ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಲು ‘ಸೆಲ್ಫ್ ವಿ’ ಅಭಿಯಾನ

Update: 2018-03-20 13:35 GMT

ಬೆಂಗಳೂರು, ಮಾ.20: ನಗರದ ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ಪ್ರೈಸರ್ಸ್ ಲಿಮಿಟೆಡ್ (ಎಚ್‌ಸಿಜಿ) ಕ್ಯಾನ್ಸರ್ ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ‘ಸೆಲ್ಫ್ ವಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಎಚ್‌ಸಿಜಿ ಕ್ಯಾನ್ಸರ್ ಕೇರ್‌ನ ಡಾ. ನಳಿನಿ ರಾವ್, ಕ್ಯಾನ್ಸರ್ ರೋಗದಿಂದ ಪಾರಾದ ಅಭ್ಯರ್ಥಿಗಳು ಸೆಲ್ಫ್ ವಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ಜೀವನ ಸಂಭ್ರಮಿಸಿ ಎಂಬ ಧ್ಯೇಯದೊಂದಿಗೆ ಎಚ್‌ಸಿಜಿ ಕ್ಯಾನ್ಸರ್ ಕೇರ್ 2014ರಿಂದ ಸೆಲ್ಫ ವಿ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದೆ. ಕ್ಯಾನ್ಸರ್ ರೋಗವನ್ನು ಎದುರಿಸದ ಬಗೆಯನ್ನು 60ರಿಂದ 90ಸೆಕೆಂಡ್‌ನಲ್ಲಿ ಮೊಬೈಲ್ ನಲ್ಲಿ ಸೆರೆಹಿಡಿದು, ಎಚ್‌ಸಿಜಿಯ ವೆಬ್‌ಸೈಟ್ ಅಥವಾ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಭಿಯಾನ ಮಾಡಲಾಗುತ್ತದೆ ಎಂದು ಹೇಳಿದರು.

ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆಯಿದೆ. ಕ್ಯಾನ್ಸರ್ ರೋಗಕ್ಕೆ ತುತ್ತಾದವರಿಗೆ ಚಿಕಿತ್ಸೆ ಜತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಮನೋಭಲವಿದ್ದರೆ ರೋಗವನ್ನು ಸುಲಭವಾಗಿ ಎದುರಿಸಬಹುದು. ಈ ನಿಟ್ಟಿನಲ್ಲಿ ಸೆಲ್ಫ್ ವಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಅಧಿಕವಾಗುತ್ತಿದೆ. ಆದ್ದರಿಂದ ಸೆಲ್ಫ್ ವಿ ಅಭಿಯಾನ ಕ್ಯಾನ್ಸರ್ ರೋಗಿಗಳಲ್ಲಿ ಹೊಸ ಭರವಸೆ ಮೂಡಿಸುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು. 45ದಿನ ಕಾಲಾವಕಾಶ: 2014ರಲ್ಲಿ ಅಭಿಯಾನ ಆರಂಭವಾದಾಗ 200ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. 2015-16ರಲ್ಲಿ 350 ಹಾಗೂ 2016-17ರಲ್ಲಿ 600ಕ್ಕೂ ಅಧಿಕ ಅಭ್ಯರ್ಥಿಗಳು ಕ್ಯಾನ್ಸರ್ ಜಯಿಸಿದ ಬಗೆಯನ್ನು ಹಂಚಿಕೊಂಡಿದ್ದರು. ಈ ಬಾರಿ ವಿಶ್ವದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಕ್ಯಾನ್ಸರ್ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.

ವಿಡಿಯೋ ಅಪ್‌ಲೋಡ್ ಮಾಡಲು 45ದಿನ ಕಾಲಾವಕಾಶ ನೀಡಲಾಗಿದ್ದು, ಎಲ್ಲಾ ವಯೋಮಾನದವರು ಪಾಲ್ಗೊಳ್ಳಬಹುದಾಗಿದೆ. ಅಂತಿಮ 20 ವಿಡಿಯೋಕ್ಕೆ ಬಹುಮಾನ ಕೂಡ ಸಿಗಲಿದೆ. ಸೆಲ್ಫ್ ವಿ ಅಭಿಯಾನದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗೆ http://www.selfv.in/index.html ಗೆ ಭೇಟಿ ನೀಡಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕ್ಯಾನ್ಸರ್ ಗೆದ್ದ ಅಮರ್ ಭಾಸ್ಕರ್, ವಂದನಾ, ಉಮಾ ಪೈ, ರೀದಾ ರಿಜ್ವಾನ್, ಶಿವಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News