ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆ ಸಲ್ಲ: ಕೃಷಿ ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು, ಮಾ. 20: ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದಲ್ಲಿ 13.5ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ವ್ಯಾಯಾಮ-ಯೋಗಾ ಶಾಲೆ, ಬ್ಯಾಡ್ಮಿಂಟನ್ ಕೋರ್ಟ್ ಸೇರಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ಕೃಷಿ ಸಚಿವ ಕೃಷ್ಣಭೈರೇಗೌಡ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಕಾಮಗಾರಿಗಳು ಜನರ ತೆರಿಗೆ ಹಣದಿಂದಲೆ ಕೈಗೊಳ್ಳುವುದು, ನಾವೇನು ನಮ್ಮ ಮನೆಯ ಹಣದಿಂದಲೋ ಅಥವಾ ಉದಾರತೆ ಯಿಂದಲೋ ಮಾಡೋದಲ್ಲ, ನಮ್ಮನ್ನ ಆಯ್ಕೆ ಮಾಡೋದು ಕೂಡ ಅದಕ್ಕಾಗಿ. ಜನ ನಮ್ಮನ್ನ ಆಯ್ಕೆ ಮಾಡಿದಕ್ಕೆ ತಕ್ಕಹಾಗೆ ಅವರ ಬೇಡಿಕೆ ಹಾಗೂ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಬೇಕಾದ್ದು ನಮ್ಮ ಧರ್ಮ ಎಂದು ಬಣ್ಣಿಸಿದರು.
ಶಾಸಕ ಎಂದರೆ ಜನರ ಪ್ರತಿನಿಧಿ ಎಂದರ್ಥ. ಸದ್ಯಕ್ಕೆ ರಾಜಕೀಯ ಪರಿಸ್ಥಿತಿಯಲ್ಲಿ ರಾಜಕೀಯ ಮಾಡೋದೆ ಕಷ್ಟದ ಕೆಲಸ ಆಗಿಬಿಟ್ಟಿದೆ. ಅವರವರ ಸ್ವಾರ್ಥಕ್ಕೆ ಜನ ಪ್ರತಿನಿಧಿಗಳು ಜನರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದ ಅವರು, ಕಾಮಗಾರಿಗಳು ಗುಣಮಟ್ಟ ಕಾಪಾಡಿಕೊಳ್ಳಬೇಕು. ಕಳಪೆ ಕೆಲಸ ಮಾಡಿ ಕಿಂಚಿತ್ತು ಕಾಸಿಗಾಗಿ ಜನರ ಹಣಕ್ಕೆ ಮೋಸ ಮಾಡಬಾರದು ಎಂದರು.
ನಮ್ಮ ಕ್ಷೇತ್ರದ ಕಾಮಗಾರಿಗಳನ್ನು ಕಾಲ ಕಾಲಕ್ಕೆ ನಾನೇ ಖುದ್ದು ಪರಿಶೀಲನೆ ನಡೆಸುತ್ತಿದ್ದೇನೆ. ಹೀಗಾಗಿ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಹಾಗೂ ಉತ್ತಮ ದರ್ಜೆಯ ಸಾಮಗ್ರಿಗಳನ್ನು ಬಳಕೆ ಮಾಡುವಲ್ಲಿ ಸಂಪೂರ್ಣ ಸಫಲರಾಗಿದ್ದೇವೆ ಎಂದರು.
ಗುತ್ತಿಗೆದಾರರೂ ಹಣದಾಸೆಗೆ ಯಾವುದೇ ಕಳಪೆ ಕಾಮಗಾರಿ ಮಾಡಿಲ್ಲ. ಉತ್ತಮ ಕೆಲಸ ಮಾಡಿದ್ದಾರೆ. ಕಾಮಗಾರಿಗಳು ಪೂರ್ಣಗೊಳ್ಳದೆ ಉದ್ಘಾಟನೆ ಮಾಡಬಾರದು. ಬರೀ ನಾಮಫಲಕಗಳಲ್ಲಿ ತೋರಿಕೆಯ ಹೆಸರಿಗಾಗಿ ಜನರನ್ನ ದಾರಿ ತಪ್ಪಿಸಿ ಅಪೂರ್ಣ ಕಾಮಗಾರಿಗೆ ಹೆಸರಿಡುವುದು ಜನರಿಗೆ ಮಾಡುವ ದ್ರೋಹ. ಸದ್ಯ ಈ ರೀತಿಯ ಕೆಲಸಗಳು ಸಾಕಷ್ಟು ನಡೆಯುತ್ತಿದ್ದು ಜನಪ್ರತಿನಿಧಿಗಳು ಜನಗಳ ಪ್ರತಿನಿಧಿಗಳಾಗೆ ಕೆಲಸ ಮಾಡಿದರೆ ಸಮಾಜಕ್ಕೆ ಮಾದರಿ ಆಗಬಲ್ಲರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯೆ ಲಕ್ಷ್ಮಿ ಹರಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಎನ್.ಕೆ, ಪ್ರಧಾನ ಕಾರ್ಯದರ್ಶಿ ದಿಲೀಪ್, ತಿಂಡ್ಲು ವಿಶ್ವನಾಥ್, ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.