ಇರಾಕ್ ವಿರುದ್ಧ ನಿಷೇಧ ಹಿಂಪಡೆದ ಫಿಫಾ: ಅಭಿಮಾನಿಗಳ ಸಂಭ್ರಮಾಚರಣೆ

Update: 2018-03-21 18:37 GMT

ಬಗ್ದಾದ್, ಮಾ.21: ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲು ಇರಾಕ್ ಮೇಲೆ ಫಿಫಾ ವಿಧಿಸಿರುವ ಮೂರು ದಶಕಗಳ ನಿಷೇಧವನ್ನು ಹಿಂಪಡೆದಿರುವುದಕ್ಕೆ ಇರಾಕ್ ಫುಟ್ಬಾಲ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿಯು ಕಳೆದ ಶುಕ್ರವಾರ ಇರಾಕ್ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಹಿಂದಕ್ಕೆ ಪಡೆದಿದ್ದಲ್ಲದೆ, ಬಸ್ರಾ, ಕರ್ಬಾಲ ಹಾಗೂ ಇರ್ಬಿಲ್‌ನಲ್ಲಿ ಪೂರ್ಣಪ್ರಮಾಣದ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಿದೆ. 1990ರಲ್ಲಿ ಕುವೈಟ್ ಮೇಲೆ ಇರಾಕ್ ದಾಳಿ ನಡೆಸಿದಾಗ ಇರಾಕ್‌ಗೆ ವಿಧಿಸಿದ್ದ ನಿಷೇಧವನ್ನು ಫಿಫಾ ಹಿಂದಕ್ಕೆ ಪಡೆದಿದೆ. ನಿಷೇಧ ಜಾರಿಯಲ್ಲಿದ್ದಾಗಲೇ 2017ರ ಬಳಿಕ ಇರಾಕ್ ತಂಡ, ಕತರ್ ಹಾಗೂ ಸಿರಿಯಾ ತಂಡಗಳಿರುವ ಮೂರು ರಾಷ್ಟ್ರಗಳ ಟೂರ್ನಮೆಂಟ್ ಹಾಗೂ ಸೌಹಾರ್ದ ಪಂದ್ಯಗಳನ್ನು ಆಯೋಜಿಸಿತ್ತು.

 ಬಸ್ರಾ, ಕರ್ಬಾಲ ಹಾಗೂ ಇರ್ಬಿಲ್ ಪ್ರದೇಶ ಇರಾಕ್‌ನ ಸುರಕ್ಷಿತ ತಾಣವೆಂದು ಪರಿಗಣಿಸಲಾಗಿದೆ. ಪದೇ ಪದೇ ಉಗ್ರರ ದಾಳಿಗೆ ಗುರಿಯಾಗುತ್ತಿರುವ ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಪಂದ್ಯಗಳನ್ನು ನಡೆಸಲು ಫಿಫಾ ಅನುಮತಿ ನೀಡಿಲ್ಲ.

1990ರಲ್ಲಿ ಫಿಫಾ ಇರಾಕ್ ಮೇಲೆ ವಿಧಿಸಿರುವ ನಿಷೇಧವನ್ನು 2011ರಲ್ಲಿ ತಾತ್ಕಾಲಿಕವಾಗಿ ಹಿಂಪಡೆದಿತ್ತು. ಇರಾಕ್ ಹಾಗೂ ಜೋರ್ಡನ್ ನಡುವಿನ ಪಂದ್ಯದ ವೇಳೆ ವಿದ್ಯುತ್ ವೈಫಲ್ಯವಾದ ಕಾರಣ ಮತ್ತೊಮ್ಮೆ ಇರಾಕ್ ಮೇಲೆ ನಿಷೇಧ ವಿಧಿಸಲಾಗಿತ್ತು. ಇರಾಕ್ ಫೆಬ್ರವರಿಯಲ್ಲಿ ಸೌದಿ ಅರೇಬಿಯ ವಿರುದ್ಧ ಸೌಹಾರ್ದ ಫುಟ್ಬಾಲ್ ಪಂದ್ಯವನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಇದರಲ್ಲಿ ಇರಾಕ್ ನಾಲ್ಕರಲ್ಲಿ ಜಯ ಹಾಗೂ ಒಂದರಲ್ಲಿ ಸೋತಿತ್ತು. ಬಾಗ್ದಾದ್‌ನಲ್ಲಿ 100,000 ಅಧಿಕ ಆಸನದ ಸಾಮರ್ಥ್ಯದ ಫುಟ್ಬಾಲ್ ಸ್ಟೇಡಿಯಂ ನಿರ್ಮಾಣಕ್ಕೆ ಸೌದಿ ಅರೇಬಿಯ ಹಣಕಾಸು ನೆರವು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News