ಪತ್ರಕರ್ತನ ಹತ್ಯೆ ಪ್ರಕರಣ: ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್‌ಗೆ ಕ್ಲೀನ್‌ಚಿಟ್

Update: 2018-03-22 17:32 GMT

ಹೊಸದಿಲ್ಲಿ, ಮಾ. 22: ಸಿವಾನ್ ಮೂಲದ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೈಲುವಾಸಿಯಾಗಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಅವರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮುಕ್ತಾಯಗೊಳಿಸಿದೆ. ಪತ್ರಕರ್ತ ರಾಜ್‌ದೇವ್ ರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಅವರೊಂದಿಗೆ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ಆರೋಪಿಗಳಾದ ಮುಹಮ್ಮದ್ ಕೈಫ್ ಹಾಗೂ ಜಾವೇದ್ ಇರುವ ಭಾವಚಿತ್ರದೊಂದಿಗೆ ಮಾಧ್ಯಮ ವರದಿ ಹಾಗೂ ವೀಡಿಯೋಗಳಿಗೆ ಸಂಬಂಧಿಸಿದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ನಿರ್ದೇಶಿಸಿದೆ.

ಆರ್‌ಜೆಡಿ ನಾಯಕನ ವಿರುದ್ಧ ಯಾವುದೇ ದೋಷಾರೋಪದ ದಾಖಲೆಗಳು ಸಿಬಿಐಗೆ ದೊರಕಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಅವರ ಪ್ರತಿಪಾದನೆಯನ್ನು ಮುಖ್ಯನ್ಯಾಯ ಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ. ತೇಜ್ ಪ್ರತಾಪ್ ವಿರುದ್ಧದ ವಿಚಾರಣೆ ಮುಕ್ತಾಯಗೊಳಿಸಿ ಆದೇಶ ನೀಡಿರುವ ಪೀಠ, ಪ್ರಕರಣಕ್ಕೆ ಸಂಬಂಧಿಸಿದ ಯಾವುದಾದರೂ ದಾಖಲೆಗಳು ಲಭ್ಯವಾದರೆ, ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಸ್ವಾತಂತ್ರವನ್ನು ಹತ್ಯೆಗೀಡಾದ ಪತ್ರಕರ್ತನ ಪತ್ನಿಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News