ಭ್ರಷ್ಟಾಚಾರ ತಗ್ಗಿಸಲು ವಾಟಾಳ್ ಆಗ್ರಹ

Update: 2018-03-20 16:01 GMT

ಬೆಂಗಳೂರು, ಮಾ.20: ಚುನಾವಣೆ ಪ್ರಕ್ರಿಯೆ ವೇಳೆ ನಡೆಯುವ ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳನ್ನು ತಡೆಯಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.

ಮಂಗಳವಾರ ನಗರದ ಶೇಷಾದ್ರಿ ರಸ್ತೆಯ ರಾಜ್ಯ ಚುನಾವಣಾ ಆಯೋಗದ ಕಚೇರಿ ಎದುರು ತಮಟೆ ಚಳುವಳಿ ನಡೆಸಿದ ವಾಟಾಳ್ ಪಕ್ಷದ ಕಾರ್ಯಕರ್ತರು, ಪ್ರಾಮಾಣಿಕತೆಯನ್ನು ಗೌರವಿಸಬೇಕು. ಜೊತೆಗೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಚುನಾವಣಾ ಆಯೋಗದ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಳಲ್ಲಿ ಭ್ರಷ್ಟಾಚಾರ ಅತಿಯಾಗಿದೆ. ಮತದಾರರ ಬೆಂಬಲ ಪಡೆಯಲು ನಾನಾ ರೀತಿಯ ಭ್ರಷ್ಟಾಚಾರವನ್ನು ಪಕ್ಷಗಳು ಮಾಡುತ್ತವೆ. ಚುನಾವಣೆಯಲ್ಲಿ ಭ್ರಷ್ಟಾಚಾರದಿಂದ ಹಣವಂತರು ಮಾತ್ರ ಚುನಾವಣೆಗೆ ನಿಲ್ಲುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ತಡೆಯಲು ನಾವು ತೀವ್ರವಾದ ಗಮನವನ್ನು ನೀಡಬೇಕು. ಆಯೋಗ ನಿಗಧಿ ಮಾಡಿರುವ ಹಣವನ್ನು ಮಾತ್ರ ಖರ್ಚು ಮಾಡಬೇಕು. ಶಾಸನ ಸಭೆ ಚುನಾವಣೆ ವ್ಯಾಪಾರ ಆಗಬಾರದು.ಹೀಗಾಗಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಯುಕ್ತರಿಗೆ ಮನವಿ ಸಲ್ಲಿಕೆ ಮಾಡಿರುವುದಾಗಿ ವಾಟಾಳ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News