×
Ad

ಮೈಥಿಲಿ ರಮೇಶ್ ಕರ್ಣಾಟಕ ಬ್ಯಾಂಕ್‌ನ ಹೆಚ್ಚುವರಿ ನಿರ್ದೇಶಕರಾಗಿ ನೇಮಕ

Update: 2018-03-16 22:54 IST

ಬೆಂಗಳೂರು, ಮಾ.16: ಮೈಥಿಲಿ ರಮೇಶ್ ಅವರನ್ನು ಕರ್ಣಾಟಕ ಬ್ಯಾಂಕ್‌ನ ಹೆಚ್ಚುವರಿ ನಿರ್ದೇಶಕಿಯಾಗಿ ನೇಮಕ ಮಾಡಲಾಗಿದೆ. ಮಾರ್ಚ್ 14ರಂದು ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಗಿಂಡಿಯ ಇಂಜಿನಿಯರ್ ಕಾಲೇಜಿನಲ್ಲಿ ಕಂಪ್ಯೂಟರ್ ಸಯನ್ಸ್‌ನಲ್ಲಿ ಪದವಿ ಕಲಿತ ಮೈಥಿಲಿಯವರು ಐಐಎಂ ಅಹ್ಮದಾಬಾದ್‌ನಲ್ಲಿ ಎಂಬಿಎ ಮುಗಿಸಿದರು. ಬೆಂಗಳೂರು ಮೂಲದ 52ರ ಹರೆಯದ ಮೈಥಿಲಿಯವರು 28 ವರ್ಷಗಳ ಅಗಾಧ ಅನುಭವವನ್ನು ಹೊಂದಿದ್ದಾರೆ. ವಿಪ್ರೊದಲ್ಲಿ ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ಮೈಥಿಲಿಯವರು ಗ್ರಾಹಕ ಸಹಾಯಕ ಕಾರ್ಯನಿರ್ವಾಹಕರಿಂದ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೇರಿದವರು.

ವಿಪ್ರೊದಲ್ಲಿ ಹಲವು ಕ್ಷೇತ್ರಗಳಲ್ಲಿ ದುಡಿದು ಎಲ್ಲಾ ಕ್ಷೇತ್ರಗಳನ್ನೂ ಔನತ್ಯಕ್ಕೇರಿಸಿದ ಖ್ಯಾತಿ ಮೈಥಿಲಿಯವರದ್ದು. ಕೊನೆಯಲ್ಲಿ ವಿಪ್ರೊದ ಬಿಪಿಒದಲ್ಲಿ ದುಡಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೂ ಅಭೂಪತಪೂರ್ವ ಬದಲಾವಣೆಗಳನ್ನು ತರುವ ಮೂಲಕ ಮೈಥಿಲಿ ತಾವು ದುಡಿಯುವ ಸಂಸ್ಥೆಗೆ ಹೆಸರು ತಂದು ಕೊಟ್ಟಿದ್ದಾರೆ. 2006 ಮತ್ತು 2007ರಲ್ಲಿ ಇಂಡಿಯಾ ಟುಡೆ ಮತ್ತು ಡೇಟಾಕ್ವೆಸ್ಟ್ ಮೈಥಿಲಿಯವರನ್ನು ಭಾರತದ 25 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹೆಸರಿಸಿತ್ತು. 2010ರಲ್ಲಿ ಮೈಥಿಲಿ ಮತ್ತು ವಿಪ್ರೊದ ಆಕೆಯ ಕೆಲವು ಸಹೋದ್ಯೋಗಿಗಳು ಸೇರಿ ನೆಕ್ಟ್ಸ್ ವೆಲ್ತ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆಯ ಮೂಲಕ ಸಣ್ಣ ಪಟ್ಟಣಗಳಲ್ಲಿ ಹತ್ತು ಸಾವಿರ ಉದ್ಯೋಗವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಲಾಗಿದೆ. ಸದ್ಯ ಮೈಥಿಲಿ ಈ ಸಂಸ್ಥೆಯ ಸಹಸಂಸ್ಥಾಪಕಿ ಮತ್ತು ಸಿಇಒ ಆಗಿದ್ದಾರೆ. ಮೈಥಿಲಿಯವರು ವೆಪ್ ಸೊಲ್ಯೂಶನ್ಸ್ ಲಿ., ನ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೆಪ್ ಡಿಜಿಟಲ್‌ನ ಸ್ವತಂತ್ರ ನಿರ್ದೇಶಕಿಯಾಗಿದ್ದಾರೆ ಮತ್ತು ಹೆಣ್ಮಕ್ಕಳ ಶಿಕ್ಷಣಕ್ಕಾಗಿ ದುಡಿಯುವ ಸರಕಾರೇತರ ಸಂಸ್ಥೆ ಐಇಂಪ್ಯಾಕ್ಟ್‌ನ ಸಮಿತಿಯ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News