ವೋಝ್ನಿಯಾಕಿಗೆ ಸೋಲು, ಹಾಲೆಪ್, ಕೆರ್ಬರ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Update: 2018-03-14 18:25 GMT

ಇಂಡಿಯನ್ ವೆಲ್ಸ್, ಮಾ.14: ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕರೊಲಿನ್ ವೋಝ್ನಿಯಾಕಿ ಆಘಾತಕಾರಿ ಸೋಲುಂಡಿದ್ದಾರೆ.

  ಮಂಗಳವಾರ ನಡೆದ ಪಂದ್ಯದಲ್ಲಿ ವೋಝ್ನಿಯಾಕಿ ಅವರು ಡರ್ಯಾ ಕಸಟ್‌ಕಿನಾ ವಿರುದ್ಧ 6-4, 7-5 ಸೆಟ್‌ಗಳ ಅಂತರದಿಂದ ಶರಣಾಗಿದ್ದಾರೆ. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸಿಮೊನಾ ಹಾಲೆಪ್ ಚೀನಾದ ವಾಂಗ್ ಖಿಯಾಂಗ್‌ರನ್ನು 7-5,6-1 ಸೆಟ್‌ಗಳಿಂದ ಸೋಲಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಪೆಟ್ರಾ ಮಾರ್ಟಿಕ್‌ರನ್ನು ಎದುರಿಸಲಿದ್ದಾರೆ. ಕಸಟ್‌ಕಿನಾ ಕ್ವಾರ್ಟರ್‌ಫೈನಲ್‌ನಲ್ಲಿ 10ನೇ ಶ್ರೇಯಾಂಕದ ಆ್ಯಂಜೆಲಿಕ್ ಕೆರ್ಬರ್‌ರನ್ನು ಎದುರಿಸಲಿದ್ದಾರೆ. ಕೆರ್ಬರ್ ಅವರು ಕರೊಲಿನಾ ಗಾರ್ಸಿಯಾರನ್ನು 6-1,6-1 ನೇರ ಸೆಟ್‌ಗಳಿಂದ ಮಣಿಸಿದರು. ವಿಶ್ವದ ಮಾಜಿ ನಂ.1 ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ತನ್ನ ಶಕ್ತಿಶಾಲಿ ಸರ್ವ್ ಮೂಲಕ 16ರ ಹರೆಯದ ಅಮೆರಿಕ ಆಟಗಾರ್ತಿ ಅಮಂಡಾ ಅನಿಸಿಮೊವಾರನ್ನು 6-1,7-6(2) ಸೆಟ್‌ಗಳಿಂದ ಸೋಲಿಸುವ ಮೂಲಕ ಸತತ ಮೂರನೇ ವರ್ಷ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಪ್ಲಿಸ್ಕೋವಾ ಮುಂದಿನ ಸುತ್ತಿನಲ್ಲಿ ಜಪಾನ್‌ನ 20ರ ಹರೆಯದ ನಯೊಮಿ ಒಸಾಕಾರನ್ನು ಎದುರಿಸಲಿದ್ದಾರೆ. ಒಸಾಕಾ ಅವರು ಮರಿಯಾ ಸಕ್ಕಾರಿ ಅವರನ್ನು 6-5, 5-7, 6-1 ಸೆಟ್‌ಗಳಿಂದ ಸೋಲಿಸಿ ಮೊದಲ ಬಾರಿ ಇಂಡಿಯನ್ ವೆಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News