ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಏಜೆಂಟರಾಗಿ ಕೆಲಸ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ: ಕಾಂಗ್ರೆಸ್ ಮುಖಂಡರ ಆರೋಪ

Update: 2018-03-21 17:30 GMT

ಬೆಂಗಳೂರು, ಮಾ.21: ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದು, ಅನಗತ್ಯ ಹೇಳಿಕೆಗಳು ನೀಡುವ ಮೂಲಕ ಕ್ಷೇತ್ರದ ಜನರ ನಡುವೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಕೆಂಪರಾಜು, ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಹೆಸರು ಬಳಸಿಕೊಂಡು ಬಿಜೆಪಿ ಪರವಾಗಿ ಕೆಲಸ ಮಾಡಿದ ಕಾಂಗ್ರೆಸ್ ಪಕ್ಷದ ಮುಖಂಡರು ಎಂದು ಬಿಂಬಿಸಿಕೊಂಡಿರುವ ಬಿ.ಕೃಷ್ಣಪ್ಪ, ವೆಂಕಟರಮಣಪ್ಪ, ನಾರಾಯಣಸ್ವಾಮಿ, ನಾರಾಯಣಪ್ಪ ಸೇರಿದಂತೆ ಹಲವರು ಇತ್ತೀಚಿಗೆ ಪತ್ರಿಕಾಗೋಷ್ಠಿ ನಡೆಸಿ ಸ್ಥಳೀಯರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಕೇಳಿದ್ದಾರೆ. ಇದು ಸ್ಥಳೀಯ ಜನರಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದೆ ಎಂದರು.

ಈಗಾಗಲೇ ಮಹದೇವಪುರ ಕ್ಷೇತ್ರದ ಅಭ್ಯರ್ಥಿಯಾಗಿ ಎ.ಸಿ.ಶ್ರೀನಿವಾಸ್ ಎಂದು ಗುರುತಿಸಲ್ಪಟ್ಟಿದ್ದಾರೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಪಾಲಿಕೆ ಸದಸ್ಯರೆಲ್ಲರೂ ಶ್ರೀನಿವಾಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, 2013 ರ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು, ಐದು ಸಾವಿರ ಮತಗಳ ಅಂತರದಿಂದ ಸೋತಿದ್ದರು. ಹೀಗಾಗಿ, ಈ ಬಾರಿ ಅವರೇ ಗೆಲ್ಲುತ್ತಾರೆ ಎಂಬ ದುರುದ್ದೇಶದಿಂದ ಶಾಸಕ ಅರವಿಂದ್ ಲಿಂಬಾವಳಿ ಜೊತೆ ಸೇರಿಕೊಂಡು ಗೊಂದಲ ಮೂಡಿಸುವ ಸಲುವಾಗಿ ಅನಗತ್ಯ ಹೇಳಿಕೆಗಳು ನೀಡುತ್ತಿದ್ದಾರೆ ಎಂದು ದೂರಿದರು.

ಮಹದೇವಪುರ ಕ್ಷೇತ್ರದ 8 ಪಾಲಿಕೆ ವಾರ್ಡ್‌ಗಳಲ್ಲಿ 4, 6 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ 4, 11 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ 5 ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದೆ. ಅಲ್ಲದೆ, 12 ಗ್ರಾಮ ಪಂಚಾಯತ್ ಗಳಿದ್ದು, ಅದರಲ್ಲಿ 8 ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವಿದೆ. ಈ ಎಲ್ಲ ಕಡೆಗಳಿಂದ ಎ.ಸಿ.ಶ್ರೀನಿವಾಸ್‌ರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷದ ಮುಖಂಡರು ಎಂದುಕೊಂಡಿರುವ ಕೆಲವರು ಪಕ್ಷದ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಯರಾಮರೆಡ್ಡಿ, ಮಂಜುಳಾ ನರಸಿಂಹಮೂರ್ತಿ, ರಮೇಶ್, ವೆಂಕಟೇಶ್, ಸುಬ್ಬಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News