ಐಟಿ ಅಧಿಕಾರಿಗಳಿಂದ ದಾಳಿ, ಬಿಜೆಪಿ ಸೇರಲು ಒತ್ತಡ: ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್ ದೂರು
ಬೆಂಗಳೂರು, ಮಾ.19: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ಐಟಿ ಅಧಿಕಾರಿಗಳಿಂದ ಬಿಜೆಪಿ ಸೇರಲು ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಗುಂಡೂರಾವ್ ನಿಯೋಗ ಚುನಾವಣಾ ಆಯುಕ್ತರಿಗೆ ದೂರು ನೀಡಿದೆ.
ಸೋಮವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ಸಚಿವರಾದ ಎಂ.ಆರ್.ಸೀತಾರಾಮ್, ಎಚ್.ಎಂ.ರೇವಣ್ಣ , ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ವಿ.ಎಸ್.ಉಗ್ರಪ್ಪಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ, ಲಿಖಿತ ದೂರು ಸಲ್ಲಿಸಿದರು.
ದೂರಿನಲ್ಲಿ ಏನಿದೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಐಟಿ, ಇಡಿ ಹಾಗೂ ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು, ಬಿಜೆಪಿಯೇತರ ಸಚಿವರು ಹಾಗೂ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ, ಐಟಿ ಅಧಿಕಾರಿಗಳು ಕಾಂಗ್ರೆಸ್ ಪಕ್ಷದಿಂದ ಹೊರಬಂದು ಬಿಜೆಪಿ ಸೇರಿ ಎಂದು ಒತ್ತಡ, ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ, ರಘು ಆಚಾರ್, ಎಂ.ಟಿ.ಬಿ.ನಾಗರಾಜ್, ಶಾಮನೂರು ಶಿವಶಂಕರಪ್ಪ ಸೇರಿ ಅನೇಕ ಮುಖಂಡರ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಬಿಜೆಪಿ ಪರ ಕೆಲ ಐಟಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಐಟಿ ವಿಭಾಗದ ಡಿ.ಜಿ.ಬಾಲಕೃಷ್ಣ ಎಂಬುವರು ಆರೆಸ್ಸೆಸ್ ಕಾರ್ಯಕರ್ತರೆಂಬುದು ತಿಳಿದು ಬಂದಿದೆ. ಅಲ್ಲದೆ, ಮೋದಿ ಸರಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಬಿಜೆಪಿ ಆದೇಶದಂತೆ ಕಾಂಗ್ರೆಸ್‌ಗೆ ನೋಟಿಸ್ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಐಟಿ ದಾಳಿಯಾಗುವ ಒಂದು ತಿಂಗಳ ಮುಂಚೆಯೇ ಬಿಜೆಪಿಯವರಿಗೆ ಮಾಹಿತಿ ರವಾನೆಯಾಗುತ್ತಿದೆ. ನ್ಯಾಯಯುತ ಚುನಾವಣೆ ನಡೆಸುವ ಉದ್ದೇಶದಿಂದ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಹೀಗಾಗಿ, ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಯುಕ್ತರಿಗೆ ಮನವಿ ಮಾಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ಇಡಿ, ಸಿಬಿಐ, ಐಟಿಯನ್ನು ಬಳಸಿಕೊಳ್ಳುತ್ತಿದೆ. ಅಲ್ಲದೇ, ದಾಳಿ ನಡೆಸಿದ ನಂತರ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಿ, ಕಾಂಗ್ರೆಸ್ ಮುಖಂಡರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ. ಅನೇಕ ಐಟಿ ಅಧಿಕಾರಿಗಳು ಬಿಜೆಪಿಯ ಏಜೆಂಟ್‌ಗಳಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆಪಿಸಿಸಿಯಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಸೇರಿ ಚುನಾವಣಾ ಆಯುಕ್ತರಿಗೆ ಮವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಐಟಿ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮುಕ್ತ ಚುನಾವಣೆ ನಡೆಸಬೇಕು. ಐಟಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಅಲ್ಲದೇ ಐಟಿ ಅಧಿಕಾರಿಗಳಿಗೆ ಈ ಮೂಲಕ ಎಚ್ಚರಿಕೆ ರವಾನಿಸುತ್ತೇವೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ.ಮಾ.22ಕ್ಕೆ ಪ್ರತಿಭಟನೆ:
ಬಿಜೆಪಿ ಏಜೆಂಟ್‌ನಂತೆ ವರ್ತಿಸುತ್ತಿರುವ ಅಧಿಕಾರಿಗಳನ್ನು ಕರ್ನಾಟಕದಿಂದ ಹೊರಗಿಡಬೇಕು. ಚುನಾವಣಾ ಆಯೋಗ ಸಿಬಿಐ, ಐಟಿ ಇಡಿಗೆ ಸ್ಪಷ್ಟ ಸಂದೇಶ ರವಾನೆಯಾಗಬೇಕೆಂಬ ನಿಟ್ಟಿನಲ್ಲಿ ಮಾ.22ರಂದು ಐಟಿ ಇಲಾಖೆಯ ಮುಂಭಾಗ ಕೆಪಿಸಿಸಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.