ಸೈನಾಗೆ ಸೋಲು: ಶ್ರೀಕಾಂತ್, ಸಿಂಧು ಶುಭಾರಂಭ

Update: 2018-03-14 18:13 GMT

ಹೊಸದಿಲ್ಲಿ, ಮಾ.14: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲೇ ಮುಗ್ಗರಿಸಿ ನಿರಾಸೆಗೊಳಿಸಿದರು. ಕೆ. ಶ್ರೀಕಾಂತ್ ಹಾಗೂ ಪಿ.ವಿ. ಸಿಂಧು ಎರಡನೇ ಸುತ್ತಿಗೆ ತೇರ್ಗಡೆಯಾಗಿ ಶುಭಾರಂಭ ಮಾಡಿದರು. ಬುಧವಾರ 38 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.11ನೇ ಆಟಗಾರ್ತಿ ಸೈನಾ ಚೈನೀಸ್ ತೈಪೆಯ ಬದ್ಧ ಎದುರಾಳಿ ತೈ ಝು ಯಿಂಗ್ ವಿರುದ್ಧ 14-21, 18-21 ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಒಂದು ಗಂಟೆ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ಫ್ರಾನ್ಸ್‌ನ ಬ್ರೈಸ್ ಲೆವೆರ್ಡೆಝ್ ವಿರುದ್ಧ ಕಠಿಣ ಸವಾಲು ಎದುರಿಸಿದರೂ 7-21, 21-14, 22-20 ಗೇಮ್‌ಗಳಿಂದ ಜಯ ಸಾಧಿಸಿದರು.

ಭಾರತದ ಪ್ರಶಸ್ತಿ ಫೇವರಿಟ್ ಪಿ.ವಿ.ಸಿಂದು ಮತ್ತೊಂದು ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಪಾರ್ನ್‌ಪಾವೀ ಚೊಚುವಾಂಗ್‌ರನ್ನು 20-22,21-17,21-9 ಸೆಟ್‌ಗಳಿಂದ ಸೋಲಿಸಿದರು.

 ಸಿಂಧು 2ನೆೇ ಸುತ್ತಿನಲ್ಲಿ ಥಾಯ್ಲೆಂಡ್‌ನ ನಿಟ್ಚಾಯೊನ್ ಜಿಂದಾಪೊಲ್‌ರನ್ನು ಎದುರಿಸಲಿದ್ದಾರೆ. ಜಿಂದಾಪೊಲ್ ಅಮೆರಿಕದ ಬೆವೆನ್ ಝಾಂಗ್‌ರನ್ನು 21-18, 21-14 ರಿಂದ ಸೋಲಿಸಿದ್ದರು. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಸಾಯಿ ಪ್ರಣೀತ್ ಕೊರಿಯಾದ ಸನ್ ವ್ಯಾನ್ ಹೊ ವಿರುದ್ಧ 21-13, 15-21,11-21 ಗೇಮ್‌ಗಳಿಂದ ಸೋತಿದ್ದಾರೆ. ಮೊದಲ ಗೇಮ್‌ನಲ್ಲಿ ಉಭಯ ಆಟಗಾರ್ತಿಯರ ಸ್ಕೋರ್ 14-14 ರಿಂದ ಸಮಬಲಗೊಂಡಿತ್ತು. ಆಗ ಸತತ 7 ಅಂಕ ಗಳಿಸಿದ ಯಿಂಗ್ 16 ನಿಮಿಷದಲ್ಲಿ ಮೊದಲ ಗೇಮ್‌ನ್ನು 21-14 ರಿಂದ ಗೆದ್ದುಕೊಂಡರು.

 ಸೈನಾ 2ನೇ ಗೇಮ್‌ನಲ್ಲಿ 16-11 ಮುನ್ನಡೆಯಲ್ಲಿದ್ದರು. ಆದರೆ, ಸತತ 4 ಅಂಕ ಗಳಿಸಿದ ಯಿಂಗ್ ಸ್ಕೋರನ್ನು 15-16ಕ್ಕೆ ತಲುಪಿಸಿದರು. ಆ ಬಳಿಕ ಸೈನಾ ಪಂದ್ಯದ ಮೇಲಿನ ಹಿಡಿತ ಕಳೆದುಕೊಂಡರು. ಯಿಂಗ್ 12 ನಿಮಿಷಗಳಲ್ಲಿ 2ನೇ ಗೇಮ್‌ನ್ನು 21-18 ರಿಂದ ಗೆದ್ದುಕೊಂಡರು.

        ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಮೇಘನಾ ಜಕ್ಕಂಪುಡಿ ಹಾಗೂ ಪೂರ್ವಿಶಾ ರಾಮ್ ಮೊದಲ ಸುತ್ತಿನ ಪಂದ್ಯದಲ್ಲಿ 5ನೇ ಶ್ರೇಯಾಂಕದ ಜಪಾನ್‌ನ ಶಿಹೊ ತನಕಾ ಹಾಗೂ ಕೊಹರು ಯೊನೆಮೊಟೊ ವಿರುದ್ದ 14-21, 11-21 ಗೇಮ್‌ಗಳಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News