ಸಿದ್ದು ಸರಕಾರದ ಈ ಯೋಜನೆಗೆ ಹಾಲಿವುಡ್ ನಿಂದಲೂ ಶಹಬ್ಬಾಸ್ ಗಿರಿ

Update: 2018-03-21 17:54 GMT

ಬೆಂಗಳೂರು, ಮಾ. 21 : ರಾಜ್ಯದಲ್ಲಿ ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತುಂಬು ವಿಶ್ವಾಸದಿಂದ ಎಲ್ಲೆಡೆ ಹೇಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಭರ್ಜರಿ ಪ್ರವಾಸಗಳನ್ನೂ ಮಾಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಚುನಾವಣಾ ಪ್ರಚಾರ ಹಾಗು ತಯಾರಿಯಲ್ಲೂ ಅವರ ಪಕ್ಷವೇ ಮುಂದಿರುವ ಲಕ್ಷಣಗಳೂ ಕಾಣುತ್ತಿವೆ. ಇದಕ್ಕೆ ಪೂರಕವಾಗಿ ಇದೀಗ ರಾಜ್ಯ ಸರಕಾರದ ಮಹತ್ವದ ಯೋಜನೆಯೊಂದಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ. ಹಾಲಿವುಡ್ ಸ್ಟಾರ್ ಕೂಡ ನಮ್ಮ ಸಿದ್ದರಾಮಯ್ಯ ಸರಕಾರದ ಯೋಜನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ಸರಕಾರ ತುಮಕೂರಿನ ಪಾವಗಡದಲ್ಲಿ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಬೃಹತ್ ಸೋಲಾರ್ ಪಾರ್ಕ್ ಒಂದನ್ನು ನಿರ್ಮಿಸುತ್ತಿದೆ. ಸುಮಾರು 13 ಸಾವಿರ ಎಕರೆ ಪ್ರದೇಶದಲ್ಲಿ 16500 ಕೋಟಿ ರೂಪಾಯಿಯ ದೊಡ್ಡ ಯೋಜನೆ ಇದು.  ಇದರ ಮೊದಲ ಹಂತದ ಉದ್ಘಾಟನೆಯನ್ನು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಿದ್ದರು. ಈ ಯೋಜನೆ ಪೂರ್ಣಗೊಂಡಾಗ ಇದು ವಿಶ್ವದಲ್ಲೇ ಅತಿದೊಡ್ಡ ಸೋಲಾರ್ ಪಾರ್ಕ್ ಆಗಲಿದೆ.

ಈ ಯೋಜನೆ ಬಗ್ಗೆ  ಅಮೇರಿಕಾದ ಪ್ರತಿಷ್ಠಿತ ಲಾಸ್ ಏಂಜಲೀಸ್ ಟೈಮ್ಸ್ ಪತ್ರಿಕೆ ಟ್ವೀಟ್ ಮಾಡಿದೆ. ಈ ಟ್ವೀಟ್ ಗೆ ವ್ಯಾಪಕ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಮಾತ್ರವಲ್ಲ ಟೈಟಾನಿಕ್ ಖ್ಯಾತಿಯ, ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟ, ಪರಿಸರವಾದಿ ಲಿಯೊನಾರ್ಡೊ ಡಿಕಾಪ್ರಿಯೋ ಕೂಡ ಈ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಕರ್ನಾಟಕ ಸರಕಾರ ಮಾತ್ರವಲ್ಲ ಇಡೀ ದೇಶದ ಜನತೆಯ ಪಾಲಿಗೆ ಖುಷಿಯ ವಿಷಯ.

ಸಿದ್ದರಾಮಯ್ಯ ಸಾಮಾನ್ಯವಾಗಿ ಗ್ಲಾಮರ್ , ಕಾರ್ಪೊರೇಟ್ ಇತ್ಯಾದಿ ಪ್ರಭಾವಿ ವಲಯದಿಂದ ಅಂತರ ಕಾಪಾಡಿಕೊಳ್ಳುವವರು. ಸಾಮಾನ್ಯವಾಗಿ ರಾಜಕಾರಣಿಗಳು ಮಾಡುವಂತೆ ತಮ್ಮ ಪರ ಈ ವಲಯಗಳಲ್ಲಿ ಒಳ್ಳೆಯ ಹೆಸರಿರಬೇಕು ಎಂದು ಹಾತೊರೆಯುವುವರಲ್ಲ. ಇಂತಹವುಗಳ ಬಗ್ಗೆ ಅಸಡ್ಡೆ ತೋರಿಸುವುದೇ ಹೆಚ್ಚು. ತನ್ನ ಹಿನ್ನೆಲೆಯೇ ತಾನು ಗ್ರಾಮೀಣ ಪ್ರದೇಶ, ರೈತಾಪಿ ಜನ, ಬಡವರ ಬಗ್ಗೆ ಹೆಚ್ಚು ಮಾತಾಡುವ ಹಾಗೆ ಮಾಡಿದೆ ಎಂದು ಮುಲಾಜಿಲ್ಲದೆ ಹೇಳುವವರು. ಅದಕ್ಕಾಗಿ ಕೈಗಾರಿಕೋದ್ಯಮಿಗಳ, ಲಾಬಿ ಜಗತ್ತಿನ ಅವಕೃಪೆಗೆ ಒಳಗಾದವರು ಎಂಬ ಮಾತೂ ಇದೆ. 

ಈಗ ಅವರು ಬಯಸದೆಯೇ ಅವರ ಸರಕಾರಕ್ಕೆ ಅಮೆರಿಕದಿಂದ ಮೆಚ್ಚುಗೆ ಬಂದಿದೆ. ಹಾಲಿವುಡ್ ಸ್ಟಾರ್ ಅವರ ಯೋಜನೆಯ ಬಗ್ಗೆ ಮಾತಾಡಿದ್ದಾರೆ. ಒಟ್ಟಾರೆ ಅವರ ಸರಕಾರಕ್ಕೆ ಚುನಾವಣೆ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಕೇಳಿ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News