ಬೆಂಗಳೂರು: ಶೀಘ್ರ ಕಾಮಗಾರಿಗಳ ಪೂರ್ಣಗೊಳಿಸಲು ಸಚಿವ ಜಾರ್ಜ್ ಸೂಚನೆ

Update: 2018-03-20 13:23 GMT

ಬೆಂಗಳೂರು, ಮಾ.20: ನಗರದಲ್ಲಿ ಬಾಕಿ ಉಳಿದಿರುವ ಎಲ್ಲ ಕೆಲಸಗಳನ್ನು ಶೀಘ್ರವಾಗಿ ಪೂರ್ತಿ ಮಾಡಿ, ಭವಿಷ್ಯದಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೂಚನೆ ನೀಡಿದ್ದಾರೆ.

ನಗರದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆಗಾಲ ಆರಂಭಕ್ಕೂ ಮೊದಲು ಎಲ್ಲ ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಂಡಿರಬೇಕು. ಅನಂತರ ಯಾವುದೇ ಅನಾಹುತಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ ಬಳಿಯ ರಾಜಕಾಲುವೆ ಪರಿಶೀಲನೆ ಮಾಡಿದ ಅವರು, ಮೋರಿ ತಡೆಗೋಡೆ ಎತ್ತರ ಕಡಿಮೆ ಇರುವುದರಿಂದ ಮಳೆ ಬಂದಾಗ ನೀರು ತುಂಬಿ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ 1.1 ಕಿ.ಮೀ ನಷ್ಟು ಗೋಡೆ ನಿರ್ಮಾಣ ಮಾಡಿಸುವ ಸಲುವಾಗಿ ನಗರೋತ್ಥಾನ ಅನುದಾನದ ಅಡಿಯಲ್ಲಿ 15 ಕೋಟಿ ರೂ. ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು. ಇದಕ್ಕಾಗಿ ನಾಳೆ ಕಾಮಗಾರಿ ಆರಂಭಿಸಲು ಪೂಜೆ ನೆರವೇರಿಸಲಾಗುವುದು. ಮೂರು ತಿಂಗಳಲ್ಲಿ ಕಾಮಗಾರಿ ಪೂರೈಸಬೇಕು ಎಂದು ಸೂಚಿಸಿದರು.

ಅನಂತರ ಜೆಸಿ ರಸ್ತೆಯ ಕುಂಬಾರ ಗುಂಡಿಯಲ್ಲಿ ಮಳೆ ಅನಾಹುತ ಸಂಭವಿಸುವ ಸ್ಥಳಕ್ಕೆ ವೆಂಟಿಲೇಟರ್(ಪೈಪ್)ಗೆ ನೀರು ತುಂಬಿ ಆಗುವ ಅನಾಹುತ ತಪ್ಪಿಸಲು ಹೆಚ್ಚುವರಿಯಾಗಿ 4 ಕಿ.ಮೀ.ವರೆಗೂ ಪೈಪ್ ಅಳವಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು 2 ಕೋಟಿ ರೂ.ಅನುದಾನವನ್ನು ನೀಡುವುದಾಗಿ ಸ್ಥಳದಲ್ಲೇ ಘೋಷಣೆ ಮಾಡಿದರು.

ರಾಜಕಾಲುವೆ ನಿರ್ಮಿಸಲಾಗಿರುವ ಕೆಳಸೇತುವೆ ಅತ್ಯಂತ ಕೆಳಗಿದ್ದು, ಇದನ್ನು ಎತ್ತರ ಮಾಡಲು ಅಧಿಕಾರಿಗಳಿಗೆ ಆದೇಶ ನೀಡಿದರು. ಇದೇ ಪ್ರದೇಶದಲ್ಲಿ ರಾಜಕಾಲುವೆ ಮೇಲೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವು ಮಾಡಲು ಪಾಲಿಕೆ ಮುಂದಾದಾಗ ಇದರ ವಿರುದ್ಧ ಕಟ್ಟಡದ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಈ ಬಗ್ಗೆ ಬಿಬಿಎಂಪಿ ಕಾನೂನು ಕೋಶ ನ್ಯಾಯಾಲಯದಲ್ಲಿ ತಡೆ ತೆರವು ಮಾಡಿ ಯಾವುದೇ ಮುಲಾಜಿಲ್ಲದೆ ಕಟ್ಟಡ ನೆಲಸಮ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಹಾಲಕ್ಷ್ಮಿ ಬಡಾವಣೆಯ ದೇವಸ್ಥಾನದ ಅರ್ಚಕ ಕೊಚ್ಚಿಹೋದ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಜಾರ್ಜ್, ಕಾಮಗಾರಿ ಮುಕ್ತಾಯಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಆದರೆ, ಬಿಡಬ್ಲೂಎಸ್‌ಎಸ್‌ಬಿಯಿಂದ ನಡೆಯಬೇಕಿದ್ದ ಕಾಮಗಾರಿ ಬಾಕಿ ಉಳಿಸಿಕೊಂಡಿದ್ದಕ್ಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಂದೇಶ ನೀಡಬೇಕು ಎಂದು ತಿಳಿಸಿದರು.

ಲಗ್ಗೆರೆ ವಾರ್ಡಿನ 18 ಮತ್ತು 19 ನೆ ಮುಖ್ಯರಸ್ತೆಯ ರಾಜಕಾಲುವೆ ಕಾಮಗಾರಿ ವೀಕ್ಷಿಸಿದ ಅವರು, ಅಲ್ಲಿನ ಪ್ರಗತಿ ಕಂಡು ಸಂತಸ ವ್ಯಕ್ತಪಡಿಸಿದರು. ಇದೇ ರೀತಿ ಶೇ.80 ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಬಾಕಿ ಉಳಿದ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News