ಉಪರಾ ಓದಿದಾಗ...

Update: 2018-03-17 09:22 GMT

ಲಕ್ಷ್ಮಣ ಮಾನೆ ಇಂಥ ದಟ್ಟದರಿದ್ರ ಕೈಕಾಡಿ ಎಂಬ ಅಲೆಮಾರಿ ಕುಟುಂಬದಲ್ಲಿ ಹುಟ್ಟಿ ತಾನು ಪಟ್ಟ ಪಾಡನ್ನು ಯಥಾವತ್ತಾಗಿ ಕಥನಿಸಿದ್ದಾರೆ. ಇಂಥ ಒಂದು ಬದುಕು ಯಾವ ನಮ್ಮ ವೈರಿಗೂ ಬೇಡ ಎನ್ನುವಂಥ ದಾರುಣ ಬದುಕು. ಊರೂರಿಗೆ ಕತ್ತೆಯ ಮೇಲೆ ತಮ್ಮ ಬಿಡಾರವನ್ನು ಸಾಗಿಸುತ್ತ ಊರಹೊರಗಿರುವ ಹೇಲುಗೇರಿಯಲ್ಲಿ ಇವರ ಟೆಂಟು. ಅಲ್ಲಿ ಸ್ವಲ್ಪದಿನಗಳ ಕಾಲ ಹೊಟ್ಟೆಪಾಡು ಮಾಡಿಕೊಂಡು ಮತ್ತೆ ಮುಂದಿನ ಊರಿಗೆ ಪಯಣ.

‘‘ಉಪರಾ’’ ಇದು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿ. ಈ ಕೃತಿಯು ಇಪ್ಪತ್ತಕ್ಕಿಂತಲೂ ಹೆಚ್ಚು ಬಾರಿ ಮುದ್ರಣಗೊಂಡ ಲಕ್ಷ್ಮಣ ಮಾನೆಯವರ ಆತ್ಮಕಥೆಯಾಗಿದ್ದು ಮರಾಠಿ ದಲಿತ ಆತ್ಮಕಥೆಗಳಲ್ಲಿ ಅತ್ಯಂತ ಪ್ರಮುಖವಾದ ಕೃತಿ. ಎಂಬತ್ತರ ದಶಕಗಳಲ್ಲಿ ಇದು ಪ್ರಕಟಗೊಂಡಾಗ ಹಲವು ಓದುಗರ, ವಿಮರ್ಶಕರ ಗಮನ ಸೆಳೆದು ಸಾಕಷ್ಟು ಚರ್ಚೆಗೊಳಗಾಯಿತು. ಇಂದಿಗೂ ಅದು ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ. ಲಕ್ಷ್ಮಣ ಮಾನೆ ತಮ್ಮ ಲೇಖಕರ ಮಾತು ವಿಭಾಗದಲ್ಲಿ ಬರೆಯುತ್ತಾರೆ: ‘‘ತಲೆ ತಲೆಮಾರಿನಿಂದ ಕತ್ತೆಯ ಬೆನ್ನ ಮೇಲೆ ಸಂಸಾರ ಹೊತ್ತು, ಊರೂರು ಅಲೆದಾಡುವ ಜನರ ವೇದನೆಯನ್ನು ಸಮಾಜ ಅರ್ಥಮಾಡಿಕೊಂಡರೆ ನನ್ನ ‘ಉಪರಾ’ ಬರವಣಿಗೆ ಸಾರ್ಥಕವಾಯಿತೆಂದು ಭಾವಿಸುತ್ತೇನೆ. ನಾನೊಬ್ಬನೇ ‘ಉಪರಾ(ನಿರ್ಗತಿಕ) ಅಲ್ಲ, ಹಾಗೆ ಯಾರೂ ಒಂಟಿಯಾಗಿರುವುದಿಲ್ಲ. ‘ಉಪರಾ’ದ ಯಶ ಚಳವಳಿಯ ಯಶ. ನಾನು ಚಳವಳಿಯಲ್ಲಿ ಬೆಳೆದೆ; ನನಗೆ ದೊಡ್ಡ ಯಶ ಸಿಕ್ಕಿತು. ಫುಲೆ, ಅಂಬೇಡ್ಕರ್, ಸಾಹೂ ಮಹಾರಾಜ ಇವರಿಂದ ನನ್ನ ಬದುಕು ರೂಪಗೊಂಡಿತು. ‘ಉಪರಾ’ ಓದಿದ ಕದಡಿದ ಸಹೃದಯರು ತಮ್ಮ ತಮ್ಮ ಪಾಲಿನ ಹವಿಸ್ಸು ಅರ್ಪಿಸಬೇಕು. ಅವರ ಬೆನ್ನು ಕಟ್ಟುವುದೆಂದರೆ ರಾಷ್ಟ್ರ ಕಟ್ಟಿದಂತೆ’’ ಎಂದು ಮಹಾಜನತೆಗೆ ಲಕ್ಷ್ಮಣ ಮಾನೆ ಮನವಿ ಮಾಡುತ್ತಾರೆ. ‘‘ನಾನು ಇವತ್ತಿಗೂ ತೀರ ಕಸಿವಿಸಿ ಪಡುತ್ತೇನೆ. ಚಡಪಡಿಸುತ್ತೇನೆ. ಅಸ್ವಸ್ಥಗೊಂಡಿದ್ದೇನೆ. ಏಕೆಂದರೆ ಇದು ಕೇವಲ ಲಕ್ಷ್ಮಣ ಮಾನೆ ಎಂಬ ಒಬ್ಬ ವ್ಯಕ್ತಿಯ ಪ್ರಶ್ನೆಯಲ್ಲ. ಇದು ಸಾವಿರಾರು, ಲಕ್ಷಾಂತರ ಜೋಪಡಿ ಪಟ್ಟಿಯವರ ಫುಟ್‌ಪಾತ್ ವಾಸಿಗಳ, ಅಗಸೆಯ ಆಚೆ ಊರ ಹೊರಗೆ ವಾಸಿಸುವವರ, ಕಾಡು ಮೇಡಿನಲ್ಲಿ ಕೊಳೆಯುತ್ತ ಬಿದ್ದವರ ಪ್ರಶ್ನೆ. ಅವರಿಗೆ ಯಾವ ಸಹಾಯ-ಸವಲತ್ತುಗಳಿಲ್ಲ. ಆಸರೆ ಆಧಾರವಿಲ್ಲ, ಹೊಟ್ಟೆಗೆ ತುತ್ತಿಗೂ ಗತಿಯಿಲ್ಲ! ಅವರು ಬದುಕಿದ್ದಾರೆಯೋ ಎನ್ನುವುದೂ ಗೊತ್ತಿಲ್ಲ, ಉಸಿರಾಡುತ್ತಿದ್ದಾರೆಂಬುದರ ಬಗೆಗೂ ಸಂಶಯ!’’

‘ಉಪರಾ’ದಲ್ಲಿ ನಾನು ನನ್ನ ನಿರ್ಗತಿಕತನದ ಶೋಧ ನಡೆಸಿದ್ದೇನೆ. ಪ್ರತೀ ಜಮಾತಿಯ ಭಾಷೆ, ರೀತಿ-ನಡಾವಳಿ, ಪರಂಪರೆ, ಸಂಸ್ಕೃತಿ ಬೇರೆ-ಬೇರೆ. ಆತಿ ಸಂಪೂರ್ಣ ಜೀವನದ ಸುತ್ತಲೂ ಬೇಲಿಯನ್ನು ನಿರ್ಮಿಸಿ ಬಂಧಸ್ಥಗೊಳಿಸಿದೆ. ಕೆಲವು ಜಮಾತಿಗೆ ಗುನ್ಹೇಗಾರರೆಂಬ ಹಣೆಪಟ್ಟಿ ಕಟ್ಟಲಾಗಿದೆ. ಮನುಷ್ಯ ಜನ್ಮತಃ ಗುನ್ಹೆಗಾರರಿರುತ್ತಾನೆಂದು ಇಲ್ಲಿಯ ಕಾಯ್ದೆ ಸಂರಕ್ಷಕರು ಭಾವಿಸಿದಂತಿದೆ. ಎರಡೆರಡು ವರುಷಗಳ ಪಾರದೀ(ಬೇಡರು) ಪೋರರು ಗುನ್ಹೇಗಾರರಾಗಿದ್ದಾರೆ. ಅವರ ಮೇಲೆ ಪೋಲಿಸ್ ಕೇಸು ನಡೆಯುತ್ತಿದೆ-ಎಂದು ಇನ್ ಸ್ಪೆಕ್ಟರ್ ಹೇಳುತ್ತಾರೆ. ಬೇಡರ ಮಕ್ಕಳಾಗಿ ಹುಟ್ಟುವುದೇ ಒಂದು ಅಪರಾಧವಾಗಿದೆ. ಕಂಜಾರ ಭಾಟ, ಕೈಕಾಡಿ, ವಡ್ಡರು, ಟಕಾರಿ, ಭಾಮಟಾ, ವೈದೂ, ಗೋಸಾವಿ- ಇವರಿಗೆಲ್ಲ ಗುನ್ಹೇಗಾರರೆಂಬ ಹಣೆಪಟ್ಟಿ. ಇಂತಹ ನಿಕೃಷ್ಟ ಪರಿಸ್ಥಿತಿಯಲ್ಲಿ ಮನುಷ್ಯ ಬದುಕೆಂಬ ನರಕದಲ್ಲಿ, ಮೇಲು ಜಾತಿಯವರು ಮಾಡುವ ಶೋಷಣೆ, ಅತ್ಯಾಚಾರದಲ್ಲಿ ಬೆಂದು ಬಸವಳಿವ ಒಂದು ಜನಾಂಗವಾದ ನಿರ್ಗತಿಕ ಕೈಕಾಡಿ ಎಂಬ ಅಲೆಮಾರಿ ಜನಾಂಗದಲ್ಲಿ ಹುಟ್ಟಿದ ಲಕ್ಮಣ ಮಾನೆಯವರ ಆತ್ಮ ಚರಿತ್ರೆಯನ್ನು ಮಾನವ ಹೃದಯವಿರುವ ಎಲ್ಲರೂ ಓದಲೇಬೇಕಾದ ಕೃತಿಯಾಗಿದೆ. ಮಧ್ಯಮ ವರ್ಗದ ಲೇಖಕರಿಗೆ ಇಂಥ ಅನುಭವವಿಲ್ಲದೆ ಉಂಡುಟ್ಟು ಸುಖವಾಗಿ ನೆಮ್ಮದಿಯ ಬದುಕನ್ನು ಸುಖಿಸುವ ಈ ಲೇಖಕರು ಕೆಲಸಕ್ಕೆ ಬಾರದ ವಾದ-ವಿವಾದಗಳಲ್ಲಿ ತೊಡಗಿ ಬದುಕಿನಿಂದ ದೂರಸರಿಯುವ ಸಾಹಿತ್ಯವನ್ನು ರಚಿಸುತ್ತಾರೆ. ಬದುಕಿನ ಬೆಂಕಿಯಿಂದ ಅಥವಾ ಹಿಮದಂತಿರುವ ಸಂಕಟದ ಬದುಕಿನಿಂದ ಉಮ್ಮಳಿಸಿ ಬರುವ ಬರವಣಿಗೆ ನಿಜದ ಬರವಣಿಗೆ ಎನಿಸುವುದು. ಒಮ್ಮೆ ಕಾರ್ಪೊರೇಟ್ ಸಾಹಿತಿಗಳು ಇಂಥ ಬದುಕಿನತ್ತ ಗಮನಹರಿಸಿ ತಮ್ಮಿಂದಾದ ಕೊಡುಗೆಯನ್ನು ನೀಡಬಹುದು. ದಲಿತ ಆತ್ಮಕಥೆ ಅದು ಡಾ. ಸಿದ್ದಲಿಂಗಯ್ಯ ಬರೆದಿರಲಿ, ಅಥವಾ ಡಾ. ಅರವಿಂದ ಮಾಲಗತ್ತಿ ಬರೆದಿರಲಿ ಲೋಕದ ದಲಿತರ ಕಥೆ ಶೋಷಣೆಯ, ಕ್ರೌರ್ಯದ ಮೂಢನಂಬಿಕೆಗಳ ಕಥೆಯೇ ಆಗಿರುತ್ತದೆ. ಯಜ್ಞಕ್ಕೆ ಆಡನ್ನೇ ಬಲಿಪಶುವಾಗಿ ಕೊಡುತ್ತಾರೆ ಹೊರತೂ ಹುಲಿ, ಸಿಂಹವನ್ನಲ್ಲ. ಲಕ್ಷ್ಮಣ ಮಾನೆ ಇಂಥ ದಟ್ಟದರಿದ್ರ ಕೈಕಾಡಿ ಎಂಬ ಅಲೆಮಾರಿ ಕುಟುಂಬದಲ್ಲಿ ಹುಟ್ಟಿ ತಾನು ಪಟ್ಟ ಪಾಡನ್ನು ಯಥಾವತ್ತಾಗಿ ಕಥನಿಸಿದ್ದಾರೆ. ಇಂಥ ಒಂದು ಬದುಕು ಯಾವ ನಮ್ಮ ವೈರಿಗೂ ಬೇಡ ಎನ್ನುವಂಥ ದಾರುಣ ಬದುಕು. ಊರೂರಿಗೆ ಕತ್ತೆಯ ಮೇಲೆ ತಮ್ಮ ಬಿಡಾರವನ್ನು ಸಾಗಿಸುತ್ತ ಊರಹೊರಗಿರುವ ಹೇಲುಗೇರಿಯಲ್ಲಿ ಇವರ ಟೆಂಟು. ಅಲ್ಲಿ ಸ್ವಲ್ಪದಿನಗಳ ಕಾಲ ಹೊಟ್ಟೆಪಾಡು ಮಾಡಿಕೊಂಡು ಮತ್ತೆ ಮುಂದಿನ ಊರಿಗೆ ಪಯಣ. ಅವರ ಭೌತಿಕ ಪರಿಸರ ಮತ್ತು ಕೈಕಾಡಿ ಜನರ ಕರುಣಾಜನಕ ಸ್ಥಿತಿ ಹೀಗಿರುತ್ತದೆ : ‘‘ಊರ ಹೊರಗಿನ ಹೇಲುಗೇರಿಯಲ್ಲಿ(ಅಂದರೆ ಕೆಳಜಾತಿಯವರು ಮಲವಿಸರ್ಜಿಸುವ ಸ್ಥಳ) ನಾವು ಕತ್ತೆಗಳನ್ನು ಮೇಯಿಸುತ್ತ ಮೇಯಿಸುತ್ತ ಆಟವಾಡುತ್ತಿದ್ದೆವು. ಹೇಲು ಮೆತ್ತಿದ ಕಲ್ಲುಗಳಿಂದಲೇ ಲಗೋರಿ ಇಲ್ಲವೇ ಗೋಲಿ ಆಟವಾಡುತ್ತಿದ್ದೆವು. ಮೈಮೇಲಿನ ಅಂಗಿ ಬೇಡಿ ತಂದದ್ದು, ಚಿಂದಿಯ ತೇಪೆ ಹಚ್ಚಿ ಹೊಲಿಯಲಾಗಿತ್ತು. ಅದರಿಂದಲೇ ಇಡೀ ಮೈ ಮುಚ್ಚಿಕೊಳ್ಳುತ್ತಿತ್ತು. ಚಡ್ಡಿಯ ಪತ್ತೆಯಿಲ್ಲ. ಉದ್ದ ಅಂಗಿಯಿಂದಲೇ ಎಲ್ಲ ಕೆಲಸ ನಿಭಾಯಿಸಿಕೊಂಡು ಹೋಗುವುದು. ಅಂಗಿಯ ತೋಳಿನ ಅಳತೆ ಒಂದೇ ರೀತಿ ಇರುತ್ತಿರಲಿಲ್ಲ. ಮೂಗಿನಿಂದ ಸೋರುವ ಸಿಂಬಳ ಒರೆಸಲು ಅದರ ಬಳಕೆಯಾಗುತ್ತಿತ್ತು. ತಲೆಗೆ ಅಪ್ಪನ ಟೊಪ್ಪಿಗೆ ಅಥವಾ ಬೇಡಿ ತಂದಿದ್ದು, ಗಾಳಿ ಬೀಸಿದಾಗ ತುಂಬ ತೊಂದರೆಯಾಗುತ್ತಿತ್ತು. ತಲೆಯ ಮೇಲೆ ಉಳಿಯುತ್ತಲೇ ಇರಲಿಲ್ಲ. ಖಗ್ಯಾ, ಇಂದ್ಯಾ, ಮಾರುತಿ ಮತ್ತು ನಾನು ತಿಪ್ಪೆಯಲ್ಲೋ ಹೇಲುಗೇರಿಯಲ್ಲೋ ಆಟವಾಡುತ್ತ ಇರುತ್ತಿದ್ದೆವು. ’’

                    ಲಕ್ಷ್ಮಣ ಮಾನೆ ಜೊತೆ ಚಂದ್ರಕಾಂತ ಪೋಕಳೆ

ಅಪ್ಪ ಮಗನಿಗೆ ಶಾಲೆಗೆ ಕಳುಹಿಸಲು ಮನಸ್ಸು ಮಾಡಿದರೆ ಮಗನಿಗೆ ಶಾಲೆ ಇಷ್ಟವಿಲ್ಲ. ಅಪ್ಪ ಸಿಟ್ಟಿನಿಂದ ‘‘ನಮ್ಮಾಂಗ ತಿಪ್ಪಿ ಕೆದರಿಕೋತ ಇರಬೇಕಂತ ಮಾಡಿದಿಯೇನಲೇ?’’ ಎಂದು ಬಾಯಿಗೆ ಬಂದ ಹಾಂಗ ಬಯ್ಯಲು ಸುರುಮಾಡಿದ. ಗರಿ ಕಿತ್ತು ಬುಟ್ಟಿ ಮಾಡಿಕೊಡೋದು, ಗದ್ದೆಯಲ್ಲಿ ಕೂಲಿನಾಲಿ ಮಾಡೋದು, ಮದುವೆ ಮುಂಜಿ ಸಮಯದಲ್ಲಿ ಡೋಲು, ಬ್ಯಾಂಡ್ ವಾದ್ಯ ಬಾರಿಸೋದು ಮತ್ತು ಅಂತಿಮವಾಗಿ ಹೊಟ್ಟೆಪಾಡಿಗೆ ಭಿಕ್ಷೆಗೆ ಹೋಗುವುದು. ಊರ ಜನ ಹಳಸಿದ್ದು ಪಳಸಿದ್ದು ರೊಟ್ಟಿ ಇನ್ನೇನಾದರೂ ಕೊಟ್ಟರೆ ಅದೇ ಮೃಷ್ಟಾನ್ನ ಇವರಿಗೆ. ಮದುವೆ ಮುಂಜಿ ಕಾರ್ಯಕ್ರಮಗಳಲ್ಲಿ ಮೇಲ್ಜಾತಿಯವರು ಉಂಡು ಹೊರಗೆ ಬಿಸಾಡಿದ ಬಾಳೆಲೆಯಿಂದ ಬಿಟ್ಟ ಎಂಜಲನ್ನು ಬರಗೋದು ಮತ್ತು ಅದನ್ನು ಬಿಸಿಲಿನಲ್ಲಿ ಒಣಗಿಸಿ ಉಳಿಸಿ ತಿನ್ನೋದು. ‘ಮುಂದೆ ಬಿಡಾರ ಕಿತ್ತುಕೊಂಡು ಮುಂದಿನ ಊರಿಗೆ ಹೋಗುವುದು ಅವರ ದಿನಿತ್ಯದ ಹೋರಾಟ ಇಷ್ಟೆ. ವರ್ಷಕ್ಕೊಮ್ಮೆ ಅವರ ಮೂಲ ಊರಿನಲ್ಲಿ ಜಾತ್ರೆಯಾಗುವಾಗ ಅಥವಾ ಇಂಥದ್ದೇ ವಿಶೇಷ ಸಂದರ್ಭದಲ್ಲಿ ಊರಿಗೆ ಬರುತ್ತಿದ್ದರು. ಮನೆಗೆ ಸೆಗಣಿ ಮುದ್ದೆಯೆ ಬೀಗ. ಕಾಳವ್ವ ಇವರ ಕುಲದೇವರು. ಒಮ್ಮೆಮ್ಮೆ ಅಪ್ಪನ ಮೈಮೇಲೆ ದೇವರು ಬರುತ್ತಿತ್ತು. ಮುಟ್ಟಾದವರು ಅಸ್ಪಶ್ಯರಂತಿರಬೇಕಿತ್ತು. ಮಡಿ ಮೈಲಿಗೆ ಈ ಜನಾಂಗದಲ್ಲಿಯೂ ಇವೆ. ಸಾಮಾಜಿಕ ರೀತಿ ರಿವಾಜುಗಳನ್ನು ಮೀರಿದವರಿಗೆ ಜಮಾಯಿತಿಯ ಪಂಚಾಯಿತಿ ಸೇರಿಸಲಾಗುತ್ತದೆ. ಅವರು ಯೋಗ್ಯ ಶಿಕ್ಷೆ ಜಾರಿಗೆ ತರುತ್ತಾರೆ. ಸಾಮಾಜಿಕ ಪ್ರತಿಬಂಧಗಳು ಜಾತಿ ಭಾವನೆ ಈ ಜಾತಿಯವರನ್ನೂ ಬಿಟ್ಟಿಲ್ಲ ಅವರು ಅಸ್ಪಶ್ಯರಾದರೂ ಅವರಿಗೆ ಕೆಲವು ನಿಷಿದ್ಧಗಳಿವೆ, ವಿಶಿಷ್ಟ ಎಂದರೆ ಮದುವೆಯು ಜಾತಿಯೊಳಗೆ ನಡೆಯಬೇಕು, ಹಾರವರ ಹುಡುಗಿಯನ್ನಾಗಲಿ ಅಥವಾ ಮೇಲ್ಜಾತಿಯ ಹುಡುಗಿಯನ್ನಾಗಲಿ ಮದುವೆಯಾದರೆ ಆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ. ಈ ಲೇಖಕ ತನಗಿಂತ ಉಚ್ಚ ಜಾತಿ ಹುಡುಗಿಯಾದ ಶಶಿ ಎಂಬ ಮರಾಠಾ ಹುಡುಗಿಯನ್ನು ಪ್ರೀತಿಸಿ ಮದುವೆಯಾದರು. ಆಗ ಅವರ ಸಮಾಜ ಅವರನ್ನು ಅವರ ಕುಟುಂಬವನ್ನೇ ಬಹಿಷ್ಕರಿಸಿತು. ಲೇಖಕರಿಗೆ ಜಾತಿಯ ಬಗ್ಗೆ ನಂಬಿಕೆ ಇರದಿದ್ದರೂ ತನ್ನ ಕುಟುಂಬದವರ ಸಲುವಾಗಿ ಪಂಚಾಯತಿನ ಎದುರು ತಲೆ ತಗ್ಗಿಸಿ ವಿಚಾರಣೆಗೆ ನಿಲ್ಲಬೇಕಾಯಿತು. ಆಗ ಲೇಖಕರ ತಂದೆ ಹುಡುಗಿಯನ್ನು ನಮ್ಮಲ್ಲಿ ಯಾರಾದರೂ ದತ್ತು ತೆಗೆದುಕೊಂಡರೆ ಲಗ್ನ ಮಾಡಬಹುದೆಂದು ಸೂಚಿಸುತ್ತಾರೆ. ಇಂಥ ಹಲವಾರು ರೀತಿ ರಿವಾಜುಗಳು ಮೇಲ್ಜಾತಿಯ ರೀತಿ ರಿವಾಜುಗಳಲ್ಲಿದ್ದಂತೆಯೆ ಇದ್ದುದನ್ನು ಕಂಡು ಲೇಖಕರ ಹೆಂಡತಿ ಶಶಿ ರೋಸಿ ಹೋಗುತ್ತಾರೆ. ಹೆಣ್ಣು-ಗಂಡಿನ ನಡುವೆ ಮದುವೆ ಎಂಬ ವಿಧಿವತ್ತಾದ ಕಾರ್ಯಕ್ರಮ ನಡೆದರೂ ಗಂಡಸು ತನ್ನ ಹೆಂಡತಿಯನ್ನು ಸಂಶಯದ ಮೇಲೆ ಬಿಟ್ಟುಬಿಡುತ್ತಿದ್ದ. ಹಾಗಾಗಿ ಹೆಣ್ಣು ತನ್ನ ಜೀವಮಾನದಲ್ಲಿ ನಾಲ್ಕೈದು ಮದುವೆಗಳನ್ನು ಮಾಡಿಕೊಳ್ಳಬೇಕಾಗುತ್ತಿತ್ತು. ಸಾಲಕೊಟ್ಟವರಿಗೆ ಹೆಂಡತಿಯನ್ನು ಅಡವು ಇಡುವ ಕ್ರಮವೂ ಆ ಜಾತಿಯಲ್ಲಿ ಸಿಂಧುವೆ. ಬೇಡರ ಓರ್ವ ಹೆಣ್ಣು ತನ್ನ ಮಗನೊಂದಿಗೆ ಅನೈತಿಕ ಸಂಬಂಧವನ್ನಿಟ್ಟು ಕೊಂಡಿರುತ್ತಿದ್ದಳು. ವಯಸ್ಸು ಐವತ್ತು. ಗಂಡನಿಗೆ ಜೀವಾವಧಿ ಶಿಕ್ಷೆ. ಮನೆಯಲ್ಲಿ ತರುಣ ಮಗ. ತಾಯಿ-ಮಗನ ಅನೈತಿಕ ಸಂಬಂಧ ಪಂಚಾಯಿತಿ ಕಟ್ಟೆಗೆ ಬರುತ್ತದೆ. ಅವಳು ಹೇಳುವುದನ್ನು ಕೇಳಿದರೆ ಈ ಜನಾಂಗದ ನಿಕೃಷ್ಟ ಬದುಕು ನಮ್ಮ ಅರಿವಿಗೆ ಬರುತ್ತದೆ. ‘‘ನಾನೇ ಗಿಡ ಹಚ್ಚಿ ಬೆಳೆಸೇನಿ. ನಾನೇ ಹಣ್ಣ ತಿಂದರ ಏನು ತಪ್ಪಾತು. ನಾನೀಗ ಐದನೆ ಗಂಡನ್ನ ಕಟ್ಟಿಕೊಳ್ಳಾಕ ತಯಾರಿಲ್ಲ’’ ಇದು ಭಯಂಕರವಾದ ಸಮಾಜ ಜೀವನವಲ್ಲದೆ ಮತ್ತೇನು? ಈ ಜನರ ಕೋರ್ಟ್ ಎಂದರೆ ಹಿರಿಯರನ್ನೊಳಗೊಂಡ ಪಂಚಾಯಿತಿ. ಅವರು ಹೇಳಿದ್ದೇ ಜಜ್ಡ್‌ಮೆಂಟ್. ಮಗನೊಟ್ಟಿಗೆ ಸಂಬಂಧವಿಟ್ಟುಕೊಂಡ ಹೆಣ್ಣಿಗೆ 75,000 ರೂ. ದಂಡ ಅಥವಾ ಜುಲ್ಮಾನೆ. ವರ್ಷ 50 ರೂ. ಸಾಲ ಮಾಡಿ ಹೆಂಡತಿಯನ್ನು ಅಡ ಇಟ್ಟ ಒಬ್ಬ ವ್ಯಕ್ತಿಯು ಪಂಚಾಯಿತಿಗೆ ವ್ಯಾಜ್ಯ ತಂದಿದ್ದ. ‘‘ನಾಲ್ಕು ವರ್ಷಾತು. ನನ ಹೆಂಡತೀನ್ನ ಧರ್ಮ್ಯಾನ ಹತ್ತಿರ ಅಡ ಇಟ್ಟೇನಿ. ನಾನೀಗ ರೊಕ್ಕ ಕೊಡ್ತೇನಿ. ಆದರ ಇಂವಾ ನನ್ ಹೆಂಡ್ತಿ ತಿರುಗಿ ಕೊಡಾಕ್ ತಯಾರಿಲ್ಲ. ನಾ ಏನೋ ವಿಶ್ವಾಸದಿಂದ ನನ್ನ ಸಂಪತ್ತು ಇವರ ಹಂತ್ಯಾಕೆ ಅಡಾ ಇಟ್ಟೆ. ಯಾಕಿಟ್ಟೆ ಅಂದರೆ ನನಗ ಅಗತ್ಯವಿತ್ತು. ನಾನು ಹೆಂಗಸನ್ನ ಅಡಾ ಇಟ್ಟಿದ್ದು ಕೆಲಸಕ್ಕ ಇವ್ನ ಜತಿ ಮಲಗಾಕ್ ಅಲ್ಲ.’’ ಆಗಲೆ ಆ ಸಾಲಕೊಟ್ಟವನ ಜೊತೆ ದೇಹ ಸಂಪರ್ಕ ಆಗಿ ಒಂದು ಮಗೂನೂ ಆಗಿದೆ. ಸಾಲ ಪಡೆದವ ಹೇಳ್ತಾನೆ: ‘‘ನನಗೆ ಹೆಂಡ್ತಿ ಬೇಕು. ಆ ಕೂಸ ಬ್ಯಾಡಾ’’. ಈ ಆತ್ಮಕಥೆಯಲ್ಲಿ ಒಂದು ಜನಾಂಗದ ಸಂಸ್ಕೃತಿ, ನಂಬಿಕೆಗಳು ಮೂಢನಂಬಿಕೆಗಳು, ಸಾಮಾಜಿಕ ರೀತಿ ರಿವಾಜುಗಳು ಆ ಜನಾಂಗದ ದೈನ್ಯೇಸಿ ಆರ್ಥಿಕ ಪರಿಸ್ಥಿತಿ, ಅವರ ಸಾಮಾಜಿಕ ಸ್ಥಾನ ಮಾನ ಅವರ ಹೀನಾಯ ಬದುಕು ಇವೆಲ್ಲ ಲೇಖಕನ ದಿನನಿತ್ಯ ಅನುಭವಗಳಾಗಿರುವುದರಿಂದ ಅದೊಂದು ಅಧಿಕೃತ ಸಾಂಸ್ಕೃತಿಕ ದಾಖಲಾತಿಯಾಗಿರುತ್ತದೆ. ಊರ ಹೊರಗೆ ಹೇಲುಗೇರಿಯಲ್ಲಿ ಬಯಲಲ್ಲಿ ಇವರು ಟೆಂಟು ಕಟ್ಟಿ ಸಂಸಾರ ಹೂಡುವುದರಿಂದ ಹರೆಯದ ಹೆಣ್ಣು ಮಕ್ಕಳು ಮೇಲ್ಜಾತಿಯವರ ಅತ್ಯಾಚಾರಕ್ಕೆ ಒಳಗಾದ ಉದಾಹರಣೆಯನ್ನೂ ಕೊಡುತ್ತಾರೆ ಲೇಖಕ. ಇಷ್ಟು ನಿಕೃಷ್ಟ ಬದುಕನ್ನು ಬದುಕಿದರೂ ತಮ್ಮ ಜಾತಿ ರೀತಿ ರಿವಾಜುಗಳನ್ನು ಬಿಡಲೊಪ್ಪದ, ತಮ್ಮ ಜಾತಿಗೆ ಅಂಟಿಕೊಂಡಿರುವ ವಿಧಿ ನಿಷೇಧಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಅದರಿಂದಲೇ ಮೂಲೆಗುಂಪಾಗಿರುವ ಈ ದಲಿತ ಸಮಾಜದ ಬಗ್ಗೆ ವ್ಯಥೆಯುಂಟಾಗುತ್ತದೆ. ಬಹುಶಃ ನಮ್ಮ ದೇಶದ ಪ್ರತಿಯೊಬ್ಬನೂ ತನ್ನ ಜಾತಿ ಮತ್ತು ಊರೆಂಬ ಮಮಕಾರದಲ್ಲಿ ಬಿದ್ದು ತನ್ನ ಸಮಾಜ ಮತ್ತು ತನ್ನ ಜನ ಎಂಬ ಬೇಲಿಯನ್ನು ತಮ್ಮ ಸುತ್ತ ಕಟ್ಟಿಕೊಂಡು ಆ ಕೆಸರಿನಲ್ಲಿಯೇ ಹೊರಳಾಡಿ ಆನಂದಕಾಣುವ ಹಂದಿಯಂತೆ ಇದ್ದಾರೆ ಎಂಬುದು ನನ್ನ ಅನಿಸಿಕೆ. ಲಕ್ಷ್ಮಣ ಮಾನೆ ಜಾತಿಯೆಂಬ ಕಾಳೋರಗದಿಂದ ಇಡೀ ಭಾರತೀಯ ಸಮಾಜ ಎಷ್ಟು ನಿಕೃಷ್ಟ ಬದುಕಿಗೆ ಪಕ್ಕಾಗಿದೆಯೆಂದರೆ ಅವರದೇ ಮಾತಿನಲ್ಲಿ ಹೇಳುವುದಾದರೆ ‘‘ಈ ಕೃತಿಯಿಂದಾಗಿ ಪ್ರಶಸ್ತಿಗಳ ಮಹಾಪೂರವೆ ಹರಿದು ಬಂತು. ‘ಫೋರ್ಡ್ ಫೌಂಡೇಶನ್’ನ ಶಿಷ್ಯವೃತ್ತಿಯೂ ಸಿಕ್ಕು ಅಮೆರಿಕಕ್ಕೆ ಹೋಗಿ ಬಂದ್ದೂ ಆಯಿತು. ಅಮೆರಿಕಗೆ ಹೋದರೂ ‘ಉಪರಾ’ ಬೆನ್ನು ಬಿಡಲಿಲ್ಲ. ಅಲ್ಲೂ ಉಚ್ಚ ವರ್ಗದ ಬ್ರಾಹ್ಮಣರೇ ಭೇಟಿಯಾದರು. ಒಬ್ಬನಂತೂ ಊಟಕ್ಕೆ ಆಮಂತ್ರಣ ನೀಡಿ, ನನ್ನ ನಿಜ ಜಾತಿ ಗೊತ್ತಾಗಿ, ಊಟ ಸಹ ನೀಡಲಿಲ್ಲ. ದೇಶದ ಹೊರಗೆ ಹೋದರೂ ಜಾತಿ ಬೆನ್ನು ಬಿಡಲಿಲ್ಲ. ನಾನು ಉಚ್ಚ ವರ್ಣದಲ್ಲಿ ಜನಿಸಿದ್ದರೆ ನನ್ನನ್ನು ಹೀಗೆ ನಡೆಸಿಕೊಳ್ಳುತ್ತಿದ್ದರೇ?’’ಎಂಬ ಪ್ರಶ್ನೆ ಇವತ್ತಿಗೂ ನನ್ನನ್ನು ಕಾಡುತ್ತಿದೆ. ಅಮೆರಿಕದಿಂದ ಮರಳಿದ ದಿನವೇ ‘ಉಪರಾ’ಕ್ಕೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಲಭಿಸಿತು. ‘‘ಉಪರಾ’’ದಲ್ಲಿ ನಾನು ನಿರ್ಗತಿಕತನದ ಶೋಧ ನಡೆಸಿದ್ದೇನೆ. ‘ಫೋರ್ಡ್ ಫೌಂಡೇಶನ್’ ಶಿಷ್ಯವೃತ್ತಿ ಸಿಕ್ಕಾಗಿನಿಂದ ನನ್ನ ಸಮಾಜದ ಅಲೆಮಾರಿಗಳ, ವಿಮುಕ್ತ ಸಮಾಜದವರ ನಿರ್ಗತಿಕತನದ ಹುಡುಕಾಟ ನಡೆಸುತ್ತ ಹಟ್ಟಿ, ವಸತಿ, ತಾಂಡೆ,-ಇಲ್ಲೆಲ್ಲ ಸುತ್ತಾಡಿದೆ. ಅಲ್ಲಿಯ ಆಸೆ-ಆಕಾಂಕ್ಷೆಗಳ ಪ್ರವಾಹ ನನ್ನನ್ನು ಘಾಸಿಗೊಳಿಸಿತು. ನನ್ನ ಜನರೊಂದಿಗೆ ಮಾತಾಡಿದೆ. ಈ ಅಸಂಖ್ಯ ಜನರು ಸಂವಾದ ಆರಂಭಿಸಿದರೆ ಸಾಕು, ಕರುಳೇ ಹಿಂಡಿದಂತಾಗುತ್ತದೆ. ಲಾತೂರಿನಲ್ಲಿ ಮಸಣಜೋಗಿಯ ಒಬ್ಬ ಹೆಂಗಸು ಹೊಸ ಸೀರೆ ಉಟ್ಟಿದ್ದಳು. ಅದೇ ದಿನ ಊರಲ್ಲಿ ಯಾರದೋ ಸೀರೆ ಕಳವಾಯಿತೆಂದು ತಕರಾರು ದೂರನ್ನ್ನೂ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾಯಿತು. ಆಗ ಪೊಲೀಸರು ಏನು ಮಾಡಿದರು ಗೊತ್ತೇ? ರಸ್ತೆಯ ನಟ್ಟ ನಡುವೆ ಆ ಹೆಂಗಸಿನ ಸೀರೆಯನ್ನೇ ಕಿತ್ತುಕೊಳ್ಳಲಾಯಿತು. ಬಡಪಾಯಿ ಮಾನರಕ್ಷಣೆಗೆ ಪಕ್ಕದ ಜೋಪಡಿಯಲ್ಲಿ ನುಗ್ಗಿದಳು..... ಜನ ಆಕೆಯ ಮೈಗೆ ಬಟ್ಟೆ ತೊಡಿಸಿದರು. ಮಾನ ಉಳಿಯಿತು. ನಾವು ಬೃಹತ್ ಮೆರವಣಿಗೆಯ ಮೂಲಕ ವಿರೋಧಿಸಿದೆವು. ‘‘ಮಸಣದಲ್ಲಿ ವಾಸಿಸುವ ಹೆಂಗಸಿನ ಹತ್ತಿರ ಹೊಸ ಸೀರೆ ಬಂತೆಲ್ಲಿಂದ? ಅವಳೇ ಕದ್ದಿರಬೇಕು.’’ ಎಂದು ಪೊಲೀಸರ ವಾದ. ಎಂಟನೆ ಕ್ಲಾಸಿನಲ್ಲಿ ಓದುವ ಇಬ್ಬರು ಲಮಾಣಿ ತಾಂಡಾದ ಮಕ್ಕಳು ಮತ್ತು ಎಂಬತ್ತು ವರ್ಷದ ಮುದುಕನನ್ನು ಎಳೆದು ಹೊಡೆಯಲಾರಂಭಿಸಿದರು. ಕಾರಣವೇನು ಗೊತ್ತೇ? ತತ್ತಿ ಕದ್ದ ಸಂಶಯ! ಇವರನ್ನು ಬಿಟ್ಟರೆ ಬೇರೆ ಯಾರು ಕಳ್ಳತನ ಮಾಡುತ್ತಾರೆ?’’

ಸತ್ತೆ, ಸಂಪತ್ತು, ಪ್ರತಿಷ್ಠೆ, ಚಿಂತನೆ, ಕಲೆಯಲ್ಲೆಲ್ಲ, ಅವರ ಹಣೆಗೆ ಅಂಟಿದ ‘ಉಪರಾ’ ಎಂಬ ಕಳಂಕ ತೊಡೆದು ಹೋಗಿ ಮಾನವ ಸಂಸ್ಕೃತಿಯಲ್ಲಿ ಈ ಅಲೆಮಾರಿ ವಿಮುಕ್ತ ಪ್ರವಾಹವು ಸೇರಿ ಒಂದಾಗಬಹುದೇ?ಅವರ ಮನುಷ್ಯತ್ವಕ್ಕೂ ಬೆಲೆ ಬರಬಹುದೇ? ಸಮಾಜ ಅವರನ್ನು ಮನುಷ್ಯರೆಂದು ಸ್ವೀಕರಿಸಬಹುದೇ? ಈ ಎಲ್ಲ ಪ್ರಶ್ನೆಗಳಿಂದ ನಾನು ಕಂಗೆಟ್ಟಿದ್ದೇನೆ. ಆಗಾಗ ನಾನು ತೀರಾ ನಿರಾಶನಾಗುತ್ತೇನೆ. ಸುತ್ತ-ಮುತ್ತ ಇಷ್ಟೆಲ್ಲ ಶೋಷಣೆ ನಡೆಯುತ್ತಿದ್ದರೂ ಯಾರಿಗೂ ಅದರ ಅರಿವಿಲ್ಲ. ತಾವು ಮೊದಲು ಮನುಷ್ಯರು ಎಂಬ ಎಚ್ಚರವೂ ಇಲ್ಲ. ಮನುಷ್ಯತ್ವವನ್ನೇ ಕಳಕೊಂಡ ಈ ಸಮಾಜ ನಿರಾಶೆಗೊಳಿಸುವಷ್ಟು ಹಿಂದುಳಿದಿದೆ.

‘‘ಸ್ವಾತಂತ್ರ ಗಳಿಸಿದ ನಂತರವೂ 1871ರಲ್ಲಿ ಆಂಗ್ಲರು ಹೇರಿದ ಗುನ್ಹೆಗಾರರ ಮುದ್ರೆಯು ಹಾಗೇ ಉಳಿಯಿತು. ಎಲ್ಲೇ ಗುನ್ಹೆ ನಡೆದರೂ ಪೊಲೀಸರು ನಮ್ಮನ್ನೇ ಹಿಡಿದು ಹಣಿಯುತ್ತಾರೆ, ಬೇವಾರ್ಸಿ ಎಂದು ಭಾವಿಸಿ. ‘ತಲೆಮಾರಿನಿಂದ ತಲೆಮಾರಿಗೆ ಕತ್ತೆಯ ಬೆನ್ನ ಮೇಲೆ ಸಂಸಾರ ಹೊತ್ತು, ಊರೂರು ಅಲೆದಾಡುವ ಜನರ ವೇದನೆಯನ್ನು ಸಮಾಜ ಅರ್ಥ ಮಾಡಿಕೊಂಡರೆ ನನ್ನ ಬರವಣಿಗೆ ‘ಉಪರಾ’ ಸಾರ್ಥಕವಾಯಿತಿಯೆಂದು ಭಾವಿಸುತ್ತೇನೆ’ ಎಂದು ಲೇಖಕ ಲಕ್ಷ್ಮಣ ಮಾನೆ ಭಿನ್ನವಿಸಿಕೊಳ್ಳುತ್ತಾರೆ. ಕೈಕಾಡಿ ಅಲೆಮಾರಿ ಜನಾಂಗದ ದಾರುಣ ಚಿತ್ರಣವನ್ನು ತಿಳಿಯಬೇಕಿದ್ದರೆ ‘ಉಪರಾ’ವನ್ನು ಓದಲೇಬೇಕು. ಮಿತ್ರ, ಪ್ರಸಿದ್ಧ ಅನುವಾದಕ ಚಂದ್ರಕಾಂತ ಪೋಕಳೆ ಈ ಕೃತಿಯನ್ನು ಸೊಗಸಾಗಿ ಕನ್ನಡದ ಜಾಯಮಾನಕ್ಕೆ ತಕ್ಕ ಹಾಗೆ ಅನುವಾದಿಸಿದ್ದಾರೆ. ಚಂದ್ರಕಾಂತ ಪೋಕಳೆಯವರು ಕನ್ನಡ ಮತ್ತು ಮರಾಠಿ ಭಾಷೆಗಳ ಎಂಬೆಸಡರ್ ಇದ್ದ ಹಾಗೆ. ಎರಡು ರಾಜ್ಯಗಳ ಸೇತುವೆ. ಸಂವೇದನಾಶೀಲ ಕನ್ನಡಿಗರೆಲ್ಲಾ ಒಮ್ಮೆಯಾದರೂ ಈ ಕೃತಿಯನ್ನು ಓದಲೇಬೇಕಾಗಿದೆ. ಲೇಖಕ ತನ್ನ ಸಮಾಜದ ಬಗ್ಗೆ ಹೇಳುವುದು ಹೀಗೆ: ‘‘ನನ್ನನ್ನು ಹೊಗಳುವ ಈ ಜನರು ನಿಜವಾಗಿಯೂ ಮನೆ-ಮಾರು ಇಲ್ಲದ ನಿರ್ಗತಿಕರಂತೆ, ಜಾನುವಾರುಗಳಂತೆ ಬದುಕುತ್ತಿರುವ ನನ್ನ ಸಮಾಜವನ್ನು ಉಪರಾ ಜನರನ್ನು ತಮ್ಮಿಳಗೆ ಸೇರಿಸಿಕೊಳ್ಳಬಹುದೇ ಎಂಬ ಶಂಕೆಯಿಂದ ನಾನು ಕಂಗಾಲಾಗಿದ್ದೇನೆ. ನಿಜವಾಗಿಯೂ ನನ್ನ ಜನರ ಜೀವನ ಬದಲಾಗಬಹುದೇ? ಸಮಾಜ ಅವರಿಗೆ ಅಂಥ ಅವಕಾಶ ಕಲ್ಪಿಸಿಕೊಡಬಹುದೇ? ಎಲ್ಲಾದರೂ ಒಂದೆಡೆ ಸ್ಥಿರವಾಗಿ ನೆಲೆಸಿ, ಹೊಸ ಬದುಕನ್ನು ಸ್ವೀಕರಿಸಿಯಾರೇ? ಹೊಸ ಸಂಸ್ಕೃತಿಯ ಪಾಲುಗಾರರಾಗಿ ಜೀವನದ ಮಾರ್ಗವನ್ನು ಕ್ರಮಿಸಲು ಆರಂಭಿಸಬಹುದೇ?’’ ಇವು ಲೇಖಕನ ಆತಂಕಗಳು. ಬಹುಶಃ ಅಕ್ಷರ ಕ್ರಾಂತಿಯಿಂದ ಇವರ ಜೀವನ ಕ್ರಮ ಹೊಸ ಸ್ಥಿತ್ಯಂತರವನ್ನು ಕಾಣಬಹುದೇ? ಇದು ನನ್ನ ಆಶಯ ಅಷ್ಟೇ.

Writer - ಉದಯಕುಮಾರ ಹಬ್ಬು

contributor

Editor - ಉದಯಕುಮಾರ ಹಬ್ಬು

contributor

Similar News