ತ್ರಿಕೋನ ಸರಣಿ: ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್ ಗೆ 8 ವಿಕೆಟ್ ಗೆಲುವು

Update: 2018-03-23 18:26 GMT

ಮುಂಬೈ, ಮಾ.23: ನಟಾಲಿ ಸಿವೆರ್ ಹಾಗೂ ಟಮ್‌ಸಿನ್ ಬೀವೌಂಟ್ ಅರ್ಧಶತಕದ ಕೊಡುಗೆ ನೆರವಿನಿಂದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ.

ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯವನ್ನು ಬ್ಯಾಟಿಂಗ್ ಇಳಿಸಿತು. 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್‌ಗೆ ಆಸ್ಟ್ರೇಲಿಯ ಬ್ಯಾಟಿಂಗ್‌ನ್ನು ನಿಯಂತ್ರಿಸಿತು.

ಆಸ್ಟ್ರೇಲಿಯದ ಪರ ರಿಚೆಲ್ ಹೇಯ್ನ್ಸ(65 ರನ್, 45 ಎಸೆತ,8 ಬೌಂಡರಿ, 1 ಸಿಕ್ಸರ್) ಸರ್ವಾಧಿಕ ರನ್ ಗಳಿಸಿದರು. ಜೀವನಶ್ರೇಷ್ಠ ಬ್ಯಾಟಿಂಗ್ ಮಾಡಿದ ಹೇಯ್ನ್ಸ್ಸಾ ಇಂಗ್ಲೆಂಡ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಆಸೀಸ್ ಮೊದಲ 10 ಓವರ್‌ಗಳಲ್ಲಿ 79 ರನ್ ಗಳಿಸಿ ದೊಡ್ಡ ಮೊತ್ತ ಗಳಿಸುವ ವಿಶ್ವಾಸ ಮೂಡಿಸಿತ್ತು. ಆದರೆ, ಹೇಯ್ನ್ಸ್ಸಾಗೆ ಮತ್ತೊಂದು ಕಡೆಯಿಂದ ಬೆಂಬಲ ಸಿಗಲಿಲ್ಲ. ಇಂಗ್ಲೆಂಡ್ ಪರ ಮಧ್ಯಮ ವೇಗದ ಬೌಲರ್ ಜೆನ್ನಿ ಗನ್ ಹಾಗೂ ಸಿವೆರ್ ಕ್ರಮವಾಗಿ 3 ಹಾಗೂ 2 ವಿಕೆಟ್ ಕಬಳಿಸಿದರು.

ಗೆಲ್ಲಲು ಸುಲಭ ಗುರಿ ಪಡೆದ ಇಂಗ್ಲೆಂಡ್ ತಂಡ ಇನ್ನೂ 3 ಓವರ್ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಮೂರನೇ ವಿಕೆಟ್‌ನಲ್ಲಿ ಕೇವಲ 73 ಎಸೆತಗಳಲ್ಲಿ 116 ರನ್ ಜೊತೆಯಾಟ ನಡೆಸಿದ ಸಿವೆರ್(ಔಟಾಗದೆ 68,43 ಎಸೆತ) ಹಾಗೂ ಬೀವೌಂಟ್(ಔಟಾಗದೆ 58) ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು.

ಮಹಿಳೆಯರ ಬಿಗ್ ಬಾಶ್ ಲೀಗ್‌ನಲ್ಲಿ ಆಡಿದ ಅನುಭವವಿರುವ ಸಿವೆರ್ ಹಾಗೂ ಬೀವೌಂಟ್ ಆಸ್ಟ್ರೇಲಿಯದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು.

ಇಂಗ್ಲೆಂಡ್ 34 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಸಿವೆರ್ ಹಾಗೂ ಬೀವೌಂಟ್ ಜೊತೆಯಾದರು. ಮೆಗಾನ್ ಶಟ್ ಬೌಲಿಂಗ್‌ನಲ್ಲಿ ಸತತ 4 ಬೌಂಡರಿ ಬಾರಿಸಿದ ಬೀವೌಂಟ್ ಅರ್ಧಶತಕ ಪೂರೈಸಿದರು. 8ನೇ ಓವರ್‌ನಲ್ಲಿ 2 ಸಿಕ್ಸರ್, 10ನೇ ಓವರ್‌ನಲ್ಲಿ 3 ಬೌಂಡರಿ ಸಿಡಿಸಿದ ಸಿವೆರ್ ಅರ್ಧಶತಕ ಪೂರೈಸಿದರು. ಆಸ್ಟ್ರೇಲಿಯ ಏಳು ಬೌಲರ್‌ಗಳನ್ನು ಕಣಕ್ಕಿಳಿಸಿದರೂ ಬೀವೌಂಟ್ ಹಾಗೂ ಸಿವೆರ್ ಬ್ಯಾಟಿಂಗ್‌ಗೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ಬೀವೌಂಟ್ ತನ್ನ ಇನಿಂಗ್ಸ್‌ನಲ್ಲಿ 8 ಬೌಂಡರಿ ಬಾರಿಸಿದರೆ, ಸಿವೆರ್ 10 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿರುವ ಆಸ್ಟ್ರೇಲಿಯ ಇದೀಗ ಸೋಲನುಭವಿಸಿದೆ.

ಸಂಕ್ಷಿಪ್ತ ಸ್ಕೋರ್

►ಆಸ್ಟ್ರೇಲಿಯ ಮಹಿಳಾ ತಂಡ: 20 ಓವರ್‌ಗಳಲ್ಲಿ 149/8

(ರಚಲ್ ಹೇಯ್ನ್ಸ 65, ಅಲಿಸ್ಸಾ ಹೀಲಿ 31, ಜೆನ್ನಿ ಗನ್ನ್ 3-26)

ಇಂಗ್ಲೆಂಡ್: 17 ಓವರ್‌ಗಳಲ್ಲಿ 150/2

(ನಟಾಲಿ ಸಿವೆರ್ ಔಟಾಗದೆ 68, ಟಮ್‌ಸಿನ್ ಬೀವೌಂಟ್ ಔಟಾಗದೆ 58, ಕಿಮ್ಮಿನ್ಸ್ 1-12)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News