ಶಾಕಿಬ್ ವಿರುದ್ಧ ಬಾಂಗ್ಲಾ ಡ್ರೆಸ್ಸಿಂಗ್ ರೂಂ ಬಾಗಿಲು ಗಾಜು ಒಡೆದ ಆರೋಪ

Update: 2018-03-21 04:17 GMT

ಢಾಕಾ,ಮಾ.20: ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವೆ ಕೊಲಂಬೊದಲ್ಲಿ ನಡೆದ ತ್ರಿಕೋನ ಸರಣಿಯ ಕೊನೆಯ ಲೀಗ್ ಪಂದ್ಯ ಕೊನೆಗೊಂಡ ಬೆನ್ನಿಗೇ ಬಾಂಗ್ಲಾದೇಶದ ಡ್ರೆಸ್ಸಿಂಗ್ ರೂಮ್ ಗಾಜಿನ ಬಾಗಿಲು ಪುಡಿಪುಡಿಯಾದ ಸ್ಥಿತಿಯಲ್ಲಿ ಕಂಡುಬಂದಿತ್ತು. ಬಾಗಿಲ ಗಾಜನ್ನು ಪುಡಿಮಾಡಿದ್ದು ಬಾಂಗ್ಲಾದ ನಾಯಕ ಶಾಕಿಬ್ ಅಲ್ ಹಸನ್ ಎಂದು ಇದೀಗ ಗೊತ್ತಾಗಿದೆ.

ಶ್ರೀಲಂಕಾ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಮಹ್ಮುದುಲ್ಲಾ ಸಿಡಿಸಿದ ಭರ್ಜರಿ ಸಿಕ್ಸರ್ ನೆರವಿನಿಂದ ಬಾಂಗ್ಲಾದೇಶ ಒಂದು ಎಸೆತ ಬಾಕಿ ಇರುವಾಗಲೇ ರೋಚಕ ಜಯ ಸಾಧಿಸಿತ್ತು. ಬಾಂಗ್ಲಾ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಲಂಕಾದ ಬೌಲರ್ ಇಸ್ರು ಉದಾನ ಎಸೆದ ಎರಡನೇ ಬೌನ್ಸರ್‌ನ್ನು ನೋ-ಬಾಲ್ ಎಂದು ಪರಿಗಣಿಸಲು ಅಂಪೈರ್ ನಿರಾಕರಿಸಿದರು. ಇದರಿಂದ ಕೆರಳಿದ ಬಾಂಗ್ಲಾ ನಾಯಕ ಶಾಕಿಬ್ ಅಲ್‌ಹಸನ್ ಬ್ಯಾಟಿಂಗ್ ಮಾಡುತ್ತಿದ್ದ ಆಟಗಾರರನ್ನು ಮೈದಾನ ತೊರೆದು ಬರುವಂತೆ ಸೂಚನೆ ನೀಡಿದ್ದರು. ಆದರೆ, ಆಟಗಾರರು ಮೈದಾನ ತೊರೆಯದೇ ಬ್ಯಾಟಿಂಗ್ ಮುಂದುವರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು. ಬಾಂಗ್ಲಾ ಜಯ ಸಾಧಿಸಿದ್ದರೂ ಆಟಗಾರರ ಕೋಪ ಮಾತ್ರ ಕಡಿಮೆಯಾಗಿರಲಿಲ್ಲ. ಸಂಪ್ರದಾಯದಂತೆ ಪಂದ್ಯ ಮುಗಿದ ಬಳಿಕ ಶ್ರೀಲಂಕಾ ಆಟಗಾರರ ಕೈಕುಲುಕದೇ ಕ್ರೀಡಾಸ್ಫೂರ್ತಿ ಮರೆತಂತೆ ನಡೆದುಕೊಂಡ ಬಾಂಗ್ಲಾ ಆಟಗಾರರು ಡ್ರೆಸ್ಸಿಂಗ್ ರೂಮ್ ಬಾಗಿಲ ಗ್ಲಾಸ್‌ನ್ನು ಒಡೆದು ಹಾಕಿ ಅಟ್ಟಹಾಸ ಮೆರೆದಿದ್ದರು.

ಸಿಸಿಟಿವಿ ದೃಶ್ಯದಲ್ಲಿ ಬಾಗಿಲ ಗಾಜನ್ನು ಯಾರು ಒಡೆದುಹಾಕಿದ್ದಾರೆಂದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ಡ್ರೆಸ್ಸಿಂಗ್ ರೂಮ್‌ನ ಅಡುಗೆ ಸಿಬ್ಬಂದಿ ಬಳಿ ಗಾಜು ಪುಡಿ ಮಾಡಿದಾತನ ಪತ್ತೆ ಹಚ್ಚುವಂತೆ ತಿಳಿಸಿದ್ದರು. ಗಾಜು ಪುಡಿ ಮಾಡಿದ ಘಟನೆಯ ಹಿಂದೆ ಶಾಕಿಬ್ ಇದ್ದಾರೆಂದು ಅಡುಗೆ ಸಿಬ್ಬಂದಿ ಬ್ರಾಡ್‌ಗೆ ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಬಾಂಗ್ಲಾದೇಶದ ನಾಯಕ ಶಾಕಿಬ್ ಡ್ರೆಸ್ಸಿಂಗ್‌ರೂಮ್‌ನ ಬಾಗಿಲನ್ನು ಜೋರಾಗಿ ತಳ್ಳಿದ ಪರಿಣಾಮ ಗಾಜು ಪುಡಿಪುಡಿಯಾಗಿದೆ.

ಬ್ರಾಡ್ ಅವರು ಶಾಕಿಬ್‌ಗೆ ಪಂದ್ಯಶುಲ್ಕದಲ್ಲಿ ಶೇ.25ರಷ್ಟು ದಂಡ ವಿಧಿಸಿದ್ದಲ್ಲದೆ 1 ಡಿಮೆರಿಟ್ ಪಾಯಿಂಟ್ ನೀಡಿದ್ದಾರೆ. ಶ್ರೀಲಂಕಾ ನಾಯಕ ತಿಸಾರ ಪೆರೇರರೊಂದಿಗೆ ವಾಗ್ವಾದ ನಡೆಸಿದ್ದ ಬಾಂಗ್ಲಾದೇಶದ ಮೀಸಲು ಆಟಗಾರ ನೂರುಲ್ ಹಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಹಸನ್‌ಗೆ ಪಂದ್ಯಶುಲ್ಕದಲ್ಲಿ 25 ಶೇ.ರಷ್ಟು ದಂಡ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News