೇಳಿಕೆಯು, ರಾಜ್ಯದ ಪ್ರಸಕ್ತ ಸ್ಥಿತಿಗತಿಯ ನೈಜ ಪ್ರತಿಬಿಂಬವಾಗಿದೆಯೆಂದು ನಾಯ್ಕಾ ಹೇಳಿದ್ದಾರೆ.

 ‘‘ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯವು ನಾಯಕತ್ವ ರಹಿತವಾಗಿದೆ.ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು’’ ಎಂಬುದಾಗಿ ಅವರು ಆಗ್ರಹಿಸಿದ್ದಾರೆ.

ಗಣಿಗಾರಿಕೆ ಉದ್ಯಮವು ಮುಚ್ಚುಗಡೆಯ ಭೀತಿಯನ್ನು ಎದುರಿಸುತ್ತಿರುವ ಸಮಯದಲ್ಲಿ ರಾಜ್ಯಕ್ಕೆ ನಾಯಕತ್ವರಹಿತವಾಗಿದೆ ಹಾಗೂ ಅದನ್ನು ಅವಲಂಭಿಸಿರುವ ಜನರ ಪರವಾಗಿ ಮಾತನಾಡಲೂ ಯಾರೂ ಇಲ್ಲದಂತಾಗಿದೆಯೆಂದು ಆಕೆ ಹೇಳಿದ್ದಾರೆ.

ಕಳೆದ ತಿಂಗಳು ಸುಪ್ರೀಂಕೋರ್ಟ್, ಗೋವಾದ 88 ಗಣಿಗಾರಿಕೆ ಕಂಪೆನಿಗಳಿಗೆ ನೀಡಲಾಗಿದ್ದ ಕಬ್ಬಿಣದ ಅದಿರು ಗಣಿಗಾರಿಕೆಯ ಪರವಾನಿಗೆಗಳ ನವೀಕರಣವನ್ನು ರದ್ದುಪಡಿಸಿತ್ತು.

ಚಿಕಿತ್ಸೆಗಾಗಿ ಪಾರಿಕ್ಕರ್ ಅವರು ಅಮೆರಿಕಕ್ಕೆ ನಿರ್ಗಮಿಸುವ ಮುನ್ನ ತನ್ನ ಅನುಪಸ್ಥಿತಿಯಲ್ಲಿ ರಾಜ್ಯದ ಆಡಳಿತಕ್ಕೆ ಮಾರ್ಗದರ್ಶನ ನೀಡಲು ವಿಜಯ್ ಸರ್ದೆಸಾಯಿ,ಸುದಿನ್ ದಾವಳಿಕರ್ ಹಾಗೂ ಫ್ರಾನ್ಸಿಸ್ ಡಿಸೋಜಾ ಅವರನ್ನು ಒಳಗೊಂಡ ಸಂಪುಟ ಸಲಹಾ ಸಮಿತಿಯೊಂದನ್ನು ರಚಿಸಿದ್ದರು. ಆದಾಗ್ಯೂ ಕಬ್ಬಿಣದ ಆದಿರಿನ ಗಣಿಗಳು ಮುಚ್ಚುಗಡೆಗೊಂಡ ಆನಂತರ ಉದ್ಭವಿಸಬಹುದಾದ ಸನ್ನಿವೇಶಗಳ ಬಗ್ಗೆ ಚರ್ಚಿಸಲು ಈ ಸಮಿತಿಯು ಒಂದೂ ಬಾರಿಯೂ ಸಭೆ ನಡೆಸಿಲ್ಲವೆಂದು ನಾಯ್ಕಾ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News