ನಿಮ್ಮ ಡಾಟಾ ರಕ್ಷಿಸಲು ಸಾಧ್ಯವಾಗದಿದ್ದರೆ ನಿಮಗೆ ಸೇವೆ ಸಲ್ಲಿಸುವ ಅರ್ಹತೆ ನಮಗಿಲ್ಲ

Update: 2018-03-22 07:24 GMT

ವಿಶ್ವಾದ್ಯಂತ ಕೋಲಾಹಲ ಸೃಷ್ಟಿಸಿರುವ ಕೇಂಬ್ರಿಜ್ ಅನಾಲಿಟಿಕಾ ಮಾಹಿತಿ ದುರ್ಬಳಕೆ ಪ್ರಕರಣವು ಫೇಸ್ ಬುಕ್ ಸ್ಥಾಪಕ ಮಾರ್ಕ್ ಝುಕರ್ ಬರ್ಗ್ ರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಸ್ವತಃ ಝುಕರ್ ಬರ್ಗ್ ಫೇಸ್ ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಝುಕರ್ ಬರ್ಗ್ ರ ಫೇಸ್ ಬುಕ್ ಪೋಸ್ಟ್ ನ ಪೂರ್ಣಪಾಠ ಈ ಕೆಳಗಿನಂತಿದೆ. 

"ಕೇಂಬ್ರಿಜ್ ಅನಾಲಿಟಿಕಾ ವಿಚಾರದ ಬಗ್ಗೆ ನಾವು ಈಗಾಗಲೇ ಕೈಗೊಂಡ ಕ್ರಮಗಳು  ಹಾಗೂ ಈ ಪ್ರಮುಖ ವಿಚಾರದ ಪರಿಹಾರಕ್ಕೆ ಮುಂದೆ ನಾವು ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ನಾನು ಒಂದು ಅಪ್‍ಡೇಟ್ ಶೇರ್ ಮಾಡಲು ಇಚ್ಛಿಸುತ್ತೇನೆ.

ನಿಮ್ಮ ಡಾಟಾ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ, ನಮಗೆ ಅದು ಸಾಧ್ಯವಿಲ್ಲವೆಂದಾದರೆ ನಿಮಗೆ ಸೇವೆ ಸಲ್ಲಿಸುವ ಅರ್ಹತೆ ನಮಗಿಲ್ಲವೆಂದೇ ತಿಳಿಯಬೇಕಾಗುತ್ತದೆ. ನಿಖರವಾಗಿ ಏನು ನಡೆಯಿತು ಹಾಗೂ ಇದು ಮತ್ತೆ ನಡೆಯದಂತೆ ಏನನ್ನು ಖಾತ್ರಿ ಪಡಿಸಬೇಕು ಎಂಬ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಇದು ಮತ್ತೆ ಆಗದಂತೆ ತಡೆಯುವ ನಿಟ್ಟಿನಲ್ಲಿ ನಾವು ವರ್ಷಗಳ ಹಿಂದೆ ಕ್ರಮ ಕೈಗೊಂಡಿದ್ದೇವೆ  ಎಂಬುದು ಒಂದು ಉತ್ತಮ ಸುದ್ದಿ. ಆದರೆ ನಾವು ತಪ್ಪುಗಳನ್ನೂ ಮಾಡಿದ್ದೇವೆ ಹಾಗೂ ಇವುಗಳನ್ನು ನಿವಾರಿಸಲು ಇನ್ನೂ ಹೆಚ್ಚಿನದನ್ನು ಮಾಡಲು ಬಾಕಿಯಿದೆ.

ಘಟನಾವಳಿಗಳ ಬಗ್ಗೆ ಇಲ್ಲಿದೆ ಮಾಹಿತಿ :

ಆ್ಯಪ್ ಗಳು ಸಾಮಾಜಿಕವಾಗಿ ಹೆಚ್ಚು ಪ್ರಬಲವಾಗಬೇಕು ಎಂಬ ಉದ್ದೇಶದಿಂದ 2007ರಲ್ಲಿ ನಾವು ಫೇಸ್‍ಬುಕ್ ಪ್ಲಾಟ್‍ಫಾರ್ಮ್ ಅನ್ನು ಆರಂಭಿಸಿದೆವು. ನಿಮ್ಮ ಕ್ಯಾಲೆಂಡರ್ ನಿಮ್ಮ ಸ್ನೇಹಿತರಿಗೆ ಹುಟ್ಟು ಹುಬ್ಬಗಳು,  ನಿಮ್ಮ ನಕ್ಷೆಗಳು ನಿಮ್ಮ ಸ್ನೇಹಿತರು ಎಲ್ಲಿ ವಾಸಿಸುತ್ತಿದ್ದಾರೆಂದು ಹಾಗೂ ನಿಮ್ಮ ಅಡ್ರೆಸ್ ಬುಕ್ ಅವರ ಚಿತ್ರಗಳನ್ನು ತೋರಿಸುವಂತಾಗಬೇಕೆಂದು ನಾವು  ಜನರಿಗೆ ಆ್ಯಪ್ ಗಳಿಗೆ ಲಾಗ್ ಮಾಡಿ ಅವರ ಸ್ನೇಹಿತರು ಯಾರು ಹಾಗೂ ಅವರ ಬಗ್ಗೆ ಸ್ವಲ್ಪ ಮಾಹಿತಿಯನ್ನು ಶೇರ್ ಮಾಡಲು ಅನುಕೂಲ ಕಲ್ಪಿಸಿದೆವು.

2013ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರಾದ ಅಲೆಕ್ಸಾಂಡರ್ ಕೊಗನ್ ಎಂಬವರು ಪರ್ಸನಾಲಿಟಿ ಕ್ವಿಝ್ ಆ್ಯಪ್ ಸಿದ್ಧಪಡಿಸಿದರು. ಅದನ್ನು ಸುಮಾರು ಎರಡು ಲಕ್ಷ ಜನರು ಇನ್‍ಸ್ಟಾಲ್ ಮಾಡಿದ್ದರು ಹಾಗೂ ಅವರು ತಮ್ಮ ಡಾಟಾ ಹಾಗೂ ಕೆಲ ಸ್ನೇಹಿತರ ಡಾಟಾ ಕೂಡ ಶೇರ್ ಮಾಡಿದ್ದರು. ಆ ಸಮಯ ನಮ್ಮ ಪ್ಲಾಟ್ ಫಾರ್ಮ್ ಹೇಗೆ ಕಾರ್ಯನಿರ್ವಹಿಸುತ್ತಿದ್ದೆಂದರೆ ಕೋಗನ್  ಲಕ್ಷಾಂತರ ಸ್ನೇಹಿತರ ಡಾಟಾ ಪಡೆಯಬಹುದಾಗಿತ್ತು.

ಇಂತಹ ಆ್ಯಪ್ ಗಳನ್ನು ನಿವಾರಿಸಲು ನಾವು ಸಂಪೂರ್ಣ ಪ್ಲಾಟ್‍ಫಾರ್ಮ್ ಬದಲಾಯಿಸುವುದಾಗಿ ಘೋಷಿಸಿದೆವು. ಪ್ರಮುಖವಾಗಿ ಕೋಗನ್ ನಂತಹ ಆ್ಯಪ್ ಗಳು  ಒಬ್ಬರ ಸ್ನೇಹಿತರು ಅನುಮತಿ ನೀಡದ ಹೊರತು ಅವರ ಡಾಟಾಗಳನ್ನು ಕೇಳುವ ಹಾಗಿರಲಿಲ್ಲ. ಜನರಿಂದ ಯಾವುದೇ ಸೂಕ್ಷ್ಮ ಮಾಹಿತಿ ಪಡೆಯುವ ಮೊದಲು ಡೆವಲೆಪರ್ ಗಳು ನಮ್ಮ ಅನುಮತಿ ಪಡೆಯುವಂತೆ ಮಾಡಿದೆವು.

ತಮ್ಮಲ್ಲಿರುವ ಡಾಟಾವನ್ನು ಕೋಗನ್ ಕೇಂಬ್ರಿಜ್ ಅನಾಲಿಟಿಕಾ ಜತೆ ಶೇರ್ ಮಾಡಿದ್ದಾರೆಂದು 2015ರಲ್ಲಿ  ನಾವು 'ದಿ ಗಾರ್ಡಿಯನ್' ಪತ್ರಕರ್ತರ  ಮುಖಾಂತರ ತಿಳಿದುಕೊಂಡೆವು. ಜನರ ಅನುಮತಿಯಿಲ್ಲದೆ ಡೆವಲೆಪರ್ ಗಳು ಡಾಟಾ ಶೇರ್ ಮಾಡುವುದು ನಮ್ಮ ನೀತಿಗಳ ವಿರುದ್ಧವಾಗಿದೆ. ಆದುದರಿಂದ ನಾವು ಕೂಡಲೇ ಕೋಗನ್ ರ ಆ್ಯಪ್ ನಿಷೇಧಿಸಿದೆವು ಹಾಗೂ ಕೋಗನ್ ಮತ್ತು ಕೇಂಬ್ರಿಜ್ ಅನಾಲಿಟಿಕಾ ಅಸಮರ್ಪಕವಾಗಿ ಪಡೆದ ಡಾಟಾ ಡಿಲೀಟ್ ಮಾಡಿದ್ದಾರೆಂದು ಪ್ರಮಾಣೀಕರಿಸುವಂತೆ ಕೇಳಿದೆವು. ಅವರು ಈ ಪ್ರಮಾಣಪತ್ರಗಳನ್ನು ನೀಡಿದ್ದಾರೆ.

ಆದರೆ ಕೇಂಬ್ರಿಜ್ ಅನಾಲಿಟಿಕಾ ತಾನು ತಿಳಿಸಿದಂತೆ ಡಾಟಾ ಡಿಲೀಟ್ ಮಾಡಿರಲಿಕ್ಕಿಲ್ಲವೆಂದು ಕಳೆದ ವಾರ ನಾವು 'ದಿ ಗಾರ್ಡಿಯನ್', 'ದಿ ನ್ಯೂಯಾರ್ಕ್ ಟೈಮ್ಸ್' ಹಾಗೂ 'ಚಾನೆಲ್ 4' ಮೂಲಕ ತಿಳಿದುಕೊಂಡೆವು. ನಮ್ಮ ಯಾವುದೇ ಸೇವೆಗಳನ್ನು ಪಡೆಯುವುದರಿಂದ ನಾವು ಅವರಿಗೆ ನಿಷೇಧ ಹೇರಿದೆವು. ಕೇಂಬ್ರಿಜ್ ಅನಾಲಿಟಿಕಾ  ತಾನು ಈಗಾಗಲೇ ಡಾಟಾ ಡಿಲೀಟ್ ಮಾಡಿದ್ದಾಗಿ  ಹಾಗೂ ನಾವು ನೇಮಿಸಿದ ಸಂಸ್ಥೆಯ ಮೂಲಕ ಫಾರೆನ್ಸಿಕ್ ಆಡಿಟ್ ಗೆ ಒಪ್ಪಿದೆ.

ಕೋಗನ್ ಮತ್ತು ಕೇಂಬ್ರಿಜ್ ಅನಾಲಿಟಿಕಾ ಎರಡೂ ಸಂಸ್ಥೆಗಳು ಫೇಸ್ ಬುಕ್ ಗೆ ವಿಶ್ವಾಸದ್ರೋಹವೆಸಗಿದ್ದವು ಅಷ್ಟೇ ಅಲ್ಲದೆ ಫೇಸ್ ಬುಕ್‍ ಮತ್ತು ನಮ್ಮೊಂದಿಗೆ ಡಾಟಾ ಶೇರ್ ಮಾಡಿದ ಹಾಗೂ ಈ ಡಾಟಾ ನಾವು ರಕ್ಷಿಸುತ್ತೇವೆ ಎಂದು ನಂಬಿದ ಜನರಿಗೆ ವಿಶ್ವಾಸದ್ರೋಹವೆಸಗಿದಂತೆ. ಇದನ್ನು ಸರಿ ಪಡಿಸಬೇಕಿದೆ.

ನಾವೀಗಾಗಲೇ ಈ ನಿಟ್ಟಿನಲ್ಲಿ ಕೆಲ ವರ್ಷಗಳ ಹಿಂದೆಯೇ ಕ್ರಮ ಕೈಗೊಂಡಿದ್ದರೂ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇನೆ.

ಮೊದಲನೆಯದಾಗಿ ನಾವು 2014ರಲ್ಲಿ ನಮ್ಮ ಪ್ಲಾಟ್‍ಫಾರ್ಮ್ ಬದಲಾಯಿಸುವ ಮೊದಲು ದೊಡ್ಡ ಮಟ್ಟದ ಮಾಹಿತಿ ಪಡೆದುಕೊಂಡಿದ್ದ ಎಲ್ಲಾ ಆ್ಯಪ್ ಗಳನ್ನು ತನಿಖೆಗೆ ಒಳಪಡಿಸಲಾಗುವುದು. ಶಂಕಾಸ್ಪದ ಚಟುವಟಿಕೆಗಳಿರುವ ಯಾವುದೇ ಆ್ಯಪ್ ಅನ್ನು ನಾವು ನಿಷೇಧಿಸಲಿದ್ದೇವೆ. 

ಎರಡನೆಯದಾಗಿ ಮುಂದೆ ಈ ರೀತಿ ಆಗದಂತೆ ಡೆವಲಪರ್ ಗಳು ಪಡೆಯುವ ಡಾಟಾ ನಿಯಂತ್ರಿಸಲಿದ್ದೇವೆ. ಉದಾ ನೀವು ಒಂದು ಆ್ಯಪ್ ಮೂರು ತಿಂಗಳುಗಳ ಕಾಲ ಉಪಯೋಗಿಸದೇ ಇದ್ದರೆ ನಿಮ್ಮ ಮಾಹಿತಿ ಪಡೆಯುವ ಡೆವಲೆಪರ್ ಗಳ ಸೌಲಭ್ಯವನ್ನು ನಿಯಂತ್ರಿಸುತ್ತೇವೆ. ನೀವು ಒಂದು ಆ್ಯಪ್ ಗೆ ಸಹಿ ಹಾಕುವಾಗ ಕೇವಲ ನಿಮ್ಮ ಹೆಸರು, ಪ್ರೊಫೈಲ್ ಫೋಟೋ, ಇಮೇಲ್ ವಿಳಾಸದ ಮಾಹಿತಿ ಮಾತ್ರ ದೊರೆಯುವಂತೆ ಮಾಡುತ್ತೇವೆ. ಯಾರದ್ದೇ ಆದರೂ ಪೋಸ್ಟ್ ಅಥವಾ ಖಾಸಗಿ ಡಾಟಾ ಪಡೆಯಲು ಒಪ್ಪಂದವೊಂದಕ್ಕೆ ಸಹಿ ಹಾಕುವಂತೆ ಮಾಡುತ್ತೇವೆ. ಇನ್ನೂ ಹಲವು ಬದಲಾವಣೆಗಳನ್ನು ಮುಂದೆ ತಿಳಿಸುತ್ತೇವೆ.

ಮುಂದಿನ ಒಂದು ತಿಂಗಳಲ್ಲಿ ನಿಮ್ಮ ನ್ಯೂಸ್ ಫೀಡ್ ನಲ್ಲಿ ನಾವು ಒಂದು ಟೂಲ್ ತೋರಿಸುತ್ತೇವೆ ಹಾಗೂ  ನೀವು ಅನಗತ್ಯ ಆ್ಯಪ್ ಗಳ ಅನುಮತಿಯನ್ನು ರದ್ದುಗೊಳಿಸುವ ಸೌಲಭ್ಯ ಕೂಡ ಒದಗಿಸುತ್ತೇವೆ. ಪ್ರೈವೆಸಿ ಸೆಟ್ಟಿಂಗ್ಸ್ ನಲ್ಲಿ ಇದಕ್ಕೆ ಈಗಲೂ ಆಸ್ಪದವಿದೆ.

ನಾನು ಫೇಸ್ ಬುಕ್ ಆರಂಭಿಸಿದವನಾಗಿದ್ದು, ದಿನದ ಅಂತ್ಯದ ವೇಳೆ ನಮ್ಮ ಪ್ಲಾಟ್‍ಫಾರ್ಮ್‍ನಲ್ಲಿ ಏನು ನಡೆಯುತ್ತದೆ ಎಂಬುದಕ್ಕೆ ನಾನು ಜವಾಬ್ದಾರನಾಗುತ್ತೇನೆ. ಈ ಒಂದು ಅನುಭವದಿಂದ ನಮ್ಮ ಫೇಸ್ ಬುಕ್ ಅನ್ನು ಅದರ ಬಳಕೆದಾರರಿಗೆ ಇನ್ನಷ್ಟು ಸುರಕ್ಷಿತಗೊಳಿಸುವಲ್ಲಿ ನಾನು ಬದ್ಧನಾಗಿದ್ದೇನೆ.

ನಮ್ಮನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಆಭಾರಿಯಾಗಿದೇನೆ. ಈ ಎಲ್ಲಾ ವಿಚಾರಗಳನ್ನು ಸರಿ ಪಡಿಸಲು ಸಮಯ ಬೇಕಿದೆ ಎಂದು ನನಗೆ ತಿಳಿದಿದ್ದು  ನಾವು ಇನ್ನಷ್ಟು ಉತ್ತಮ ಸೇವೆಗೆ ಕಟಿಬದ್ಧರಾಗಿದ್ದೇವೆ ಎಂದು ತಿಳಿಸಬಯಸುತ್ತೇನೆ".

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News