ಗೀತಮಾಧುರಿ ಕನ್ನಡಪರ ಮತ್ತು ಜನಪರ ಕಾಳಜಿಯ ಭಾವಗೀತೆಗಳು

Update: 2018-03-17 10:49 GMT

ಗೀತ ಮಾಧುರಿಯ ಕವಿತೆಗಳು ಕಲ್ಪನೆಯಲ್ಲೇ ವಿಹರಿಸದೆ, ಹಗಲುಗನಸು ಕಾಣದೆ ವರ್ತಮಾನದಲ್ಲಿದ್ದೂ ಭವಿಷ್ಯದತ್ತ ಆಲೋಚಿಸುವ ಗಂಭೀರ ಬದುಕಿನ ಹಾದಿಯನ್ನು ಹಿಡಿದಿರುವುದು ಗೋಚರವಾಗುತ್ತದೆ. ಇಲ್ಲಿಯ ಕವಿತೆಗಳಿಗೆ ಒಲುಮೆಯೇ ವಸ್ತು. ‘ಸತ್ಯದ’ ಹುಡುಕಾಟದತ್ತ ಸಾಗುವ ಈ ಕವಿತೆಗಳು ಪ್ರಮುಖವಾಗಿ ಹಾಡಿನ ರೂಪದಲ್ಲಿವೆ. ಭಾವಗೀತೆಯ ರೂಪ ಹೊಂದಿವೆ. ಈ ಹಾಡುಗಳಲ್ಲಿ ಅಂದ ಚೆಂದ ಬೆಡಗು ಸೌಂದರ್ಯ ಪ್ರೀತಿ ಸಂಕಟ ಎಲ್ಲವೂ ಅನಾವರಣಗೊಂಡಿವೆ. ಕನ್ನಡಪರ ಕಾಳಜಿ ತುಂಬಿ ತುಳುಕಾಡಿದೆ.

              ಕಾ.ವೆಂ. ಶ್ರೀ

ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಇದೀಗ ‘ಗೀತಮಾಧುರಿ’ ಎಂಬ ಹೆಸರಿನ ತಮ್ಮ ಈವರೆಗಿನ ಭಾವಗೀತೆಗಳ ಸಂಕಲನವನ್ನು ನೀಡಿದ್ದಾರೆ. ಸುಮಾರು ಎರಡು ದಶಕದಿಂದೀಚಿನ ಸಮಾಜದ ವಿವಿಧ ನೆಲೆಗಳ ಹೆಜ್ಜೆ ಗುರುತುಗಳನ್ನು ನೆನಪಿಸುವ ‘ಗೀತಮಾಧುರಿ’ಯ ಕವಿತೆಗಳಿಗೆ ನಿಖರವಾದ ಪ್ರೇರಣೆ ಮತ್ತು ಪ್ರಭಾವಗಳಿವೆ. ಕಾಣದ ಲೋಕವನ್ನು ತೋರಿಸುತ್ತಿದ್ದ ಕಲ್ಪನಾ ಕಾವ್ಯಕ್ಕೂ ವಾಸ್ತವವನ್ನು ತೋರಿಸುವ ವಾಸ್ತವ ಕಾವ್ಯಕ್ಕೂ ವ್ಯತ್ಯಾಸಗಳಿರುವುದು ನಿಜ. ಗೀತ ಮಾಧುರಿಯ ಕವಿತೆಗಳು ಕಲ್ಪನೆಯಲ್ಲೇ ವಿಹರಿಸದೆ, ಹಗಲುಗನಸು ಕಾಣದೆ ವರ್ತಮಾನದಲ್ಲಿದ್ದೂ ಭವಿಷ್ಯದತ್ತ ಆಲೋಚಿಸುವ ಗಂಭೀರ ಬದುಕಿನ ಹಾದಿಯನ್ನು ಹಿಡಿದಿರುವುದು ಗೋಚರವಾಗುತ್ತದೆ. ಇಲ್ಲಿಯ ಕವಿತೆಗಳಿಗೆ ಒಲುಮೆಯೇ ವಸ್ತು. ‘ಸತ್ಯದ’ ಹುಡುಕಾಟದತ್ತ ಸಾಗುವ ಈ ಕವಿತೆಗಳು ಪ್ರಮುಖವಾಗಿ ಹಾಡಿನ ರೂಪದಲ್ಲಿವೆ. ಭಾವಗೀತೆಯ ರೂಪ ಹೊಂದಿವೆ. ಈ ಹಾಡುಗಳಲ್ಲಿ ಅಂದ ಚೆಂದ ಬೆಡಗು ಸೌಂದರ್ಯ ಪ್ರೀತಿ ಸಂಕಟ ಎಲ್ಲವೂ ಅನಾವರಣಗೊಂಡಿವೆ. ಕನ್ನಡಪರ ಕಾಳಜಿ ತುಂಬಿ ತುಳುಕಾಡಿದೆ.

ಕವಿ ಪಂಪನ ಅರಿಯುತ ರನ್ನನ ಮನಗಾಣುತ

ವಚನ ಸಾಗರದಲ್ಲಿ ಮಿಂದೇಳುತ

ನಾರಣಪ್ಪಗೆ ನಮಿಸಿ ಸರ್ವಜ್ಞಗೆ ಶೃತಿ ಬೆರಸಿ

ರಸಋಷಿಯ ತತ್ವದಲಿ ಪದ ಪಡೆಯುತ

ಹಾಡು ನೀ ಸ್ವರವೆತ್ತಿ ಕನ್ನಡದಲ್ಲಿ

ಸಿರಿಗನ್ನಡ ಪೆಂಪನು ಎಲ್ಲೆಡೆ ಚೆಲ್ಲಿ

-ಕನ್ನಡವನ್ನು ಉಳಿಸುವುದು ಬೆಳೆಸುವುದರ ಬಗೆಗೆ ಹಲವಾರು ಗೀತೆಗಳಿವೆ. ಕನ್ನಡವೆಂಬ ಮೂರು ಅಕ್ಷರದಲ್ಲಿ ಎಷ್ಟೊಂದು ಅರ್ಥಗಳಿರುವುದನ್ನು ಗ್ರಹಿಸಿರುವ ಕವಿ ‘ಕನ್ನಡ ಎಂದರೆ ಬರಿ ನುಡಿ ಅಲ್ಲ’ ಎಂಬ ಗೀತೆಯಲ್ಲಿ ಕನ್ನಡತನವನ್ನು ಮೈಗೂಡಿಸಿಕೊಂಡಿದ್ದಾದರೆ ನಮ್ಮ ಬದುಕಿಗೆ ಸತ್ವಬರುತ್ತದೆ; ಬದುಕು ಹಸನಾಗುತ್ತದೆನ್ನುತ್ತಾರೆ. ನೆರಳು, ಗಾಳಿ, ಹೂವನ್ನು ನೀಡುವ ಮರಗಳು ಗಿಳಿ, ಕೋಗಿಲೆಗಳಿಗೆ ರಕ್ಷಣೆ ನೀಡುತ್ತವೆ; ಆಶ್ರಯವಾಗುತ್ತವೆ. ಅದಕ್ಕಾಗಿಯೇ ಹೀಗೆ ಮರದ ವಿನಂತಿ ಮಾರ್ಮಿಕವಾಗಿದೆ.

ನಾವು ಮಾಡುತಿಹ ನೂರು ಉಪಕಾರವ ಮರೆತು

ಅಪಕಾರವ ಮಾಡಿ ಬುವಿಯ ಮಸಣವ ಮಾಡದಿರಿ

ಮಸಣವ ಮಾಡದಿರಿ; ನಿಮ್ಮ ಸಮಾಧಿ ಕಟ್ಟದಿರಿ

ಪರಿಸರವನ್ನು ಉಳಿಸಿ ಸಂರಕ್ಷಿಸದಿದ್ದರೆ ಆಗುವ ಅಪಾಯವನ್ನು ಒಂದೇ ಸಾಲಿನಲ್ಲಿ ಸೂಚಿಸಲಾಗಿದೆ.

ದಿಕ್‌ದಿಕ್ಕಲೂ ಹೊತ್ತಿ ಉರಿವ ಬೆಂಕಿ ಆರಲಿ

ಮನುಜ ಮನುಜ ನಡುವಿರುವ ಗೋಡೆ ಉರುಳಲಿ

ಹೃದಯ ಹೃದಯದಲ್ಲು ಸ್ನೇಹ ಭಾವ ಮೂಡಲಿ

ಪ್ರೀತಿ ಮಾರ್ಗದಲ್ಲೆ ವಿಶ್ವರಥವು ಸಾಗಲಿ

ಹೀಗೆನ್ನುತ್ತ ಐಕ್ಯಗೀತೆ ಹಾಡುವ ಆಶಯ ವ್ಯಕ್ತಪಡಿಸಲಾಗಿದೆ. ಅಯೋಧ್ಯೆಯ ಘಟನೆ, ಕಾಶ್ಮೀರ ಗಡಿಸಮಸ್ಯೆ, ಪಂಜಾಬ್ - ಅಸ್ಸಾಂನ ಹೊತ್ತಿ ಉರಿಯುತ್ತಿರುವ ಸಮಸ್ಯೆ, ಧಾರ್ಮಿಕ ಸಂಘರ್ಷ - ಇತ್ಯಾದಿಗಳೆಲ್ಲ ‘ದಿಕ್‌ದಿಕ್ಕಲಿ ಹೊತ್ತಿ ಉರಿವ ಬೆಂಕಿ ಆರಲಿ’ ಎಂಬ ಗೀತೆಯಲ್ಲಿ ಪ್ರಸ್ತಾಪಗೊಂಡಿದ್ದು ಸಮಸ್ಯೆಗಳ ಪುನರ್ ವಿಮರ್ಶೆಗೆ ಅವಕಾಶ ಮಾಡಿಕೊಡಲಾಗಿದೆ.

‘ಗುಡಿಕಟ್ಟಿದವರನ್ನು ಗುಡಿಯಾಚೆಗಿರಿಸಿದ

ಕೆರೆಕಟ್ಟಿದವರನ್ನು ಕೆರೆ ಮುಟ್ಟಗೊಡದ

ಪಾವಿತ್ರದ ಚರಿತೆ ಇದು ಅಲ್ಲವೆ ಹೇಳಿ’

ಎಂದು ವ್ಯಂಗ್ಯದ ಧಾಟಿಯ ‘ಮೇರಾ ಭಾರತ ಮಹಾನ್ ಹೈ’ ಕವಿತೆ ಇದೆ.

ಎಲ್ಲಾ ಒಳ್ಳೆವ್ರ...

ಇದ್ದದ್ ಇದ್ದಂಗ್ ಹೇಳ್ದೊವ್ರ್ ಮಾತ್ರ

ಭಾರಿ ಕೆಟ್ಟವ್ರ,

ಹೀಗೆ ಪ್ರಾರಂಭವಾಗುವ ‘ಎಲ್ಲಾ ಒಳ್ಳೆವ್ರ’ ‘ಯಾವತ್ತಿಲ್ದಿದ್ ಈವತ್ ಮಾತ್ರ’ ಗೀತೆಗಳು ಜಿ.ಪಿ.ರಾಜರತ್ನಂ ಪದ್ಯದ ಭಾಷೆಯಂತಿರುವುದನ್ನು, ವ್ಯಂಜನದ ಬಳಕೆ ಇರುವುದನ್ನು ಗಮನಿಸಬಹುದಾಗಿದೆ. ಇಲ್ಲಿ ಹಾಡುವ ಕವಿತೆಗಳಿರುವಂತೆ ವಿವಿಧ ಸಂದರ್ಭದಲ್ಲಿ ವಾಚಿಸಿದ ಕವಿತೆಗಳೂ ಇವೆ, ಭಾವಗೀತೆಗಳೂ ಇವೆ, ಜನಪರ ಗೀತೆಗಳೂ ಇವೆ. ಕಾವೆಂಶ್ರೀ ಅವರೇ ಹೇಳುವಂತೆ ‘‘ಇದು ಸಂಘಟನೆ, ಹೋರಾಟ, ಸಿದ್ಧಾಂತ, ಚಿಂತನೆ ಮತ್ತು ಸಂವೇದನೆಗಳ ವಿವಿಧ ಮಗ್ಗುಲುಗಳಲ್ಲಿ ಮುಂದುವರಿದಿವೆೆ’’. ಬಹುಪಾಲು ಗೀತೆಗಳು ಗೇಯಾಂಶವನ್ನು ಒಳಗೊಂಡಿರುವುದರಿಂದ ಹಾಡಲು ಯೋಗ್ಯವಾಗಿವೆ. ಹೀಗಾಗಿ ಸಂಕಲನಕ್ಕೆ ‘ಗೀತಮಾಧುರಿ’ ಎಂಬ ಹೆಸರು ಸಾರ್ಥಕವಾದುದೆನಿಸುತ್ತದೆ. ಕರ್ನಾಟಕದ ಬಹುತೇಕ ಸಮಸ್ಯೆಗಳು ಇಲ್ಲಿಯ ಕವಿತೆಗಳ ವಸ್ತುವಾಗಿದ್ದು, ಸಮಸ್ಯೆಗಳ ಭಾರದಿಂದ ಎಲ್ಲೂ ಕಲಾತ್ಮಕತೆಯನ್ನು ಕಳೆದುಕೊಳ್ಳುವುದಿಲ್ಲ. ನಾಟಕೀಯ ಶೈಲಿಯ ಕವಿತೆಗಳಿರುವಂತೆ (‘ಅಪ್ಪ ಅಪ’್ಪ, ‘ಬಾರೆ ಹುಡುಗಿ’, ‘ಚಂದ್ರತಾರೆ ಊರಿನಿಂದ’), ಮಾರ್ಕ್ಸ್‌ವಾದಿ ಪ್ರೇರಣೆಯ ಕವಿತೆಗಳಿರುವಂತೆ (‘ಕನಸುಗಳು ಕರೆದಾವೊ ಮನಸುಗಳು ಬೆರೆತಾವೊ’), ವ್ಯಂಗ್ಯದ ಮಾದರಿಯ (‘ಕಾಣೆಯಾಗಿದೆ ಬಾಲ್ಯ’, ಕ್ರಾಂತಿಕಾರಿಗಳು ನಾವು’, ‘ಗೊತ್ತಿರುವುದು ನನಗೆ’, ‘ಗೊರಕೆ ಸಾಕು?’) ಕವಿತೆಗಳೂ ಗಮನ ಸೆಳೆಯುತ್ತವೆ. ಹಳ್ಳಿಯ ರಾಜಕೀಯ, ಭ್ರೂಣ ಹತ್ಯೆ, ಹೊರನಾಡುನಂತಹ ಪ್ರದೇಶ ಗಳ ಪ್ರಾಕೃತಿಕ ಸೌಂದರ್ಯ ಇತ್ಯಾದಿಗಳನ್ನು ಕುರಿತ ಕವಿತೆಗಳೂ ಮನವನ್ನು ಉಲ್ಲಾಸಗೊಳಿಸುತ್ತವೆ. ಭಾವಗೀತ ಮಾದರಿಯು ‘ನನ್ನ ಹೃದಯದಲುದಿಸಿದ ಕವಿತೆ/ನಿನ್ನ ನೆನಪಲೆ ಹಾಡಿದೆ ಚರಿತೆ’ ಮುಂತಾದ ಕವಿತೆಗಳ ಮೂಲಕ ನವೋದಯ ಕಾವ್ಯ ಇಂದಿಗೂ ಮುಂದುವರಿಯುತ್ತಲೇ ಬಂದಿರುವುದನ್ನು ಮತ್ತು ಆ ನಿಟ್ಟಿನ ಅತ್ಯುತ್ತಮ ಭಾವಗೀತೆಗಳನ್ನು ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬರೆಯಬಲ್ಲರೆಂಬುದನ್ನು ‘ಗೀತ ಮಾಧುರಿ’ ಸಾಬೀತುಪಡಿಸುತ್ತದೆ.

ವಿಳಾಸ : ಡಾ. ಜಿ. ಆರ್. ತಿಪ್ಪೇಸ್ವಾಮಿ,

ಕೃತಿಯ ಹೆಸರು : ‘ಗೀತ ಮಾಧುರಿ’:

ಲೇಖಕರು : ಡಾ.ಕಾ.ವೆಂ.ಶ್ರೀನಿವಾಸಮೂರ್ತಿ,

ಪ್ರಕಾಶಕರು: ಅಕ್ಷರ ಮಂಟಪ ವಿಜಯನಗರ, ಬೆಂಗಳೂರು-4

Writer - ಡಾ. ಜಿ.ಆರ್.ತಿಪ್ಪೇಸ್ವಾಮಿ

contributor

Editor - ಡಾ. ಜಿ.ಆರ್.ತಿಪ್ಪೇಸ್ವಾಮಿ

contributor

Similar News