ಬೆಂಗಳೂರು: ‘ಚಿಕ್ಕೋಡಿ ಜಿಲ್ಲೆ’ ರಚನೆಗೆ ಮೂಡದ ಒಮ್ಮತ; ಸಮಿತಿ ರಚಿಸಲು ನಿರ್ಧಾರ
ಬೆಂಗಳೂರು, ಮಾ. 19: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಸಚಿವರು-ಶಾಸಕರ ಸಭೆ ಒಮ್ಮತಕ್ಕೆ ಬಾರದೇ ಈ ಬಗ್ಗೆ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷದ ಸಭೆ ಕರೆಯಲಾಗಿತ್ತು. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ನ ಯಾವುದೇ ಶಾಸಕರು, ಸಂಸದರು ಹಾಜರಾಗಿರಲಿಲ್ಲ. ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿದ್ದ ಸಭೆ ಎರಡು ಗಂಟೆ ತಡವಾಗಿ ಆರಂಭವಾಯಿತು. ಆದರೆ, ಕೇವಲ ಅರ್ಧ ಗಂಟೆಯಲ್ಲೆ ಸಭೆ ಮುಕ್ತಾಯ ಕಂಡಿತು.
ಆರಂಭಕ್ಕೆ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಆ ಭಾಗದ ಶಾಸಕರು ಮನವಿ ನೀಡಿದ್ದರು. ಸಭೆ ಆರಂಭವಾಗುತ್ತಿದ್ದಂತೆ ಸಹಕಾರ ಸಚಿವ ರಮೇಶ್ ಜಾರಕಿಹೊಳಿ, ಗೋಕಾಕ ಜಿಲ್ಲೆಯಾಗಲು ಯೋಗ್ಯವಾಗಿದೆ. ಎಲ್ಲ ಅನುಕೂಲತೆಗಳಿವೆ. ಜಿಲ್ಲೆಯನ್ನು ಭೌಗೋಳಿಕವಾಗಿ ನೋಡಿದಾಗ ಗೋಕಾಕ ಜಿಲ್ಲೆಯಾಗುವುದಕ್ಕೆ ಸೂಕ್ತವಾಗಿರುವ ಕಾರಣ ಗೋಕಾಕನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯ ಮಾಡಿದರು.
ಶಾಸಕ ಡಿ.ಬಿ.ಇನಾಮದಾರ್ ಅವರು ಜಿಲ್ಲೆಯ ಮಧ್ಯಭಾಗದಲ್ಲಿರುವ ಬೈಲಹೊಂಗಲವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂಬ ಪ್ರಸ್ತಾವನೆ ಮುಂದಿಟ್ಟರು. ಚಿಕ್ಕೋಡಿ, ಗೋಕಾಕ ಹಾಗೂ ಬೈಲಹೊಂಗಲವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಆಯಾ ಭಾಗದ ಶಾಸಕರು ಆಗ್ರಹಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸಂಪುಟದ ಒಪ್ಪಿಗೆ ಪಡೆದು ಸಮಿತಿ ರಚಿಸಲಾಗುವುದು ಎಂದು ಪ್ರಕಟಿಸಿದರು.