ಬೆಂಗಳೂರು: 200 ಕೆಜಿ ತೂಕದ ರೋಗಿಗೆ ಯಶಸ್ವಿ ‘ಬ್ಯಾರಿಯಾಟ್ರಿಕ್’ ಶಸ್ತ್ರ ಚಿಕಿತ್ಸೆ
ಬೆಂಗಳೂರು, ಮಾ. 20: ಬಹು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 200 ಕೆಜಿ ತೂಕದ ರೋಗಿ ಮುಹೀದ್ ಅಹ್ಮದ್ (35) ಅವರಿಗೆ ನಗರದ ಗ್ಲೆನ್ ಈಗಲ್ಸ್ ಗ್ಲೋಬಲ್ ಆಸ್ಪತ್ರೆ ವೈದ್ಯರ ತಂಡ ಬ್ಯಾರಿಯಾಟ್ರಿಕ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈ ಶಸ್ತ್ರ ಚಿಕಿತ್ಸೆಯಿಂದ ರೋಗಿ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಅಲ್ಲದೆ, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಮತ್ತು ಇತರೆ ರೋಗಗಳು ನಿವಾರಣೆಯಾಗಲಿವೆ ಎಂದು ಆಸ್ಪತ್ರೆಯ ವೈದ್ಯರ ತಂಡ ತಿಳಿಸಿದೆ.
ಅಧಿಕವಾದ ಕೊಬ್ಬು ಮತ್ತು ದೊಡ್ಡದಾದ ಯಕೃತ್‌ನಿಂದಾಗಿ ಶಸ್ತ್ರಚಿಕಿತ್ಸೆ ನಡೆಸಲು ತಾಂತ್ರಿಕ ತೊಂದರೆಗಳಿಗೆ ಎಡೆ ಮಾಡಿಕೊಡುವಂತಾಗಿತ್ತು. ಅಲ್ಲದೆ, ಟ್ಯೂಬ್ ಹಾಕಿ ಶಸ್ತ್ರಚಿಕಿತ್ಸೆ ನಡೆಸುವುದು ಕಷ್ಟಕರವಾಗಿತ್ತು. ಆದರೂ, ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯ ಡಾ.ಜಿ.ಮೊಯಿನುದ್ದೀನ್ ತಿಳಿಸಿದ್ದಾರೆ.
ರೋಗಿಯು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಕಷ್ಟು ತೊಂದರೆ ಅನುಭಸುತ್ತಿದ್ದರು. ಈ ಸಮಸ್ಯೆ ನಿವಾರಣೆಗಾಗಿ ನಗರದ ಹಲವು ಆಸ್ಪತ್ರೆಗಳನ್ನು ಸಂಪರ್ಕಿಸಿದ್ದರು. ಅವರಲ್ಲಿ ಸಂಕೀರ್ಣವಾದ ಸಮಸ್ಯೆಗಳು ಇದ್ದ ಕಾರಣದಿಂದ ಆಸ್ಪತ್ರೆಗಳು ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದವು. ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಹೊರತಾದ ಪದ್ಧತಿಗಳನ್ನೆಲ್ಲಾ ಅನುಸರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಡೆಗೆ ಶಸ್ತ್ರಚಿಕಿತ್ಸೆ ಅವರಿಗೆ ಅತ್ಯುತ್ತಮವಾದ ಆಯ್ಕೆಯಾಗಿತ್ತು ಎಂದು ಹೇಳಿದ್ದಾರೆ.