ಶ್ರೀಕಾಂತ್‌ಗೆ ಗೋಲ್ಡ್ ಕೋಸ್ಟ್ ನಲ್ಲಿ ಗೋಲ್ಡ್ ಗೆಲ್ಲುವ ಕನಸು

Update: 2018-03-23 18:27 GMT

ಹೈದರಾಬಾದ್, ಮಾ.23: ಮೆದುಳು ಜ್ವರದಿಂದಾಗಿ ನಾಲ್ಕು ವರ್ಷಗಳ ಹಿಂದೆ ಶ್ರೀಕಾಂತ್ ಅವರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚೊಚ್ಚಲ ಪಂದ್ಯ ಆಡುವ ಕನಸು ಕೈಗೂಡಿರಲಿಲ್ಲ. ಇದೀಗ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಚಿನ್ನ ಜಯಿಸುವ ಕನಸು ಕಾಣುತ್ತಿದ್ದಾರೆ.

2014ರಲ್ಲಿ ಗ್ಲಾಸ್ಗೊದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆರಂಭವಾಗುವ ಒಂದು ವಾರದ ಮೊದಲು ಶ್ರೀಕಾಂತ್ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿ ಜೀವನ್ಮರಣ ಹೋರಾಟ ನಡೆಸಿದ್ದರು. ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡಮಿಯ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದ ಶ್ರೀಕಾಂತ್‌ಗೆ ಮೆದುಳು ಜ್ವರಕ್ಕೆ ಚಿಕಿತ್ಸೆ ನೀಡಲಾಗಿತ್ತು. ಶ್ರೀಕಾಂತ್ ಒಂದು ವಾರ ಐಸಿಯುನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಆ ಎಲ್ಲ ಘಟನೆಯೀಗ ಇತಿಹಾಸವಾಗಿದ್ದು, 2018ರಲ್ಲಿ ಶ್ರೀಕಾಂತ್ ದೇಶದ ಶ್ರೇಷ್ಠ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ನಾಲ್ಕು ಸೂಪರ್ ಸರಣಿ ಪ್ರಶಸ್ತಿ ಜಯಿಸಿದ್ದ ಶ್ರೀಕಾಂತ್ ಪ್ರತಿಷ್ಠಿತ ಪದ್ಮ ಶ್ರೀ ಸಹಿತ ಹಲವು ಕ್ರೀಡಾ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು. ಗೋಲ್ಡ್‌ಕೋಸ್ಟ್‌ನಲ್ಲಿ ಗೋಲ್ಡ್ ಗೆಲ್ಲುವ ನೆಚ್ಚಿನ ಆಟಗಾರನೆಂದು ಪರಿಗಣಿಸಲ್ಪಟ್ಟಿದ್ದಾರೆ.

‘‘ಅದೊಂದು ರೀತಿಯ ವೈರಸ್ ಆಗಿತ್ತು. ಅದರ ಹೆಸರು ನನಗೆ ಗೊತ್ತಿಲ್ಲ. ಆ ದಿನ ಏನಾಗಿದೆ ಎಂದು ಯಾರೂ ನನಗೆ ಹೇಳಿಲ್ಲ. ಅದನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ’’ ಎಂದು ಶ್ರೀಕಾಂತ್ 2014ರ ಘಟನೆಯನ್ನು ಮೆಲುಕು ಹಾಕಿದರು.

‘‘ ನನ್ನ ಜೀವನದ ಕಹಿ ಘಟನೆ ನಡೆದು ಈಗ ನಾಲ್ಕು ವರ್ಷ ಕಳೆದಿದೆ. ಕಳೆದ ಒಂದು ವರ್ಷದಲ್ಲಿ ತನಗಾದ ಅನುಭವದಿಂದ ಸಾಕಷ್ಟು ಆತ್ಮವಿಶ್ವಾಸ ಪಡೆದಿದ್ದೇನೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸುವುದು ನನಗೆ ಅತ್ಯಂತ ಮುಖ್ಯವಾಗಿದೆ’’ ಎಂದು ಶ್ರೀಕಾಂತ್ ಹೇಳಿದ್ದಾರೆ.

  ದೇಶದ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಭಾರ ಹೊತ್ತು ಆಸ್ಟ್ರೇಲಿಯಕ್ಕೆ ತೆರಳಲಿರುವ ಶ್ರೀಕಾಂತ್ 2014ರಲ್ಲಿ ಗ್ಲಾಸ್ಗೊದಲ್ಲಿ ಪಿ. ಕಶ್ಯಪ್ ಜಯಿಸಿದ್ದ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಕಶ್ಯಪ್ 32 ವರ್ಷಗಳ ಬಳಿಕ ಭಾರತದ ಪರ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಜಯಿಸಿ ಇತಿಹಾಸ ಬರೆದಿದ್ದರು. ಪ್ರಕಾಶ್ ಪಡುಕೋಣೆ(1978, ಎಡ್ಮೊಂಟನ್) ಹಾಗೂ ಸೈಯದ್ ಮೋದಿ(1982, ಬ್ರಿಸ್ಬೇನ್) ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದರು.

‘‘ಕಳೆದ ಬಾರಿ ಗೇಮ್ಸ್‌ನಲ್ಲಿ ನಾವು ಹೆಚ್ಚು ಪದಕ ಗೆದ್ದಿದ್ದೆವು. ಇದೀಗ 2014ಕ್ಕಿಂತ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಈ ಬಾರಿ ಹೆಚ್ಚಿನ ಪದಕ ಗೆಲ್ಲುವ ಅವಕಾಶ ನಮಗಿದೆ. ಕಾಮನ್‌ವೆಲ್ತ್ ಗೇಮ್ಸ್ ನನ್ನ ಮೊದಲ ಆದ್ಯತೆಯಾಗಿದೆ. ವಿಶ್ವದ ನಂ.1 ಎನಿಸಿಕೊಳ್ಳುವುದಕ್ಕಿಂತ ಪದಕ ಜಯಿಸುವುದು ಅತ್ಯಂತ ಮುಖ್ಯ. ಫಿಟ್ ಆಗಿರುವುದು ವರ್ಷದ ಮೊದಲ ಗುರಿಯಾಗಿದೆ’’ ಎಂದು ಶ್ರೀಕಾಂತ್ ಹೇಳಿದ್ದಾರೆ.

 ಆಂಧ್ರಪ್ರದೇಶದ ರಾವುಲಪಾಲೆಂ ಎಂಬ ಸಣ್ಣ ಪಟ್ಟಣದಲ್ಲಿ ಜಯಿಸಿದ್ದ ಶ್ರೀಕಾಂತ್ ಸಹೋದರ, ಭಾರತದ ಡಬಲ್ಸ್ ಆಟಗಾರ ನಂದಗೋಪಾಲ್ ಹೆಜ್ಜೆಯನ್ನು ಅನುಸರಿಸಿದರು. ಸಹೋದರ ನಂದಗೋಪಾಲ್‌ರೊಂದಿಗೆ ಗೋಪಿಚಂದ್ ಅಕಾಡಮಿಯಲ್ಲಿ ತರಬೇತಿ ನಡೆಸಿದರು. ಚೀನಾದ ಫುಜೌನಲ್ಲಿ ನಡೆದ ಸೂಪರ್ ಸರಣಿ ಪ್ರೀಮಿಯರ್ ಫೈನಲ್‌ನಲ್ಲಿ 5 ಬಾರಿಯ ವಿಶ್ವ ಚಾಂಪಿಯನ್ ಹಾಗೂ 2 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್‌ರನ್ನು ಮಣಿಸಿ ಪುರುಷರ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡರು. ಇದು ಅವರ ವೃತ್ತಿಜೀವನಕ್ಕೆ ತಿರುವು ನೀಡಿತು. ಆ ಬಳಿಕ ಶ್ರೀಕಾಂತ್ ಇಂಡಿಯನ್ ಸೂಪರ್ ಸರಣಿ ಹಾಗೂ ಸ್ವಿಸ್ ಓಪನ್ ಜಿಪಿ ಗೋಲ್ಡ್ ಜಯಿಸುವ ಮೂಲಕ ವಿಶ್ವದ ನಂ.3ನೇ ಆಟಗಾರ ಎನಿಸಿಕೊಂಡರು. ಸೈಯದ್ ಮೋದಿ ಜಿಪಿ ಗೋಲ್ಡ್ ಪ್ರಶಸ್ತಿ ಜಯಿಸಿದ ಶ್ರೀಕಾಂತ್ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಲಿನ್ ಡಾನ್‌ಗೆ ಶರಣಾಗಿ ಪದಕ ವಂಚಿತರಾದರು. ಮಂಡಿ ನೋವು ಕಾಣಿಸಿಕೊಂಡು ದೀರ್ಘಕಾಲ ಬ್ಯಾಡ್ಮಿಂಟನ್‌ನಿಂದ ಹೊರಗುಳಿದರು.

2017ರಲ್ಲಿ ಇಂಡೋನೇಷ್ಯಾ, ಆಸ್ಟ್ರೇಲಿಯ, ಡೆನ್ಮಾರ್ಕ್ ಹಾಗೂ ಫ್ರಾನ್ಸ್ ಓಪನ್ ಜಯಿಸಿ ಕ್ರೀಡಾ ಲೋಕದಲ್ಲಿ ಮಿಂಚಿದರು. ಗ್ಲಾಸ್ಗೊ ವರ್ಲ್ಡ್‌ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಎಡವಿದರು.

ಮತ್ತೊಮ್ಮೆ ಗಾಯದ ಸಮಸ್ಯೆಗೆ ಸಿಲುಕಿ ಚೀನಾ ಓಪನ್ ಹಾಗೂ ಹಾಂಕಾಂಗ್ ಓಪನ್‌ನಿಂದ ವಂಚಿತರಾದ ಶ್ರೀಕಾಂತ್ ದುಬೈ ಸೂಪರ್ ಸರಣಿಗೆ ವಾಪಾಸಾಗಿದ್ದರು. ಆದರೆ, ದುಬೈನಲ್ಲಿ ಒಂದೂ ಪಂದ್ಯ ಗೆಲ್ಲದೇ ನಿರಾಸೆಗೊಳಿಸಿದರು.

ಇತ್ತೀಚೆಗೆ ಕೊನೆಗೊಂಡಿರುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೀಕಾಂತ್ ಮತ್ತೊಮ್ಮೆ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದರು.

ಪ್ರಮುಖ ಹಂತದಲ್ಲಿ ಗಾಯದ ಸಮಸ್ಯೆ ಎದುರಿಸುತ್ತಿರುವ ಶ್ರೀಕಾಂತ್ ಇದರಿಂದ ಪಾರಾದರೆ ಭಾರತ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ವರ್ಲ್ಡ್, ಏಷ್ಯನ್ ಗೇಮ್ಸ್ ಹಾಗೂ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಮೊದಲು ಇದೊಂದು ದೊಡ್ಡ ಹೆಜ್ಜೆ ಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News