ಐಎನ್‌ಎಕ್ಸ್ ಮೀಡಿಯಾ ಹಗರಣ: ಕಾರ್ತಿಗೆ ಷರತ್ತುಬದ್ಧ ಜಾಮೀನು

Update: 2018-03-23 09:21 GMT

ಹೊಸದಿಲ್ಲಿ, ಮಾ.22: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ದಿಲ್ಲಿ ಹೈಕೋರ್ಟ್ ಶುಕ್ರವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು ದೇಶ ಬಿಟ್ಟು ಹೋಗದಂತೆ ಆದೇಶಿಸಿದೆ.

ಮಾ.16 ರಂದು ಕಾರ್ತಿ ಹಾಗೂ ಸಿಬಿಐನ ವಾದ-ವಿವಾದವನ್ನು ಆಲಿಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಸಿಬಿಐ ಪರ ವಕೀಲರು ಕಾರ್ತಿಗೆ ಜಾಮೀನು ನೀಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ತಿಗೆ ಜಾಮೀನು ನೀಡಬಾರದು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳನ್ನು ನಾಶ ಮಾಡಿರುವ ಕಾರ್ತಿ ಓರ್ವ ಪ್ರಭಾವಿ ವ್ಯಕ್ತಿಯಾಗಿದ್ದಾರೆಂದು ಸಿಬಿಐ ಪರ ವಕೀಲರು ವಾದಿಸಿದರು.

ಸಿಬಿಐ ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕಾರ್ತಿ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಯಾವ ಆರೋಪಿಗಳನ್ನು ಬಂಧಿಸಿಲ್ಲ ಎಂದು ಕಾರ್ತಿ ಪರ ವಕೀಲರು ವಾದ ಮಂಡಿಸಿದರು.

ಕಳೆದ ವರ್ಷ ಮೇನಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿ ಫೆ.28 ರಂದು ಬ್ರಿಟನ್‌ನಿಂದ ವಾಪಸಾದ ಕಾರ್ತಿ ಅವರನ್ನು ವಿಮಾನ ನಿಲ್ದಾಣದಲ್ಲೇ ಸಿಬಿಐ ಅಧಿಕಾರಿಗಳು ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News