ಬಸವಾನಿ ಜಾನಕಮ್ಮನವರ ಚೆಂದದ ಬದುಕು

Update: 2018-03-17 12:24 GMT
ಬಸವಾನಿ ಜಾನಕಮ್ಮ

ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳೇ ತಮ್ಮ ಆಟೋ ಬಯೋಗ್ರಫಿ ಬರೆದುಕೊಳ್ಳುವುದೋ ಅಥವಾ ಅನ್ಯರು ಅಂತವರ ಬಯೋಗ್ರಫಿ ಬರೆದು ಪ್ರಕಟಿಸುವುದೋ ಒಂದು ವಾಡಿಕೆ. ಉಳಿದಂತೆ ಸ್ಮರಣ ಸಂಚಿಕೆ ಇತ್ಯಾದಿ ಬರಹಗಳ ಪರಂಪರೆಯೂ ನಮ್ಮಲ್ಲಿದೆ. ಅದೇ ರೀತಿ ಬಸವಾನಿ ಜಾನಕಮ್ಮನವರ ಕುರಿತಾದ ಪುಸ್ತಕ ಒಂದರಲ್ಲಿ ಅವರ ಕುಟುಂಬದ ಸದಸ್ಯರ ಮತ್ತು ಪರಿಚಿತರ ನಿರೂಪಣೆಗಳಿಂದ ಕೂಡಿದೆ. ಆದರೆ ಇವರ್ಯಾರು ವೃತ್ತಿ ನಿರತ ಬರಹಗಾರರಲ್ಲ. ಹಾಗಾಗಿ ಜಾಳು ಜಾಳು ನಿರೂಪಣೆ, ಘಟನೆಗಳ ಪುನಾರಾವರ್ತನೆ ಪುಸ್ತಕದ ಉದ್ದಕ್ಕೂ ಇದೆ. ಈ ದೋಷಗಳ ನಡುವೆಯೂ ಸೂಕ್ಷ್ಮ ಓದುಗನೊಬ್ಬನಿಗೆ ಬ್ರಾಹ್ಮಣ ಸಂಪ್ರದಾಯಸ್ಥ ಕುಟುಂಬದ ಜಾನಕಮ್ಮನವರ ವ್ಯಕ್ತಿತ್ವ, ಸರಳತೆ ಹಾಗೂ ಜೀವನ ಪ್ರೀತಿ ಬೆರಗು ಹುಟ್ಟಿಸುವಂತಿದೆ.

ಕಾರ್ಕಳ ತಾಲೂಕಿನ ಕುಕ್ಕುಂದೂರಿನವರಾದ ಜಾನಕಮ್ಮ ತೀರ್ಥಹಳ್ಳಿಯ ಬಸವಾನಿ ಅನಂತಮೂರ್ತಿಯವರನ್ನು ಮದುವೆಯಾಗಿ ಘಟ್ಟದ ಕೆಳಗಿನಿಂದ ಮೇಲಕ್ಕೆ ಬಂದವರು. ಸಂಗೀತ, ಹಾಡುಗಾರಿಕೆ ಇವರಿಗೆ ಪ್ರಿಯವಾದ ಸಂಗತಿಗಳು.

ಹೆಚ್.ವೈ. ಶಾರದ ಪ್ರಸಾದ್

ಈಗಿನಂತೆ ಯಾವುದೇ ಆಧುನಿಕ ಸಾರಿಗೆ, ಮನರಂಜನೆ, ಶಿಕ್ಷಣದ ಅವಕಾಶವಿರದಿದ್ದ ಮಲೆನಾಡಿನ ಒಳ ಪ್ರದೇಶದ ಬಸವಾನಿಯಲ್ಲಿ ಜಾನಕಮ್ಮನವರು ಸುಮಾರು ನಲವತ್ತು ವರ್ಷ ಬದುಕಿದವರು. ಆ ಅವಧಿಯಲ್ಲಿ ನೂರಾರು ಜನರಿಗೆ ಸಂಗೀತ ಪಾಠ ಹೇಳಿಕೊಟ್ಟು ಹೊಲಿಗೆ, ಕಸೂತಿ, ಬುಟ್ಟಿ ಹೆಣೆಯುವುದು, ಕೊನೆಗೆ ಅರ್ಧಕ್ಕೆ ಓದು ಬಿಟ್ಟಿದ್ದ ಹುಡುಗಿಯರಿಗೆ ನೇರವಾಗಿ ಎಸೆಸೆಲ್ಸಿ ಪರೀಕ್ಷೆಗೆ ಕೂಡುವ ವ್ಯವಸ್ಥೆ ಮಾಡಿ ಟ್ಯೂಷನ್‌ಗೂ ಅನುಕೂಲ ಮಾಡಿಕೊಟ್ಟವರು ಅವರು. ಅಷ್ಟೇ ಅಲ್ಲ ಸಣ್ಣ ಪುಟ್ಟ ನಾಟಕಗಳನ್ನು ಬರೆದು, ಆಡಿಸಿ, ತಾವೂ ಸಂಗೀತ ನೀತಿ ಸಂಪ್ರದಾಯಸ್ಥರಿಂದ ಮೂದಲಿಕೆಗೂ ಈಡಾಗಿದ್ದರು.

ಇವನ್ನೆಲ್ಲಾ ಅವರ ಚಟುವಟಿಕೆ ಕುರಿತಾದ ಮಾಹಿತಿಯಂತೆ ಗ್ರಹಿಸಿದರೆ ಜಾನಕಮ್ಮನವರ ವ್ಯಕ್ತಿತ್ವ ಅಳತೆಗೆ ಸಿಗುವುದಿಲ್ಲ.

ನಿರ್ಜನ ಕಾಡುಗಳಿಂದ ಸುತ್ತುವರಿದ, ವಿರಳ ಜನಸಂಖ್ಯೆಯ ಮಲೆನಾಡಿನ ಹಳ್ಳಿಗಳ ಸಾವಿರಾರು ಮಹಿಳೆಯರಿಗೆ ಜಾನಕಮ್ಮನ ವರ ಇಂತಹ ಕ್ರಿಯಾಶೀಲ ಕೆಲಸಗಳು ಸಂತೋಷಕೊಟ್ಟಿವೆ. ಬದುಕಿನ ಏಕತಾನತೆಯನ್ನು ಮುರಿದು ಸಂಗೀತ, ನಾಟಕದ ಅಭಿರುಚಿ ಬೆಳೆಸಿಕೊಳ್ಳುವುದರ ಜೊತೆಗೆ ಟೈಲರಿಂಗ್ ಇತ್ಯಾದಿ ಕಲಿತು ಸ್ವಾವಲಂಬಿಗಳಾಗುವ ದಾರಿಯನ್ನು ಆಕೆ ತೋರಿಸಿಕೊಟ್ಟವರು. ಅಷ್ಟೇ ಅಲ್ಲದೆ ಉತ್ತಮ ಅಭಿರುಚಿ, ಸ್ವಚ್ಛ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂಬ ಆಕಾಂಕ್ಷೆಯನ್ನೂ ಜಾನಕಮ್ಮ ಅನೇಕ ಮಹಿಳೆಯರಲ್ಲಿ ಬಿತ್ತಿದರೆಂಬುದು ಮುಖ್ಯ.

1958ರ ಸುಮಾರಿಗೆ ಜಾನಕಮ್ಮ, ಸಾವಿತ್ರಮ್ಮ ರಾಮಶರ್ಮ, ಲಲಿತಮ್ಮ ನಂಜುಂಡಯ್ಯ ಮುಂತಾದವರು ಪ್ರಾರಂಭಿಸಿದ ಬಸವಾನಿ ಮಹಿಳಾ ಸಮಾಜ ಇಂದು ಬೆಳೆದು ವೃದ್ಧಾಶ್ರಮ ಹೆರಿಗೆ ಆಸ್ಪತ್ರೆಗಳನ್ನು ಊರಿಗೆ ತಂದಿದೆ.

ಜಾನಕಮ್ಮ ಓರ್ವ ಸಮಾಜ ಸುಧಾರಕಿ ತರದವರಲ್ಲ. ಸರಕಾರಿ ಅಧಿಕಾರಿ ಅಥವಾ ರಾಜಕಾರಣಿಯಂತಿದ್ದವರೂ ಅಲ್ಲ. ಅವರಿಗೆ ಪ್ರಶಸ್ತಿ-ಖ್ಯಾತಿಯ ಹಂಬಲವೂ ಇರಲಿಲ್ಲ. ಆದರೆ ತಮ್ಮ ಬದುಕನ್ನು ಚಂದವಾಗಿ, ಕ್ರಿಯಾಶೀಲರಾಗಿ ನಡೆಸುತ್ತಲೇ ಆ ಮೂಲಕ ಸುತ್ತಲಿನ ನೂರಾರು ಮಹಿಳೆಯರಲ್ಲೂ ಬದುಕಿನ ಸಂತೋಷಗಳ ಸೆಲೆಯನ್ನು ಕಂಡುಕೊಳ್ಳಲು ಪ್ರೇರಣೆ ಕೊಟ್ಟಿದ್ದಾರೆ.

ಜಾನಕಮ್ಮನವರು ತಮ್ಮ ಜೀವ ಮಾನವಿಡೀ ಬ್ರಾಹ್ಮಣ ಜಾತಿವಲಯ ಗಳಲ್ಲೇ ಇದ್ದವರು. ಆದರೆ ಅವರೆಂದೂ ಜಾತಿ ತಾರತಮ್ಯ ಆಚರಿಸಿದವರಲ್ಲ ಎನ್ನಲಾಗುತ್ತಿದೆ. ಆಕೆ ತಮ್ಮ ಸಾಮಾಜಿಕ ಕಾರ್ಯಗಳಿಗಾಗಿ ಪೇಜಾವರ ಸ್ವಾಮೀಜಿಯಿಂದ ಒಮ್ಮೆ ಸನ್ಮಾನ ಸ್ವೀಕರಿಸಿದ್ದಾರೆ. ಪ್ರಗತಿಪರರಾದ ನಮ್ಮಂತಹವರಿಗೆ ಅವರ ಸಂಪ್ರದಾಯವಾದಿ ಜಾತಿವಲಯ, ಪೇಜಾವರ ಸಾನಿಧ್ಯ ಎಂಬ ಸಂಗತಿಗಳು ಸ್ವಲ್ಪ ಇರಿಸುಮುರಿಸು ಉಂಟು ಮಾಡುತ್ತವೆ. ಆದರೆ ಜಾನಕಮ್ಮನವರು ಒಂದು ರೀತಿ ಜಾತಿವಾದಿಯೂ ಅಲ್ಲ. ಅದೇ ರೀತಿ ಜಾತ್ಯತೀತರೂ ಅಲ್ಲ ಎಂಬ ತಟಸ್ಥ ವಲಯ ನಿರ್ಮಿಸಿಕೊಂಡಿದ್ದವರು.

ಬಸವಾನಿಯಂತಹ ಸಣ್ಣ ಗ್ರಾಮದಲ್ಲಿ ಗಮಕ, ನಾಟಕ, ಸಂಗೀತದಂತ ಸಾಂಸ್ಕೃತಿಕ ಕೆಲಸ ಮಾಡಿದ್ದೇ ಅಲ್ಲದೆ ಮಹಿಳೆಯರು ದುಡಿದು ಬದುಕಬಹುದಾದ ಶಿಕ್ಷಣ ಕೊಡಿಸಿ, ಟೈಲರಿಂಗ್ ಕಲಿಸಿ ಬದುಕುವ ಭರವಸೆ ಮೂಡಿಸಿದ್ದಾರೆಂಬುದು ಗಮನಾರ್ಹ. ಅವರ ಮನೆ ದಶಕಗಳ ಕಾಲ ಒಂದು ಪುಟ್ಟ ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಷ್ಟೇ ಅಲ್ಲ, ಸುತ್ತಲಿನ ಗ್ರಾಮಗಳ ಮಹಿಳೆಯರ ಬದುಕಿನ ಕಷ್ಟಗಳನ್ನು ಕೇಳಿ ಸಮಾಧಾನ, ಪರಿಹಾರ ಸೂಚಿಸುವ ಕೌನ್ಸಿಲಿಂಗ್ ಸೆಂಟರ್‌ನಂತೆಯೂ ಇತ್ತೆಂದು ಪುಸ್ತಕ ವಿವರಿಸಿದೆ. ಈ ಹಿಂದೆ ಪ್ರಧಾನ ಮಂತ್ರಿಗಳ ಮೀಡಿಯಾ ಸಲಹೆಗಾರರಾಗಿದ್ದ ಹೆಚ್.ವೈ. ಶಾರದ ಪ್ರಸಾದ್ ತಮ್ಮ ಅಜ್ಜಿ ಬಗ್ಗೆ ಮೊಮ್ಮಕ್ಕಳು ಹೇಳಿದ ಅಜ್ಜಿಯ ಕತೆ ಎಂಬ ಪುಸ್ತಕ ಪ್ರಕಟಿಸಿದ್ದರು. ಅದರಲ್ಲಿ ಅವರು ಅಮ್ಮಣ್ಣಿ ಎಂದು ಕರೆಯುತ್ತಿದ್ದ ಒಂದು ನೂರಾ ಮೂರು ವರ್ಷ ಬದುಕಿದ್ದ ಅಜ್ಜಿ ಬಗ್ಗೆ ಆಕೆಯ ಜೀವನ ಶೈಲಿ ಔದಾರ್ಯ, ಸಣ್ಣತನ, ಸ್ವಾಭಿಮಾನ, ಜಗಳಗಂಟಿತನ, ಸಂಗೀತ ಪ್ರೇಮ ಮುಂತಾದ್ದನ್ನೆಲ್ಲಾ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ.

ಆರ್ಥಿಕವಾಗಿ ನೆಮ್ಮದಿಯಾಗಿದ್ದ ಬ್ರಾಹ್ಮಣ ಕುಟುಂಬದ ಸದಸ್ಯೆಯೊಬ್ಬರ ಬದುಕಿನ ಚಿತ್ರಣ ಆದಾಗಿತ್ತು. ಓದಿನ ಖುಷಿ ಕೊಡುವ ಜೊತೆ ನಮ್ಮ ಜೊತೆಗೆ ಬದುಕುವವರ ಬಗ್ಗೆ ಹೇಗೆ ಮಾನವೀಯ ಹಾಗೂ ಸಹನೆಯ ಸಂಬಂಧಗಳನ್ನು ಹೊಂದಬೇಕೆಂಬುದನ್ನು ತಿಳಿ ಹೇಳುವ ಬರಹ ಅದು. ಜಾನಕಮ್ಮನವರ ಕುರಿತಾದ ನಮಸ್ಕಾರದಲ್ಲಿ ಅಷ್ಟೆಲ್ಲ ಗಟ್ಟಿತನ ಇರದಿದ್ದರೂ ಕೆಲ ಬರಹಗಳು ನಿಷ್ಕಾರಣ ಮನುಷ್ಯ ಪ್ರೀತಿಯನ್ನು ತಿಳಿ ಹೇಳುವಂತಿದೆ.

ಜಾನಕಮ್ಮ ಎಂತಾ ಸಂಗೀತ ಪ್ರೇಮಿ ಎಂದರೆ ಮಳೆ, ಪ್ರವಾಹ ಏನೇ ಇದ್ದಾಗಲೂ ಪ್ರತಿದಿನ ಬಸವಾನಿಯಿಂದ ದೋಣಿಯಲ್ಲಿ ಹರಿಹರಪುರಕ್ಕೆ ಹೋಗಿ ಸಂಗೀತ ಪಾಠ ಮಾಡಿಬರುತ್ತಿದ್ದರಂತೆ. ನಾನೀ ದೃಶ್ಯವನ್ನು ಒಮ್ಮೆ ಕಲ್ಪಿಸಿಕೊಳ್ಳಲು ಯತ್ನಿಸಿದೆ.

ನಡುವಯಸ್ಸಿನ ಬ್ರಾಹ್ಮಣ ಗೃಹಿಣಿ ಮಲೆನಾಡಿನ ಮಳೆಯಲ್ಲಿ ನನೆಯುತ್ತಾ ಏಕಾಂಗಿಯಾಗಿ ಕಾಡು ಹಾದಿ ಸವೆಸಿ, ಉಕ್ಕಿ ಹರಿಯುವ ನದಿಯನ್ನು ಪುಟ್ಟ ದೋಣಿಯಲ್ಲಿ ದಾಟಿ ಇನ್ನೊಂದು ಹಳ್ಳಿಗೆ ಹೋಗಿ ಅಲ್ಲಿ ಕಾದಿರುತ್ತಿದ್ದ ಪುಟ್ಟ ಹುಡುಗಿಯರಿಗೆ ಸಂಗೀತ ಕಲಿಸಿ, ಹಾಡಿ ಬರುವುದೆಂದರೆ...! ಜಾನಕಮ್ಮ ಹೀಗೆ ಹತ್ತಾರು ವರ್ಷ ಓಡಾಡಿದ್ದಾರೆ. ಅದಕ್ಕೆಷ್ಟು ಸಹನೆ, ಇಚ್ಛಾಶಕ್ತಿ ಇರಬೇಕು ಯೋಚಿಸಿ.

ಅಷ್ಟೇ ಅಲ್ಲ, ಜಾನಕಮ್ಮನವರ ಪತಿ ದಿ. ಅನಂತ ಮೂರ್ತಿಯವರ ಔದಾರ್ಯ, ಸಹನೆ ಹಾಗೂ ಮತ್ಸರಹೀನ ಮನಸ್ಸು ಆಶ್ಚರ್ಯ ಹುಟ್ಟಿಸುತ್ತದೆ. ಪತ್ನಿಯ ಸಂಗೀತ, ನಾಟಕ, ಟೈಲರಿಂಗ್ ಕೆಲಸಗಳಿಗೆ ನೆರವಾದ ಇವರು ಕೊನೆಗೆ ಪತ್ನಿ ಕಲಾವಿದೆಯಾಗಿ ಕೀರ್ತಿ ಪಡೆದಾಗ ಈರ್ಷ್ಯೆ ಪಡಲಿಲ್ಲ. ಸ್ವಜಾತಿಯ ಸರೀಕರು ಆಡಿಕೊಳ್ಳುತ್ತಿದ್ದಾಗ ಸಹನೆಗೆಡದೆ ಜಾನಕಮ್ಮನವರನ್ನು ಒಮ್ಮೆಯೂ ಆಕ್ಷೇಪಿಸದೆ ನಗುನಗುತ್ತಾ ಬೆಂಬಲಿಸಿದವರು. ತನ್ನ ಪಾಡಿಗೆ ತಾನು ತೋಟದ ಕೆಲಸ ಮಾಡಿಕೊಂಡು. ನೆರೆಹೊರೆಯ ವರಿಗೆ ಅನಾರೋಗ್ಯ ವಾದರೆ ಆಸ್ಪತ್ರೆಗೆ ಕರೆದೊಯ್ಯುತ್ತಾ, ಮನೆಗಳ ಕರೆಂಟ್ ವೈರ್ ರಿಪೇರಿ ಕೆಲಸ ಮಾಡಿಕೊಟ್ಟು, ಪುಸ್ತಕ ಓದಿಕೊಂಡು ಬದುಕಿದವರು.

ಇವರಿಬ್ಬರೂ ತೀರಿಕೊಂಡಾಗ ಮಲೆನಾಡಿನ ಬಸವಾನಿ ಯಲ್ಲಷ್ಟೇ ಅಲ್ಲ ಈಗ ಕರ್ನಾಟಕದ ಅನೇಕ ಕಡೆ ನೆಲೆಸಿರುವ ಪರಿಚಿತ ಜನ ದುಃಖಪಟ್ಟುಕೊಂಡಿದ್ದಾರೆ. ಅವರೆಲ್ಲಾ ಬಸವಾನಿಯಂತಹ ಹಳ್ಳಿ ದಾಟಿ ಹೊರ ಪ್ರಪಂಚಕ್ಕೆ ಕೈ ಚಾಚುವಷ್ಟು ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಾಸಕ್ಕೆ ನೆರವಾಗಿದ್ದ ದಂಪತಿಯವರು.

ನಾವೆಲ್ಲಾ ಹೆಕ್ಕಿಕೊಳ್ಳಬೇಕಾದ ಜೀವನ ಮೌಲ್ಯಗಳನ್ನು ಬಸವಾನಿ ಜಾನಕಮ್ಮ ತರದವರು ಬದುಕಿದ್ದಾರೆ. ಅಂತವರನ್ನು ಅರಿಯುವ, ಪೊರೆಯುವ, ವಿವೇಚನೆ ನಮ್ಮೆಲ್ಲರಲ್ಲೂ ಬೆಳೆಯಬೇಕು.

ಜಾನಕಮ್ಮ ಓರ್ವ ಸಮಾಜ ಸುಧಾರಕಿ ತರದವರಲ್ಲ. ಸರಕಾರಿ ಅಧಿಕಾರಿ ಅಥವಾ ರಾಜಕಾರಣಿಯಂತಿದ್ದವರೂ ಅಲ್ಲ. ಅವರಿಗೆ ಪ್ರಶಸ್ತಿ-ಖ್ಯಾತಿಯ ಹಂಬಲವೂ ಇರಲಿಲ್ಲ. ಆದರೆ ತಮ್ಮ ಬದುಕನ್ನು ಚಂದವಾಗಿ, ಕ್ರಿಯಾಶೀಲರಾಗಿ ನಡೆಸುತ್ತಲೇ ಆ ಮೂಲಕ ಸುತ್ತಲಿನ ನೂರಾರು ಮಹಿಳೆಯರಲ್ಲೂ ಬದುಕಿನ ಸಂತೋಷಗಳ ಸೆಲೆಯನ್ನು ಕಂಡುಕೊಳ್ಳಲು ಪ್ರೇರಣೆ ಕೊಟ್ಟಿದ್ದಾರೆ.

ಪಾರ್ವತೀಶ ಬಿಳಿದಾಳೆ

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News