ಸುಳ್ಳು ಹೇಳಿದ ಸುಷ್ಮಾ ಸ್ವರಾಜ್ ವಿರುದ್ಧ ಹಕ್ಕುಚ್ಯುತಿ ಮಂಡನೆ: ಅಂಬಿಕಾ ಸೋನಿ

Update: 2018-03-22 12:57 GMT

ಹೊಸದಿಲ್ಲಿ, ಮಾ.22: ಇರಾಕ್‌ನಲ್ಲಿ ಹತ್ಯೆಗೀಡಾದ 39 ಭಾರತೀಯರ ಕುಟುಂಬಗಳಿಗೆ ಮತ್ತು ಸಂಸತ್‌ಗೆ ಸುಳ್ಳು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಕಾಂಗ್ರೆಸ್ ಪಕ್ಷದ ನಾಯಕಿ ಅಂಬಿಕಾ ಸೋನಿ ಗುರುವಾರ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ನಿರ್ಣಯವನ್ನು ಮಂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇರಾಕ್‌ನಲ್ಲಿ ನಾಪತ್ತೆಯಾಗಿದ್ದ ಭಾರತೀಯರ ಕುರಿತು ತಾನು ಹೇಳಿರುವ ಸುಳ್ಳನ್ನು ಮರೆಮಾಚುವ ಮತ್ತು ವಿಷಯವನ್ನು ಬದಲಿಸುವ ಸಲುವಾಗಿ ಸರಕಾರವು ದತ್ತಾಂಶ ಕಳ್ಳತನದ ಆರೋಪ ಎದುರಿಸುತ್ತಿರುವ ಬ್ರಿಟಿಷ್ ಸಂಸ್ಥೆ ಕೇಂಬ್ರಿಜ್ ಅನಲಿಟಿಕಾ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವಿದೆ ಎಂದು ಆರೋಪಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ ಬೆನ್ನಿಗೆ ಅವರ ಪಕ್ಷವು ಹಕ್ಕುಚ್ಯುತಿ ಮಂಡನೆಯ ನಿರ್ಧಾರವನ್ನು ತೆಗೆದುಕೊಂಡಿದೆ.

2014ರಲ್ಲಿ ಇರಾಕ್‌ನ ಮೊಸುಲ್‌ನಿಂದ ಭಾರತೀಯ ಕಾರ್ಮಿಕರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಅಪಹರಿಸಿದ್ದರು. ಸರಕಾರ ಮತ್ತು ಸುಷ್ಮಾ ಸ್ವರಾಜ್ ಈ ಕಾರ್ಮಿಕರ ಸಾವಿನ ಸುದ್ದಿಯನ್ನು ಅವರ ಕುಟುಂಬವರ್ಗಕ್ಕೆ ತಿಳಿಸದೆ ಅವರಿಗೆ ಸುಳ್ಳು ಭರವಸೆ ನೀಡುತ್ತಾ ಬಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಪಹೃತರ ಕುಟುಂಬ ಸದಸ್ಯರ ಡಿಎನ್‌ಎಯು ಮೊಸುಲ್‌ನಲ್ಲಿದ್ದ ಸಾಮೂಹಿಕ ಸಮಾಧಿ ಸ್ಥಳದಲ್ಲಿ ಪತ್ತೆಯಾದ ದೇಹಗಳೊಂದಿಗೆ ಹೋಲಿಕೆಯಾದ ಹಿನ್ನೆಲೆಯಲ್ಲಿ ಅಪಹೃತ ಕಾರ್ಮಿಕರು ಮೃತಪಟ್ಟಿದ್ದಾರೆ ಎಂಬುದನ್ನು ಮಂಗಳವಾರದಂದು ಸುಷ್ಮಾ ಸ್ವರಾಜ್ ಸಂಸತ್‌ನಲ್ಲಿ ದೃಡೀಕರಿಸಿದ್ದರು.

ಅಪಹೃತ ಕಾರ್ಮಿಕರು ಮೃತಪಟ್ಟಿದ್ದಾರೆ ಎಂಬುದಕ್ಕೆ ದೃಡವಾದ ಪುರಾವೆ ಸಿಗುವವರೆಗೆ ಅವರನ್ನು ಮೃತರು ಎಂದು ಸರಕಾರವು ಘೋಷಿಸುವುದಿಲ್ಲ. ಅವರ ಮೃತದೇಹಗಳಿಗಾಗಿ ಶೋಧಕಾರ್ಯವು ಮೊಸುಲ್‌ಅನ್ನು ಉಗ್ರರ ಕೈಯಿಂದ ಬಿಡಿಸುವವರೆಗೆ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವೆ ತಿಳಿಸಿದ್ದರು. ಒಂಬತ್ತು ತಿಂಗಳ ಯುದ್ಧದ ನಂತರ 2017ರ ಜುಲೈಯಲ್ಲಿ ಉತ್ತರ ಇರಾಕ್‌ಅನ್ನು ಇಸ್ಲಾಮಿಕ್ ಸ್ಟೇಟ್‌ನಿಂದ ಮುಕ್ತಗೊಳಿಸಲಾಯಿತು. ನಂತರ ಸರಕಾರವು ಅಪಹೃತ ಕಾರ್ಮಿಕರ ಕುಟುಂಬ ಸದಸ್ಯರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲು ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News