×
Ad

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಉದ್ಭವಿಸದು: ಸಚಿವ ಡಿ.ಕೆ.ಶಿವಕುಮಾರ್

Update: 2018-03-19 21:03 IST

ಬೆಂಗಳೂರು, ಮಾ. 19: ರಾಜ್ಯದಲ್ಲಿ 1 ಸಾವಿರ ಮೆ.ವ್ಯಾ.ನಷ್ಟು ಹೆಚ್ಚುವರಿ ವಿದ್ಯುತ್ ಲಭ್ಯವಿದ್ದು, ಯಾವುದೇ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲಾಗುವುದು. ಅಲ್ಲದೆ, ರೈತರು, ಕೈಗಾರಿಕೆ ಮತ್ತು ಗ್ರಾಹಕರಿಗೂ ಸಮರ್ಪಕ ವಿದ್ಯುತ್ ಪೂರೈಸಲಾಗುವುದು ಎಂದರು.

ತಿರುಗೇಟು: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯದ ಇಂಧನ ಸ್ಥಿತಿಯ ಬಗ್ಗೆ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಇಲಾಖೆ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿದ ಅವರು, ಜಾವಡೇಕರ್ ಅವರಿಗೆ ರಾಜ್ಯದ ಬಗ್ಗೆ ಕಳಕಳಿ ಇದ್ದರೆ ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾಗಿದ್ದ ಕಲ್ಲಿದ್ದಲು ಬ್ಲಾಕ್ ಅನ್ನು ಕೊಡಿಸಲಿ ಎಂದು ಸವಾಲು ಹಾಕಿದರು.

ಅನುಮತಿ ಇಲ್ಲ: ಬಿಬಿಎಂಪಿ, ಬಿಡಬ್ಲೂಎಸ್‌ಎಸ್‌ಬಿ, ಬಿಎಂಆರ್‌ಡಿಎ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ 62 ಪೀಡರ್‌ಗಳಲ್ಲಿ ವಿದ್ಯುತ್ ಲೈನ್ ಹಾಳಾಗಿದ್ದು, ಶಿವಾಜಿನಗರ, ರಾಜರಾಜೇಶ್ವರಿನಗರ ಸೇರಿದಂತೆ 12 ವಿಭಾಗಗಳಲ್ಲಿ ಕೆಲ ಗಂಟೆಗಳ ಕಾಲ ದುರಸ್ತಿ ಕಾರಣಕ್ಕೆ ವಿದ್ಯುತ್ ಕಡಿತ ಮಾಡಲಾಗಿದೆ. ಆದರೆ, ಲೋಡ್ ಶೆಡ್ಡಿಂಗ್ ಮಾಡಿಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಮಗಾರಿಗಳಿಗೆ ಅನುಮತಿ ನೀಡುವುದಿಲ್ಲ ಎಂದರು.

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಭೀಕರ ಸ್ವರೂಪದ ಬರ ಪರಿಸ್ಥಿತಿಯ ಮಧ್ಯೆ ರಾಜ್ಯದ ಜನರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗಿದೆ. ದೇಶದಲ್ಲೆ ಕರ್ನಾಟಕ ರಾಜ್ಯ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಎರಡನೆ ಸ್ಥಾನದಲ್ಲಿದೆ ಎಂದ ಅವರು, ಕೇಂದ್ರ ಸರಕಾರವೂ ರಾಜ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

ಟೆಂಡರ್: ಕೇಂದ್ರ, ರಾಜ್ಯಕ್ಕೆ ಮಂಜೂರು ಮಾಡಿದ್ದ ಕಲ್ಲಿದ್ದಲು ಬ್ಲಾಕ್ ಹಂಚಿಕೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಒಂದು ಮಿಲಿಯನ್ ಟನ್ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲಾಗಿದೆ. ಅಲ್ಲದೆ, 900 ಮೆ.ವ್ಯಾ. ವಿದ್ಯುತ್ ಅನ್ನು ಪ್ರತಿ ಯೂನಿಟ್ 4.10 ರೂ.ನಂತೆ ಖರೀದಿ ಮಾಡಲಾಗುವುದು ಎಂದು ಅಂಕಿ-ಅಂಶಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News