ಭಾರತದ ಕಾಮನ್ವೆಲ್ತ್ ಗೇಮ್ಸ್ ಹಾಕಿ ತಂಡಕ್ಕೆ ರಾಣಿ ನಾಯಕಿ

Update: 2018-03-14 18:20 GMT

ಹೊಸದಿಲ್ಲಿ, ಮಾ.14: ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತದ ಮಹಿಳಾ ಹಾಕಿ ತಂಡ ಬುಧವಾರ ಪ್ರಕಟಗೊಂಡಿದ್ದು, 18 ಮಂದಿ ಆಟಗಾರ್ತಿಯರ ಭಾರತದ ಹಾಕಿ ತಂಡಕ್ಕೆ ಸ್ಟ್ರೈಕರ್ ರಾಣಿ ರಾಂಪಾಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

 ಗೋಲ್ ಕೀಪರ್ ಸವಿತಾ ಪೂನಿಯಾ ಉಪ ನಾಯಕಿಯಾಗಿರುತ್ತಾರೆ. ಅವರು 200ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದಾರೆ. ಪ್ರಮುಖ ಟೂರ್ನಮೆಂಟ್‌ಗಳ ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಗೋಲು ಕೀಪರ್ ಆಗಿ ಆಡಿರುವ ಅನುಭವ ಹೊಂದಿದ್ದಾರೆ. ಸವಿತಾ ಪೂನಿಯಾ ಅವರಿಗೆ ಇತ್ತೀಚೆಗೆ ದಕ್ಷಿಣ ಕೊರಿಯಾ ವಿರುದ್ಧದ ಸರಣಿಗೆ ವಿಶ್ರಾಂತಿ ನೀಡಲಾಗಿತ್ತು.

 ಕಾಮನ್‌ವೆಲ್ತ್‌ಗೇಮ್ಸ್ ಎ.5ರಂದು ಆಸ್ಟ್ರೇಲಿಯದಲ್ಲಿ ಆರಂಭಗೊಳ್ಳಲಿದೆ. ಭಾರತ ಮೊದಲ ಪಂದ್ಯದಲ್ಲಿ ವೇಲ್ಸ್ ತಂಡವನ್ನು ಎದುರಿಸಲಿದೆ. ಭಾರತ ‘ಎ’ ಗುಂಪಿನಲ್ಲಿ ವೇಲ್ಸ್, ಮಲೇಷ್ಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕ ತಂಡದೊಂದಿಗೆ ಸ್ಥಾನ ಪಡೆದಿದೆ.

  ಇತ್ತೀಚೆಗೆ ಅಗ್ರ ಶ್ರೇಯಾಂಕದ ದಕ್ಷಿಣ ಕೊರಿಯಾ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ ಭಾರತ 3-1 ಅಂತರದಲ್ಲಿ ಜಯ ಗಳಿಸಿತ್ತು. 2017ರ ಏಷ್ಯಾಕಪ್‌ನಲ್ಲೂ ಭಾರತದ ಆಟಗಾರ್ತಿಯರು ಉತ್ತಮವಾಗಿ ಆಡಿದ್ದರು.

 ಭಾರತ 2002ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು 3-2 ಅಂತರದಲ್ಲಿ ಮಣಿಸಿ ಚಿನ್ನ ಗೆದ್ದುಕೊಂಡಿತ್ತು. ಆಸ್ಟ್ರೇಲಿಯದಲ್ಲಿ 2006ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಸೋಲು ಅನುಭವಿಸಿ ಬೆಳ್ಳಿ ಗೆದ್ದುಕೊಂಡಿತ್ತು. 2010 ಮತ್ತು 2014ರ ಆವೃತ್ತಿಯ ಟೂರ್ನಮೆಂಟ್‌ನಲ್ಲಿ ಭಾರತ 5ನೇ ಸ್ಥಾನ ಪಡೆದಿತ್ತು.

2002ರಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಭಾರತ ನೀಡಿರುವ ಪ್ರದರ್ಶನದಂತೆ ಈ ಬಾರಿಯ ಟೂರ್ನಿಯಲ್ಲೂ ಅತ್ಯುತ್ತಮವಾಗಿ ಆಡಿ ಚಿನ್ನ ಗೆಲ್ಲಲಿದೆ ಎಂದು ನಾಯಕಿ ರಾಣಿ ರಾಂಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ತಂಡ

ಗೋಲ್‌ಕೀಪರ್ಸ್‌ :ಸವಿತಾ ಪೂನಿಯಾ (ಉಪನಾಯಕಿ), ರಜನಿ ಈಟಿಮಾರ್ಪು

ಡಿಫೆಂಡರ್ಸ್‌ : ದೀಪಿಕಾ, ಸುನೀತಾ ಲಾಕ್ರಾ, ದೀಪಾ ಗ್ರೇಸಿ ಎಕ್ಕಾ, ಗುರ್ಜಿತ್ ಕೌರ್, ಸುಶೀಲಾ ಚಾನು.

ಮಿಡ್‌ಫೀಲ್ಡರ್ಸ್‌: ಮೋನಿಕಾ, ನಮಿತಾ ಟೊಪೊ, ನಿಕ್ಕಿ ಪ್ರಧಾನ್, ನೇಹಾ ಗೋಯಲ್, ಲಿಲ್ಮಾ ಮಿಂಝ್

ಫಾರ್ವಡ್ಸ್: ರಾಣಿ ರಾಂಪಾಲ್(ನಾಯಕಿ), ವಂದನಾ ಕಟಾರಿಯಾ, ಲಾಲ್ರೆಮ್‌ಸಿಯಾಮಿ, ನವ್‌ಜೋತ್ ಕೌರ್, ನವ್‌ನೀತ್ ಕೌರ್, ಪೂನಮ್ ರಾಣಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News