ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ: ತೀರ್ಪು ಕಾಯ್ದಿರಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ
ಬೆಂಗಳೂರು, ಮಾ.19: 2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತು ಆಗಿರುವ ಏಳು ಮಂದಿ ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ಸಂಬಂಧ ವಾದ-ವಿವಾದ ಆಲಿಸಿದ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿರುವ ತಮ್ಮ ಕೊಠಡಿಯಲ್ಲಿ ಏಳು ಮಂದಿ ಬಂಡಾಯ ಶಾಸಕರು ಹಾಗೂ ಜೆಡಿಎಸ್ ಪಕ್ಷದ ಪರವಾಗಿ ದಾಖಲಿರುವ ಅರ್ಜಿಯ ವಿಚಾರಣೆಯನ್ನು ಸ್ಪೀಕರ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆಸಿದರು.
ಬಂಡಾಯ ಶಾಸಕರ ಪೈಕಿ ಚಲುವರಾಯಸ್ವಾಮಿ, ಝಮೀರ್‌ಅಹ್ಮದ್‌ಖಾನ್, ಎಚ್.ಸಿ.ಬಾಲಕೃಷ್ಣ ಹಾಗೂ ಅಖಂಡ ಶ್ರೀನಿವಾಸಮೂರ್ತಿ ವಿಚಾರಣೆಗೆ ಹಾಜರಾಗಿದ್ದರು. ಶಾಸಕರಾದ ಭೀಮಾನಾಯಕ್, ರಮೇಶ್‌ಬಂಡಿಸಿದ್ದೇಗೌಡ ಹಾಗೂ ಇಕ್ಬಾಲ್ ಅನ್ಸಾರಿ ಗೈರು ಹಾಜರಾಗಿದ್ದರು. ಜೆಡಿಎಸ್ ಪಕ್ಷದ ಪರವಾಗಿ ದೂರುದಾರರಾದ ಬಿ.ಬಿ.ನಿಂಗಯ್ಯ ಹಾಗೂ ಸಿ.ಎನ್.ಬಾಲಕೃಷ್ಣ ಉಪಸ್ಥಿತರಿದ್ದರು.
ಜೆಡಿಎಸ್ ಬಂಡಾಯ ಶಾಸಕರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರಾಜ್‌ಗೋಪಾಲ್, ಸಂವಿಧಾನದ ಷೆಡ್ಯೂಲ್ 10ರ ಪ್ರಕಾರ ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ತಮ್ಮ ಪಕ್ಷದ ಬೂತ್ ಏಜೆಂಟರಿಗೆ ತೋರಿಸಿ ಮತ ಹಾಕುತ್ತಾರೆ. ನನ್ನ ಕಕ್ಷಿದಾರ ಶಾಸಕರು ಜೆಡಿಎಸ್ ಪಕ್ಷದ ಏಜೆಂಟ್ ಆಗಿದ್ದ ಎಚ್.ಡಿ.ರೇವಣ್ಣನವರಿಗೆ ತೋರಿಸಿಯೆ ಮತ ಹಾಕಿದ್ದಾರೆ. ಆದುದರಿಂದ, ಇದು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪೀಕರ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಈ ಹಿಂದೆ ಸಂಸತ್ತಿನಲ್ಲಿ ಕೆಲವು ಸದಸ್ಯರು ಕಾಸಿಗಾಗಿ ಪ್ರಶ್ನೆ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಸ್ಪೀಕರ್ ಆಗಿದ್ದ ಸೋಮನಾಥ ಚಟರ್ಜಿ, 12 ಮಂದಿ ಸಂಸದರನ್ನು ಅನರ್ಹಗೊಳಿಸಿದ್ದರು. ಸುಪ್ರೀಂಕೋರ್ಟ್ ಈ ಸಂಬಂಧ ನೋಟಿಸ್ ನೀಡಿದಾಗ ಸಂಸತ್ತಿನ ಪರಮಾಧಿಕಾರ ಪ್ರಶ್ನಿಸುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇಲ್ಲ ಎಂದು ಪುನಃ ಆ ನೋಟಿಸನ್ನು ಹಿಂದಿರುಗಿಸಲಾಗಿತ್ತು.
ಶಾಸಕರು ತಮ್ಮ ಪಕ್ಷದ ಮತಗಟ್ಟೆ ಏಜೆಂಟರಿಗೆ ತೋರಿಸಿಯೆ ಅಭ್ಯರ್ಥಿಗೆ ಮತ ಹಾಕಿರುವುದರಿಂದ ಇದರಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಪ್ರಶ್ನೆಯೆ ಉದ್ಭವಿಸುವುದಿಲ್ಲ. ಅಲ್ಲದೆ, ಪಕ್ಷಾಂತರ ನಿಷೇಧ ಕಾಯ್ದೆಯೂ ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಅವರು ವಾದ ಮಾಡಿದರು.
ನಮ್ಮ ರಾಜ್ಯದಲ್ಲಿಯೂ ಈ ಹಿಂದೆ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡುವಾಗ ಸಹಜ ನ್ಯಾಯವನ್ನು ಪಾಲನೆ ಮಾಡಲಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದನ್ನು ವಕೀಲ ರಾಜ್‌ಗೋಪಾಲ್ ಸ್ಪೀಕರ್ ಗಮನಕ್ಕೆ ತಂದರು.
ಜೆಡಿಎಸ್ ಪರವಾಗಿ ವಾದ ಮಂಡಿಸಿದ ವಕೀಲ ನಿಶಾಂತ್, ಶಾಸಕರು ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವುದು ಸರಿಯಲ್ಲ. ಈ ಪ್ರಕ್ರಿಯೆ ಅನೇಕ ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ. ಕಾನೂನು ಉಲ್ಲಂಘನೆಯಾಗಿರುವ ಕಾರಣ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಮನವಿ ಮಾಡಿದರು.
ವಾದ-ಪ್ರತಿವಾದವನ್ನು ಆಲಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ, ವಿಚಾರಣೆಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿದ್ದಾರೆ. ಮಾ.23ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತಿರುವುದರಿಂದ ಸ್ಪೀಕರ್ ನೀಡುವ ತೀರ್ಪು ಕುತೂಹಲಕ್ಕೆ ಕಾರಣವಾಗಿದೆ.