ಗುಜರಿ ಗೋಡನ್ ನಲ್ಲಿ ಬೆಂಕಿ ಅವಘಡ: ಓರ್ವ ಮೃತ್ಯು
Update: 2018-03-20 21:23 IST
ಬೆಂಗಳೂರು, ಮಾ.20: ಗುಜರಿ ಗೋಡನ್‌ಗೆ ಆಕಸ್ಮಿಕ ಬೆಂಕಿ ತಗುಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮೈಸೂರು ರಸ್ತೆಯ ಶಾಮಣ್ಣ ಗಾರ್ಡನ್ ಬಳಿ ಈ ಘಟನೆ ನಡೆದಿದ್ದು, ಕಲೀಂ(24) ಎಂಬಾತ ಯುವಕ ಮೃತಪಟ್ಟಿರುವುದಾಗಿ ಪೊಲೀಸರು ಗುರುತಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಶಾಮಣ್ಣ ಗಾರ್ಡನ್‌ನ ಗುಜರಿ ಗೋಡನ್‌ಗೆ ಏಕಾಏಕಿ ಬೆಂಕಿ ತಗುಲಿದೆ. ಇದೇ ಗೋಡನ್‌ನ ಪಕ್ಕದಲ್ಲಿದ್ದ ಕಟ್ಟಡಕ್ಕೂ ಬೆಂಕಿ ಆವರಿಸಿಕೊಂಡಿದೆ. ಕಟ್ಟಡದಲ್ಲಿ ನಿದ್ದೆ ಮಾಡುತ್ತಿದ್ದ ಕಲೀಂಗೆ ಬೆಂಕಿ ತಗುಲಿ ತೀವ್ರ ಗಾಯಗೊಂಡಿದ್ದ. ಬಳಿಕ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆಯಲ್ಲಿ ನಾಲ್ಕು ಕಟ್ಟಡಗಳಿಗೆ ಹಾನಿಯಾಗಿದ್ದು, ನಾಲ್ಕು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಯಿತು. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.