ಮೂಢನಂಬಿಕೆಯ ಕೆಲವೊಂದು ನಿದರ್ಶನಗಳು

Update: 2018-03-17 12:01 GMT

ಭಾಗ - 35

ವ್ಯಕ್ತಿಗೆ ರೋಗ ಬಂದಾಗ ವೈದರ ಸಲಹೆ ಪಡೆಯುವುದು ಮುಖ್ಯವೇ ಹೊರತು ಮಾಟ ಮಂತ್ರವಲ್ಲ. ಒಂದು ಕಾಲದಲ್ಲಿ ಸಿಡುಬು ರೋಗ ಬಂದಾಗ ಮಾರಿಯಮ್ಮನ ಪೂಜೆ ಮಾಡಲಾಗುತ್ತಿತ್ತು. ಈಗಲೂ ಅದನ್ನೇ ಮಾಡುವುದೆಂದರೆ ಮೂರ್ಖತನದ ಪರಮಾವಧಿ ಅನ್ನಲೇ ಬೇಕು. ಯಾಕೆಂದರೆ ಹಿಂದಿನ ಕಾಲದಲ್ಲಿ ಸಿಡುಬುರೋಗ ಹಬ್ಬುವುದು ಹೇಗೆ ಎಂಬ ಬಗ್ಗೆ ಜನಸಾಮಾನ್ಯರಿಗೆ ಅರಿವಿರಲಿಲ್ಲ. ಹಾಗಾಗಿ ಪೂಜೆ ನಡೆಸುತ್ತಿದ್ದರು. ಈಗ ರೋಗ ಬಾರದಂತೆ ಏನು ಮಾಡಬೇಕೆಂದು ತಿಳಿದಿದೆ. ಸಿಡುಬುರೋಗ ಸದ್ಯ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಅದು ನಿಂತಿರಲು ಮಾರಮ್ಮನ ಪೂಜೆ ಕಾರಣವಲ್ಲ. ದಾಕು ಹಾಕುವುದು ಎಂದು ಎಲ್ಲರಿಗೂ ತಿಳಿದಿದೆ.

ನಾನು ಮೂಢನಂಬಿಕೆಗಳ ಬಗ್ಗೆ ಮಾತನಾಡುತ್ತಾ ಬಂದಾಗಲೆಲ್ಲಾ, ನನ್ನನ್ನು ಹಲವಾರು ರೀತಿಯಲ್ಲಿ ಪ್ರಶ್ನಿಸಿದ್ದಾರೆ, ತರ್ಕಿಸಿದ್ದಾರೆ, ಟೀಕಿಸಿದ್ದಾರೆ, ವಿಮರ್ಶಿಸಿದ್ದಾರೆ. ಅವೆಲ್ಲದಕ್ಕೂ ನನ್ನ ಸ್ವಾಗತವಿದೆ. ಚರ್ಚೆ, ಟೀಕೆ, ವಿಮರ್ಶೆ ಪ್ರಶ್ನೆಗಳು ಅತೀ ಅಗತ್ಯ. ನಮ್ಮ ಸಂಸ್ಕೃತಿಯಲ್ಲಿ ಗಾಯನ, ನೃತ್ಯ, ಶಿಲ್ಪಕಲೆ ಇತ್ಯಾದಿಗಳ ಭವ್ಯ ಪರಂಪರೆಯಿದೆ. ಭಜನೆ ಮತ್ತು ಪ್ರಾರ್ಥನೆಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಇವುಗಳನ್ನು ಕೇಳಬಾರದೇ? ಹಾಡಬಾರದೇ? ಎಂದು ನನ್ನನ್ನು ಪ್ರಶ್ನಿಸಿದವರು ಹಲವರು. ನಾನು ಹೇಳುತ್ತೇನೆ. ಖಂಡಿತವಾಗಿಯೂ ಹಾಡುವುದನ್ನಾಗಲಿ, ಕೇಳುವುದನ್ನಾಗಲಿ ನಿಲ್ಲಿಸುವ ಅಗತ್ಯವಿಲ್ಲ. ಭೂತಾರಾಧನೆಯ ನೃತ್ಯಗಳು ನಮಗೆ ಪರಂಪರೆಯಿಂದ ಬಂದವುಗಳು. ಅವುಗಳಲ್ಲಿ ಪರಂಪರೆಯ ಸತ್ವವಿದೆ, ಅರ್ಥವಿದೆ. ಅವುಗಳನ್ನು ಮುಂದುವರಿಸಲೇಬೇಕು. ಆದರೆ, ನಮಗೆ ಬೇಕಾಗಿರುವುದು ಏನು ಎಂಬುದನ್ನು ಮಾತ್ರ ನಾವು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಿದೆ. ಈ ಮೂಢನಂಬಿಕೆಗಳ ಆಚರಣೆಯಿಂದ ಶೋಷಣೆ, ಅಪಾಯಗಳು ಅಧಿಕ.

ವ್ಯಕ್ತಿಗೆ ರೋಗ ಬಂದಾಗ ವೈದರ ಸಲಹೆ ಪಡೆಯುವುದು ಮುಖ್ಯವೇ ಹೊರತು ಮಾಟ ಮಂತ್ರವಲ್ಲ. ಒಂದು ಕಾಲದಲ್ಲಿ ಸಿಡುಬು ರೋಗ ಬಂದಾಗ ಮಾರಿಯಮ್ಮನ ಪೂಜೆ ಮಾಡಲಾಗುತ್ತಿತ್ತು. ಈಗಲೂ ಅದನ್ನೇ ಮಾಡುವುದೆಂದರೆ ಮೂರ್ಖತನದ ಪರಮಾವಧಿ ಅನ್ನಲೇ ಬೇಕು. ಯಾಕೆಂದರೆ ಹಿಂದಿನ ಕಾಲದಲ್ಲಿ ಸಿಡುಬುರೋಗ ಹಬ್ಬುವುದು ಹೇಗೆ ಎಂಬ ಬಗ್ಗೆ ಜನಸಾಮಾನ್ಯರಿಗೆ ಅರಿವಿರಲಿಲ್ಲ. ಹಾಗಾಗಿ ಪೂಜೆ ನಡೆಸುತ್ತಿದ್ದರು. ಈಗ ರೋಗ ಬಾರದಂತೆ ಏನು ಮಾಡಬೇಕೆಂದು ತಿಳಿದಿದೆ. ಸಿಡುಬುರೋಗ ಸದ್ಯ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಅದು ನಿಂತಿರಲು ಮಾರಮ್ಮನ ಪೂಜೆ ಕಾರಣವಲ್ಲ. ದಾಕು ಾಕುವುದು ಎಂದು ಎಲ್ಲರಿಗೂ ತಿಳಿದಿದೆ.

ಪ್ರಾರ್ಥನೆ, ಚಮತ್ಕಾರಗಳಿಂದ ರೋಗ ಗುಣವಾಗುವುದೆಂದರೆ ಅದು ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ಈ ಪ್ರಾರ್ಥನೆ, ಹರಕೆಗಳು ಯಾಕಾಗಿ ಹುಟ್ಟಿಕೊಂಡವು ಎಂಬ ಬಗ್ಗೆ ವಿಶ್ಲೇಷಣೆಯೂ ಅಗತ್ಯ. ಹಿಂದಿನ ಕಾಲದಲ್ಲಿ ವೈದ್ಯಕೀಯ ವಿಜ್ಞಾನ ಮುಂದುವರಿದಿರಲಿಲ್ಲ. ಆ ಸಮಯದಲ್ಲಿ ನಮ್ಮ ಪ್ರೀತಿಪಾತ್ರರು ರೋಗದಿಂದ ನರಳುವುದನ್ನು ಸಹಿಸಲಾಗದೆ ನಂಬಿಕೆಯ ಆಧಾರದಲ್ಲಿ ದೇವರಿಗೆ ಮೊರೆ ಹೋಗುತ್ತಿದ್ದಿರಬಹುದು. ಇಂತಹ ಮೂಢನಂಬಿಕೆಗಳನ್ನು ಈಗಲೂ ಆಚರಿಸಿದೆ ಅಪಾಯಕ್ಕೊಳಗಾಗಬೇಕಾಗುತ್ತದೆ.

ಹಿಂದಿನ ಆಚರಣೆಗಳು, ನಂಬಿಕೆಗಳು ಅವೈಜ್ಞಾನಿಕವೇ ಎಂಬ ಪ್ರಶ್ನೆಯನ್ನೂ ನನ್ನನ್ನು ಕೇಳುತ್ತಿರುತ್ತಾರೆ. ಒಂದು ಗಿಡದ ಎಲೆಯನ್ನು ಪೂಜೆ ಮಾಡಿ ಸೇವಿಸಿದರೆ ರೋಗ ಗುಣವಾಗುತ್ತದೆ ಎಂಬ ನಂಬಿಕೆ ಇರಬಹುದು. ರೋಗ ಗುಣವಾಗಿಬಿಡಬಹುದು. ಆದರೆ ಇದಕ್ಕೆ ಕಾರಣ ಎಲೆಯಲ್ಲಿರುವ ಔಷಧೀಯ ಗುಣವೇ ಹೊರತು ಪವಾಡವಲ್ಲ. ಇಂತಹ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತ ದಿನನಿತ್ಯ ಸಂಭವಿಸುತ್ತಿರುತ್ತವೆ. ಒಳ್ಳೆಯ ಉದ್ದೇಶದಿಂದಲೇ ಆರಂಭವಾದ ಪದ್ಧತಿಗಳು ಮಾರಕವಾಗಿ ಪರಿಣಮಿಸುತ್ತವೆ. ಕೆಲವೊಮ್ಮೆ ಅನುಕರಣೆಗಳೂ ನಮ್ಮನ್ನು ತಪ್ಪು ದಾರಿಗೆ ಎಳೆದೊಯ್ಯುತ್ತವೆ. ಇದಕ್ಕೊಂದು ಉದಾಹರಣೆ ನನ್ನ ದಲಿತ ಮಿತ್ರರೊಬ್ಬರು ತಿಳಿಸಿದ ಪ್ರಸಂಗವನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ದಲಿತ ಕಾಲನಿಯಲ್ಲಿ ಒಬ್ಬ ವ್ಯಕ್ತಿ ಸ್ಥಿತಿವಂತರಾಗಿದ್ದರು. ತಾನೂ ಸಹ ಮುಂದುವರಿದ ಜಾತಿಯವರಂತೆ ಇರಬೇಕೆಂಬ ಆಸೆ ಆ ವ್ಯಕ್ತಿಗಾಯಿತು. ಒಂದು ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಲು ಆ ವ್ಯಕ್ತಿ ಮುಂದಾದರು. ಪೂಜೆಯನ್ನು ಗದ್ದೆಯಲ್ಲಿ ಮಾಡಲು ನಿರ್ಧರಿಸಲಾಯಿತು. ಪೂಜೆ ಮಾಡಲು ಬಂದಿದ್ದ ಮೇಲ್ವರ್ಗದ ವ್ಯಕ್ತಿಯ ನಂಬಿಕೆಯ ಪ್ರಕಾರ ಆತ ದಲಿತ ವ್ಯಕ್ತಿಯ ಮನೆಗೆ ಹೋದರೆ ಮೈಲಿಗೆಯಾಗುತ್ತದೆ. ಹಾಗಾಗಿ ಗದ್ದೆಯಲ್ಲಿ ಪೂಜೆ ನಡೆಸಲು ಮನವೊಲಿಸಲಾಗಿತ್ತು. ಪೂಜೆಯ ಬಳಿಕ ಪೂಜೆ ಮಾಡಿಸಿದ ಯಜಮಾನರಿಗೆ ಪ್ರಸಾದವನ್ನು ನೀಡಬೇಕು. ಆದರೆ ಈ ದಲಿತ ವ್ಯಕ್ತಿಯನ್ನು ಮುಟ್ಟಿಸಿಕೊಂಡರೂ ಮೈಲಿಗೆ. ಅದಕ್ಕೂ ಆ ಪೂಜೆ ಮಾಡಲು ಬಂದಿದ್ದ ವ್ಯಕ್ತಿ ಉಪಾಯ ಮಾಡಿಕೊಂಡಿದ್ದ. ದಲಿತ ವ್ಯಕ್ತಿಯ ಪಕ್ಕದ ಮನೆಯ ಇತರ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮನೆ ಬಾವಿಯಿಂದ ಪೂಜೆಗೆ ನೀರು ತರಿಸಲಾಯಿತು. ಪೂಜೆಗೆ ಆ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಕೂರಿಸಲಾಯಿತು. ಅಂತೂ ಪೂಜೆ ವಿಧಿವತ್ತಾಗಿ ನೆರವೇರಿತು. ಪ್ರಸಾದವನ್ನು ದಲಿತ ವ್ಯಕ್ತಿಯ ನೆರೆಯ ಮನೆಯಾತನಿಗೆ ನೀಡಿ ಅದನ್ನು ದಲಿತ ವ್ಯಕ್ತಿಗೆ ವರ್ಗಾಯಿಸಲಾಯಿತು. ಆದರೆ ದಲಿತ ವ್ಯಕ್ತಿ ನೀಡಿದ ಹಣವನ್ನು ಮಾತ್ರ ಪೂಜೆ ಮಾಡಲು ಬಂದಾತ ಪಡೆದುಕೊಂಡ. ಹಣಕ್ಕಿಲ್ಲದ ಮೈಲಿಗೆ ಮೈ ಕೈ ಮುಟ್ಟುವುದಕ್ಕೆ ಮಾತ್ರ ಸೀಮಿತವಾಗಿತ್ತು. ಇದಾದ ಬಳಿಕ ದಲಿತರು ಸಭೆ ನಡೆಸಿದರು. ಅಲ್ಲಿ ಸಾಕಷ್ಟು ಚರ್ಚೆಗಳೂ ನಡೆಯಿತು. ವಿಚಾರವಾದಿ ವೇದಿಕೆಯ ಕಾರ್ಯಕ್ರಮಗಳನ್ನು ನೋಡಿ ಪ್ರಭಾವಿತರಾಗಿದ್ದ ದಲಿತ ಜಾಗೃತ ವೇದಿಕೆಯ ಅಧ್ಯಕ್ಷರು, ಈ ರೀತಿ ಕಾರ್ಯಕ್ರಮದ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಆ ದಲಿತ ವ್ಯಕ್ತಿ ಮನವರಿಕೆ ಮಾಡಿಕೊಂಡರಂತೆ.

ಇವೆಲ್ಲಾ ಮೂಢನಂಬಿಕೆಯ ಕೆಲವೊಂದು ನಿದರ್ಶನಗಳು ಅಷ್ಟೆ. ಇದರಿಂದ ಬದಲಾದವರು, ಕೆಟ್ಟ ಮೇಲೆ ಬುದ್ಧಿ ಎಂಬಂತೆ ತಮ್ಮನ್ನು ತಾವು ಬದಲಾಯಿಸಿಕೊಂಡವರೂ ಇದ್ದಾರೆ. ಹಾಗಿದ್ದರೂ ಮೂಢನಂಬಿಕೆಯೆಂಬ ಆಚರಣೆಗಳು ಮಾತ್ರ ನಮ್ಮ ಸುತ್ತಮುತ್ತ ಸಾಗುತ್ತಲೇ ಇರುತ್ತವೆ. ಇದಕ್ಕೆ ವೈಜ್ಞಾನಿಕ ಮನೋಭಾವವೊಂದೇ ಉತ್ತರ. ಹೆಚ್ಚು ಹೆಚ್ಚು ವೈಜ್ಞಾನಿಕ ಮನೋಭಾವವನ್ನು ನಾವು ಬಾಲ್ಯದಲ್ಲಿಯೇ ಮಕ್ಕಳಲ್ಲಿ ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಆ ಕೆಲಸವನ್ನು ವಿಚಾರವಾದಿಗಳ ವೇದಿಕೆ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಮುಂದುವರಿಸುತ್ತಿದೆ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News