ದೇವಾಲಯಕ್ಕೆ ದಲಿತರ ಪ್ರವೇಶ ನಿಷೇಧ ಸರಿಯೇ?

Update: 2018-03-13 18:41 GMT

ಮಾನ್ಯರೇ,

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕಸಬಾ ಹೋಬಳಿ ಬಿಳಿ ದೇವಾಲಯ ಗ್ರಾಮದ ಕೆಂಕೇರಮ್ಮ ದೇವಾಲಯಕ್ಕೆ ದಲಿತರ ಪ್ರವೇಶವನ್ನು ವಿರೋಧಿಸಿರುವ ಘಟನೆ ವಿಷಾದಕರವಾದುದು. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತೀ ವರ್ಷ ನಡೆಯುವ ಹಬ್ಬ, ಜಾತ್ರೆಗಳು ಗ್ರಾಮದ ಜನರ ನಡುವೆ ಪರಸ್ಪರ ಪ್ರೀತಿ-ವಿಶ್ವಾಸವನ್ನು ವೃದ್ಧ್ದಿಸಿ ಮನರಂಜನೆ, ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಸಂತೋಷ, ಸಂಭ್ರಮವನ್ನು ಹಂಚಿಕೊಳ್ಳುವ ಒಂದು ಅಪರೂಪದ ಸನ್ನಿವೇಶವಾಗಿರುತ್ತದೆ. ಹಾಗಿರುವಾಗ ಇಲ್ಲಿ ಇಂತಹ ಕ್ಷುಲ್ಲಕ ವಿವಾದಗಳು ದಿಢೀರನೆ ಮೇಲೆದ್ದು ಗ್ರಾಮದ ಜನರಲ್ಲಿ ವೈಷಮ್ಯ ಮೂಡಿಸಿ ಊರಹಬ್ಬಗಳು ಆತಂಕದ, ಭೀತಿಯ ಹಾಗೂ ವಿಷಾದದ ಸಂಗತಿಗಳಾಗಿ ಮಾರ್ಪಡುವುದು ನಿಜಕ್ಕೂ ಗ್ರಾಮದ ಘನತೆಗೆ ತಕ್ಕುದಾದುದಲ್ಲ.

ದೇವಾಲಯಗಳಿಗೆ ದಲಿತರ ಪ್ರವೇಶವನ್ನು ನಿರಾಕರಿಸುವ ಅನಕ್ಷರಸ್ಥರು, ಜಾತಿವಾದಿಗಳನ್ನು ಆ ಗ್ರಾಮದ ಸವರ್ಣೀಯ ಸಮುದಾಯಕ್ಕೆ ಸೇರಿದ ಪ್ರಜ್ಞಾವಂತ, ವಿದ್ಯಾವಂತ ಯುವಜನರೇ ಸಾಮಾಜಿಕ ಅರಿವನ್ನು ಮೂಡಿಸಿ, ಗ್ರಾಮದಲ್ಲಿ ಸಾಮರಸ್ಯ, ಸಹಬಾಳ್ವೆಗೆ ಪ್ರೇರಣೆ ನೀಡುವಂತಹ ವಾತಾವರಣವನ್ನು ನಿರ್ಮಿಸಬೇಕಾದದ್ದು ಅತ್ಯಂತ ಜವಾಬ್ದಾರಿಯುತ ಯುವ ನಾಗರಿಕ ಸಮಾಜದ ಕರ್ತವ್ಯವಾಗಿದೆ. ಜಾತಿ ಗಲಭೆ, ಪರಸ್ಪರ ನಿಂದನೆ, ಹೊಡೆದಾಟ, ಪೊಲೀಸರ ಮಧ್ಯ ಪ್ರವೇಶ, ಕೋರ್ಟು ಕಚೆೇರಿಗಳ ಅಲೆದಾಟದಿಂದ ಯಾವ ವೈಭವದ ಹಬ್ಬಗಳು ತಾನೆ ಸಾರ್ಥಕ ಗೊಂಡಾವು? ಯಾವ ಸಮುದಾಯಕ್ಕೆ ನೆಮ್ಮದಿ ಸಿಕ್ಕೀತು? ಜಾತಿ ವ್ಯವಸ್ಥೆಯಿಂದ ಬಂಡಾಯವೆದ್ದು ಇತರ ಧರ್ಮಗಳತ್ತ ಮುಖಮಾಡುತ್ತಿರುವ ಸನ್ನಿವೇಶಗಳು ನಮ್ಮ ನಡುವೆ ಇದ್ದಾಗ್ಯೂ, ಜನರ ನಂಬಿಕೆ ಮತ್ತು ಗ್ರಾಮಗಳ ಸಾಮರಸ್ಯ ಬದುಕಿನ ಕೊಂಡಿಯಂತೆ ನಡೆಯುವ ಇಂತಹ ಹಬ್ಬ ಜಾತ್ರೆಗಳಲ್ಲಿ ಜಾತಿ ಗಲಭೆಗಳು ನಡೆಯುತ್ತಿರುವುದು ದುರದೃಷ್ಟಕರ,
 
ಇನ್ನಾದರೂ ಇಂತಹ ಅಪರಾಧ ಕೃತ್ಯಗಳು ನಡೆಯದಂತೆ ಜಾಗರೂಕತೆ ವಹಿಸುವುದು ಮತ್ತು ಗ್ರಾಮಕ್ಕೆ ಜಾತಿ, ಮತಗಳ ಸೋಂಕು ವ್ಯಾಪಿಸದಂತೆ ಎಚ್ಚರ ವಹಿಸುವುದು ಎಲ್ಲಾ ಜಾತಿ ಸಮುದಾಯಗಳ ಮುಂದಿರುವ ಬಹು ದೊಡ್ಡ ಸಾಮಾಜಿಕ ಹೊಣೆಗಾರಿಕೆಯಾಗಿದೆ. 

Writer - -ಗೌಡಗೆರೆ ಮಾಯುಶ್ರೀ

contributor

Editor - -ಗೌಡಗೆರೆ ಮಾಯುಶ್ರೀ

contributor

Similar News