4ನೇ ಬಾರಿ ಕಾಮನ್‌ವೆಲ್ತ್ ಗೇಮ್ಸ್ ಸ್ಪರ್ಧೆಗೆ ಸೀಮಾ ಸಿದ್ಧತೆ

Update: 2018-03-21 18:57 GMT

ಹೊಸದಿಲ್ಲಿ, ಮಾ.21: ಮುಂದಿನ ತಿಂಗಳು ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕೊನೆಯ ಬಾರಿ ಡಿಸ್ಕಸ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಭಾರತದ ಹಿರಿಯ ಅಥ್ಲೀಟ್ ಸೀಮಾ ಪೂನಿಯಾ ಪದಕದೊಂದಿಗೆ ವಿದಾಯ ಹೇಳಲು ಬಯಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಸೀಮಾ ಭಾರತದ ಓರ್ವ ಯಶಸ್ವಿ ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್. ತಾನಾಡಿದ ಪ್ರತಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದಾರೆ.

2006ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಪೂನಿಯಾ ಬೆಳ್ಳಿ ಜಯಿಸಿದ್ದರು. ಹರ್ಯಾಣದ ಅಥ್ಲೀಟ್ ಪೂನಿಯಾ 2010 ಹಾಗೂ 2014ರ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಪದಕ ಜಯಿಸಿದ್ದಾರೆ. 34ರ ಹರೆಯದಲ್ಲಿ ತನ್ನ ಕೊನೆಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕಕ್ಕಾಗಿ ಮತ್ತೊಮ್ಮೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಸುಮಾರು ಎರಡು ದಶಕಗಳ ವೃತ್ತಿಜೀವನದಲ್ಲಿ ಸೀಮಾ ಮೂರು ಒಲಿಂಪಿಕ್ಸ್ ಗೇಮ್ಸ್(2004,2012, 2016), ಒಂದು ಏಷ್ಯನ್ ಗೇಮ್ಸ್(2014) ಹಾಗೂ ಮೂರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ಗೋಲ್ಡ್‌ಕೋಸ್ಟ್‌ನಲ್ಲಿ ಕೊನೆಯ ಬಾರಿ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಲಿರುವ ಪೂನಿಯಾ 2020ರ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದಾರೆ.

‘‘ಇದು ನನ್ನ ನಾಲ್ಕನೇ ಕಾಮನ್‌ವೆಲ್ತ್ ಗೇಮ್ಸ್. ಗೋಲ್ಡ್ ಕೋಸ್ಟ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದೇನೆ. ಆದರೆ, ಯಾವ ಬಣ್ಣದ ಪದಕ ಗೆಲ್ಲುವೆನೆಂದು ಹೇಳಲು ಸಾಧ್ಯವಿಲ್ಲ. ಇದೊಂದು ದೀರ್ಘ ಪ್ರಯಾಣ. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾನು ಫಿಟ್ ಇರುತ್ತೇನೆಯೇ ಎಂದು ಗೊತ್ತಿಲ್ಲ. 2020ರ ಒಲಿಂಪಿಕ್ಸ್ ತನಕ ಸಕ್ರಿಯವಾಗಿರಲು ಬಯಸಿದ್ದೇನೆ’’ ಎಂದುಈಗ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿರುವ ಸೀಮಾ ಹೇಳಿದ್ದಾರೆ.

ಹರ್ಯಾಣದ ಖ್ವೆಡಾ ಗ್ರಾಮದಲ್ಲಿ ಜನಿಸಿರುವ ಸೀಮಾ 11ರ ಹರೆಯದಲ್ಲಿ ಹರ್ಡಲ್ಸ್‌ನಲ್ಲಿ ಸ್ಪರ್ಧಿಸುವುದರೊಂದಿಗೆ ಅಥ್ಲೆಟಿಕ್ಸ್‌ಗೆ ಕಾಲಿಟ್ಟರು. ಆನಂತರ ಲಾಂಗ್‌ಜಂಪ್, ಇದೀಗ ಡಿಸ್ಕಸ್ ಎಸೆತದಲ್ಲಿ ಸ್ಪರ್ಧಿಸುತ್ತಿದ್ದಾರೆ. ಸೀಮಾ ಶಾಟ್‌ಪುಟ್‌ನಲ್ಲೂ ಪದಕ ಜಯಿಸಿದ್ದಾರೆ.

2000ರಲ್ಲಿ ಕೋಲ್ಕತಾ ಓಪನ್ ನ್ಯಾಶನಲ್ಸ್ ಟೂರ್ನಿಯಲ್ಲಿ 57.30 ಮೀ. ದೂರ ಡಿಸ್ಕಸ್‌ನ್ನು ಎಸೆಯುವ ಮೂಲಕ ರಾಷ್ಟ್ರೀಯ ಚಾಂಪಿಯನ್ ನೀಲಂ ಜಸ್ವಂತ್ ಸಿಂಗ್‌ರನ್ನು ಸೋಲಿಸಿ ಎಲ್ಲರ ಗಮನ ಸೆಳೆದಿದ್ದರು.

ಅದೇ ವರ್ಷ 17ರ ಹರೆಯದ ಸೀಮಾ ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆದ ವರ್ಲ್ಡ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನ ಜಯಿಸಿದ್ದರು. ಆದರೆ, ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಪದಕವನ್ನು ಕಳೆದುಕೊಂಡಿದ್ದರು. ಸಾಮಾನ್ಯ ಶೀತಕ್ಕೆ ಬಳಸುವ ಔಷಧಿಯನ್ನು ಸೇವಿಸಿದ ಕಾರಣ ಪೂನಿಯಾ ಡೋಪಿಂಗ್ ಪರೀಕ್ಷೆಯಲ್ಲಿ ಫೇಲಾಗಿದ್ದರು. 2002ರಲ್ಲಿ ನಡೆದ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಸೀಮಾ ಕಂಚು ಜಯಿಸಿದರು. ಅರ್ಹತಾ ಸುತ್ತಿನಲ್ಲಿ 14ನೇ ಸ್ಥಾನ ಪಡೆದಿದ್ದ ಸೀಮಾ 2004ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. 2006ರಲ್ಲಿ ಮೆಲ್ಬೋರ್ನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸುವ ಮೂಲಕ ಮೊದಲ ಬಾರಿ ಹಲವು ಕ್ರೀಡೆಗಳ ಟೂರ್ನಿಯಲ್ಲಿ ಪದಕ ಜಯಿಸಿದ್ದರು.ದೋಹಾ ಏಷ್ಯನ್ ಗೇಮ್ಸ್‌ಗೆ ಮೊದಲು ಮತ್ತೊಮ್ಮೆ ಡೋಪಿಂಗ್ ವಿವಾದಕ್ಕೆ ಸಿಲುಕಿದ್ದರು.

ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಸೀಮಾಗೆ ಕ್ಲೀನ್‌ಚಿಟ್ ನೀಡಿತ್ತು. ತಂದೆಯ ಅನಾರೋಗ್ಯದ ಕಾರಣ ಅವರು 2006ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿಲ್ಲ.

2010ರಲ್ಲಿ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಜಯಿಸುವ ಮೂಲಕ ಸಕ್ರಿಯ ಅಥ್ಲೀಟ್‌ಗೆ ಮತ್ತೆ ವಾಪಸಾಗಿದ್ದರು. ಪೂನಿಯಾ ಎದುರಾಳಿ ಕೃಷ್ಣಾ ಪೂನಿಯಾ ಚಿನ್ನ ಹಾಗೂ ಹರ್ವಂತ್ ಕೌರ್ ಬೆಳ್ಳಿ ಜಯಿಸಿದ್ದು, ಡಿಸ್ಕಸ್ ಎಸೆತದಲ್ಲಿ ಭಾರತ ಕ್ಲೀನ್‌ಸ್ವೀಪ್ ಸಾಧಿಸಿತ್ತು.

 2012 ಹಾಗೂ 2016ರ ಒಲಿಂಪಿಕ್ಸ್‌ನಲ್ಲಿ ಸೀಮಾ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈ ಎರಡು ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನಲ್ಲಿ ಸೋತು ಹೊರ ನಡೆದಿದ್ದರು.

2014ರಲ್ಲಿ ಇಂಚೋನ್ ಏಷ್ಯನ್ ಗೇಮ್ಸ್ ನಲ್ಲಿ 61.03 ಮೀ.ದೂರಕ್ಕ ಡಿಸ್ಕಸ್ ಎಸೆದಿದ್ದ ಸೀಮಾ ಬಹು ಕ್ರೀಡಾಕೂಟದಲ್ಲಿ ಮೊದಲ ಬಾರಿ ಚಿನ್ನ ಜಯಿಸಿದ್ದರು. ಈ ತಿಂಗಳಾರಂಭದಲ್ಲಿ ಪಾಟಿಯಾಲದಲ್ಲಿ ನಡೆದ ಫೆಡರೇಶನ್ ಕಪ್ ನ್ಯಾಶನಲ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸೀಮಾ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News