ಬೆಂಗಳೂರು: ಉದ್ಯೋಗಕ್ಕಾಗಿ ಯುವಜನರು ವೇದಿಕೆ ವತಿಯಿಂದ ಮಾ.25 ರಂದು ಎಚ್ಚರಿಕೆ ಸಮಾವೇಶ

Update: 2018-03-19 16:08 GMT

ಬೆಂಗಳೂರು, ಮಾ.19: ಉದ್ಯೋಗ ಭದ್ರತೆ ಹಾಗೂ ಸಮಾನ ವೇತನ ಖಾತರಿ ಮಾಡದ ಪಕ್ಷಗಳಿಗೆ ನಮ್ಮ ಮತವಿಲ್ಲವೆಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಉದ್ಯೋಗಕ್ಕಾಗಿ ಯುವಜನರು ವೇದಿಕೆ ವತಿಯಿಂದ ಮಾ.25 ರಂದು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಚ್ಚರಿಕೆ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಮುಖಂಡ ಡಾ.ಎಚ್.ವಿ.ವಾಸು, ನಿರುದ್ಯೋಗಿ ಯವಜನರ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಅರಿತಿರುವ ರಾಜಕೀಯ ಪಕ್ಷಗಳು ಉದ್ಯೋಗ ಸೃಷ್ಟಿಸುವ ಅಸ್ಪಷ್ಟ ಭರವಸೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುತ್ತಿವೆ. ಆದರೆ, ಅವು ಉದ್ಯೋಗ ಸೃಷ್ಟಿ ಮಾಡುವ ಮುನ್ನೋಟ ಹೊಂದಿಲ್ಲ. ಹೀಗಾಗಿ, ಸ್ಪಷ್ಟ ಹಾಗೂ ಮುನ್ನೋಟವುಳ್ಳ ಯುವಜನರ ಪ್ರಣಾಳಿಕೆಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವವರನ್ನು ಖಾಯಂ ಮಾಡಲು ತೀರ್ಮಾನ ಕೈಗೊಳ್ಳಬೇಕು. ಕರ್ನಾಟಕ ಗುತ್ತಿಗೆ ಹಾಗೂ ಇನ್ನಿತರೆ ತಾತ್ಕಾಲಿಕ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ-20018 ಅನ್ನು ಹೊಸ ಸರಕಾರ ರೂಪಿಸಬೇಕು. ಎಲ್ಲ ಗುತ್ತಿಗೆ ಹಾಗೂ ತಾತ್ಕಾಲಿಕ ನೌಕರರಿಗೆ ಸಮಾನ ವೇತನ ಮತ್ತು ಭತ್ತೆಗಳನ್ನು ಸಮಾನವಾಗಿ ನೀಡಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಹಾಗೂ ಇನ್ನಿತರೆ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಗ್ರೂಪ್-ಡಿ ನೌಕರರ ಸಂಬಳದಷ್ಟು ವೇತನ ನೀಡಬೇಕು ಎಂದರು.

ಎಲ್ಲ ಗುತ್ತಿಗೆ ಹಾಗೂ ತಾತ್ಕಾಲಿಕ ಮಹಿಳಾ ನೌಕರರಿಗೆ ಸಂಬಳ ಸಹಿತ 180 ದಿನ ಹೆರಿಗೆ ರಜೆ ಹಾಗೂ ಭತ್ತೆ ನೀಡಬೇಕು. ಹಾಲಿ ಕೆಲಸದಲ್ಲಿರುವ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು. ಅತಿಥಿ ಶಿಕ್ಷಕ, ಉಪನ್ಯಾಸಕರನ್ನು ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಬಾರದು. ಖಾಯಂ ಮಾಡಲು ಅಗತ್ಯವಿರುವ ಕಾನೂನು ತೊಡಕುಗಳನ್ನು ಶೀಘ್ರ ನಿವಾರಣೆ ಮಾಡಬೇಕು. ಖಾಸಗಿ ವಲಯದಲ್ಲಿಯೂ ಗುತ್ತಿಗೆ ಪದ್ದತಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಸಮಾವೇಶದಲ್ಲಿ ಪ್ರಸ್ತಾಪ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಸಮಾವೇಶವನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯವುೂರ್ತಿ ಗೋಪಾಲಗೌಡ ಉದ್ಘಾಟಿಸಲಿದ್ದು, ಸ್ವರಾಜ್ ಅಭಿಯಾನದ ಮುಖಂಡ ಪ್ರೊ.ಯೋಗೇಂದ್ರ ಯಾದವ್, ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್, ವೇದಿಕೆ ಸಂಚಾಲಕರಾದ ಮುತ್ತುರಾಜ್ ಹಾಗೂ ಸರೋವರ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News