ಬೆಂಗಳೂರು: ಖಾಯಂ ನೇಮಕಾತಿಗಾಗಿ ಆಗ್ರಹಿಸಿ ಮುನಿಸಿಪಲ್ ಕಾರ್ಮಿಕರ ಧರಣಿ

Update: 2018-03-15 18:06 GMT

ಬೆಂಗಳೂರು, ಮಾ.15: ನೇರ ನೇಮಕಾತಿ ಬದಲಿಗೆ ಖಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘಟನೆ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೂ ಸಾವಿರಾರು ಸಂಖ್ಯೆಯಲ್ಲಿ ಮುನಿಸಿಪಲ್ ಕಾರ್ಮಿಕರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್, ಕರ್ನಾಟಕ ರಾಜ್ಯದ ನಗರ ಸ್ಥಳಿಯ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ, ನಗರ ಪಾಲಿಕೆ, ಮಹಾನಗರ-ಪಾಲಿಕೆಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಪೌರ ಕಾರ್ಮಿಕರು, ಲೋಡರ್‌ಗಳು ವಾಟರ್ ಮೆನ್‌ಗಳು, ಕಸ ಸಂಗ್ರಹದ ಆಟೊ ಚಾಲಕರು, ಸಹಾಯಕರು, ಕಂಪ್ಯೂಟರ್ ಅಪರೇಟರ್‌ಗಳು ಹಾಗು ಕಚೇರಿ ಸಹಾಯಕರು, ಎಲೆಕ್ಟ್ರಿಷಿಯನ್‌ಗಳು ದುಡಿಯುತ್ತಾ ಬಂದಿದ್ದಾರೆ. ಆದರೆ, ಅವರು ಸರಿಯಾದ ಭದ್ರತೆಯಿಲ್ಲದೆ ನರಳುತ್ತಿದ್ದಾರೆ ಎಂದರು.

ಸರಕಾರದ ಸೂಚನೆಯಂತೆ ಜಿಲ್ಲಾಧಿಕಾರಿಗಳು ಪೌರ ಕಾರ್ಮಿಕರನ್ನು ನೇರ ನೇಮಕಾತಿ ಪ್ರಕ್ರಿಯೆಯನ್ನು ಜಾರಿ ಮಾಡಿದೆ. ಆದರೆ, ಹಾಲಿ ಕೆಲಸ ಮಾಡುತ್ತಿರುವ ಬಹುತೇಕ ದಲಿತ ಸಮುದಾಯಕ್ಕೆ ಸೇರಿದವರಿಗೆ ಅವಕಾಶ ನೀಡಲು ಮುಂದಾಗುತ್ತಿಲ್ಲ. ಇದರಿಂದಾಗಿ ಹತ್ತಾರು ವರ್ಷಗಳಿಂದ ದುಡಿದುಕೊಂಡು ಬರುತ್ತಿರುವವರು ಮುಂದೇನು ಎಂಬ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇತನ ಹೆಚ್ಚಳ ಹಾಗೂ ಖಾಯಂಗೊಳಿಸಲಾಗುತ್ತದೆ ಎಂದು ನಾಟಕ ಮಾಡಿದ ಸರಕಾರ ಇದೀಗ, ಹತ್ತಾರು ವರ್ಷಗಳಿಂದ ದುಡಿದ ಗುತ್ತಿಗೆ ಮುನಿಸಿಪಲ್ ಕಾರ್ಮಿಕರನ್ನು ಕೆಲಸದಿಂದ ತೆಗೆದು, ಅದೇ ಕೆಲಸಕ್ಕೆ ಸ್ಥಳಿಯ ಪ್ರಭಾವಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಖಂಡನೀಯವಾದುದಾಗಿದ್ದು, ಕೂಡಲೇ ಈ ಆದೇಶಕ್ಕೆ ತಡೆ ನೀಡಬೇಕು. ಕಾರಣವಿಲ್ಲದೆ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಹಾಲಿ ದುಡಿಯುತ್ತಿರುವ ಎಲ್ಲ ಗುತ್ತಿಗೆ ಮುನಿಸಿಪಲ್ ಕಾರ್ಮಿಕರನ್ನು ಖಾಯಂಗೊಳಿಸಲು ಸರಕಾರ ಮುಂದಾಗಬೇಕು ಹಾಗೂ ಸುಪ್ರೀಂಕೋರ್ಟ್‌ನ ತೀರ್ಪಿನಂತೆ ಸಮಾನಕೆಲಸಕ್ಕೆ ಸಮಾನ ವೇತನ ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಹಲವಾರು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಇದೀಗ ಕಾರ್ಮಿಕ ವಿರೋಧಿ ನೀತಿ ಅನುಸರಿಸಲು ಮುಂದಾಗಿರುವ ಸರಕಾರದ ಕ್ರಮ ಖಂಡನೀಯ ಎಂದರು.

ಸಂಬಳ ಹೆಚ್ಚಳವಾದ ನಂತರ ಪ್ರತಿ ತಿಂಗಳ ಸಂಬಳವನ್ನು ನೀಡದೆ 3-4 ತಿಂಗಳಿಗ ಒಮ್ಮೆ ಮಾತ್ರ ಸಂಬಳ ನೀಡಲಾಗುತ್ತಿದೆ. ಹೀಗಾಗಿ, ಎಲ್ಲಾ ಗುತ್ತಿಗೆ ಮುನಿಸಿಪಲ್ ಕಾರ್ಮಿರ ಸಂಬಳವನ್ನು ಪ್ರತಿ ತಿಂಗಳು 10 ರೊಳಗೆ ಪಾವತಿ ಮಾಡಬೇಕು. ಇದಕ್ಕೆ ಅಗತ್ಯವಾದ ಹಣ ರಾಜ್ಯ ಸರಕಾರ ಎಸ್‌ಎಫ್‌ಸಿ ಅಡಿಯಲ್ಲಿ ನೀಡಬೇಕು. ಕಾರ್ಮಿಕರಿಗೆ ಪಿಎಫ್, ಇಎಸ್, ಬೋನಸ್, ಮರಣ ಹೊಂದಿದ ಕಾರ್ಮಿಕರ ಅವಲಂಬಿತರಿಗೆ ಸಹಾಯ ಧನ ನೀಡಬೇಕು ಎಂದು ಅವರು ಮನವಿ ಮಾಡಿದರು.

ಹಕ್ಕೊತ್ತಾಯಗಳು: ಎಲ್ಲಾ ಗುತ್ತಿಗೆ ಮುನಿಸಿಪಲ್ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಬೇಕು. ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನ ಜಾರಿ ಮಾಡಬೇಕು. ನೇರ ನೇಮಕಾತಿಯನ್ನು ಕೈಬಿಟ್ಟು ಹಾಲಿ ದುಡಿಯುತ್ತಿರುವವವರ ಖಾಯಂ ಮಾಡಬೇಕು. ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕು. ಪ್ರತಿ ತಿಂಗಳ 10 ರೊಳಗೆ ಸಂಬಳ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News